ಪ್ರಬಂಧ ಮಂಡನೆ, ಸಂವಾದ
ಮೈಸೂರು

ಪ್ರಬಂಧ ಮಂಡನೆ, ಸಂವಾದ

March 25, 2019

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಭಾಷಾ ಪ್ರಯೋಗಾಲಯದಲ್ಲಿ ಸೋಮವಾರ ನಡೆದ ಪ್ರಬಂಧ ಮಂಡನೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಎರಡು ವಿಷಯಗಳನ್ನು ಕುರಿತಂತೆ ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.

`ಕಟ್ಟುತ್ತೇವ ನಾವು ಕಟ್ಟುತೇವ’ ಕವಿತೆ ಕುರಿತು ಪ್ರಬಂಧ ಮಂಡಿಸಿದ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ಟಿ.ಎನ್.ಪುಟ್ಟರಾಜು, ಬಾಬರಿ ಮಸೀದಿ ಧ್ವಂಸಗೊಳಿಸಿದ ಘಟನೆ ವೇಳೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವೆ ಸಂಘರ್ಷ ಉಂಟಾಗಿತ್ತು. ಆಗ ಒಡೆದ ಮನಸ್ಸುಗಳನ್ನು ಕಟ್ಟುವ ಆಶಯದೊಂದಿಗೆ ಸತೀಶ್ ಕುಲಕರ್ಣಿ ಅವರಿಂದ `ಕಟ್ಟುತ್ತೇವ ನಾವು ಕಟ್ಟುತೇವ’ ಕವಿತೆ ರಚನೆಯಾಯಿತು ಎಂದರು.

ಜಾತಿ ಪದ್ಧತಿ, ಮೂಢನಂಬಿಕೆ ಸೇರಿದಂತೆ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ತೊಡೆದು ನವ ಸಮಾಜ ನಿರ್ಮಾಣ ಮಾಡುವ ಉತ್ಸುಕತೆಯನ್ನು ಈ ಕವಿತೆಯಲ್ಲಿ ಕಾಣಬಹುದು. ಮಾನವೀಯ ಮೌಲ್ಯಗಳನ್ನು ಬಿತ್ತುವ ಒತ್ತಾಸೆಯನ್ನು ಈ ಕವಿತೆ ಅನಾವರಣಗೊಳಿಸಿದೆ ಎಂದು ಹೇಳಿದರು. `ಹಳೇಬೀಡಿನ ವೀರಗಲ್ಲುಗಳು ಮತ್ತು ಮಾಸ್ತಿಗಲ್ಲುಗಳು’ ಕುರಿತು ಪ್ರಬಂಧ ಮಂಡಿಸಿದ ಸಂಶೋಧನಾ ವಿದ್ಯಾರ್ಥಿನಿ ಎಂ.ಯೋಗೇಶ್ವರಿ, ಶಾಸನಗಳ ಅಧ್ಯಯನ ಇತಿಹಾಸ ರಚನೆಗೆ ಮಹತ್ವ ಆಕಾರಗಳು. ವೀರಗಲ್ಲುಗಳು ಹಾಗೂ ಮಾಸ್ತಿಗಲ್ಲುಗಳಲ್ಲಿ ಮೂರು ವಿಧಗಳಿದ್ದು, ಎಲ್ಲಾ ವೀರಗಲ್ಲು ಗಳಲ್ಲಿ ಶಾಸನ ಇರುತ್ತದೆ ಎಂದು ಹೇಳಲಾಗದು. ಈಗಾಗಲೇ ದೊರೆತಿರುವ ಬಹುತೇಕ ವೀರಗಲ್ಲುಗಳಲ್ಲಿ ಶಾಸನ ಇಲ್ಲದೆ ಇರುವುದನ್ನು ಕಾಣಬಹುದು. ಹೊಯ್ಸಳರ ಕಾಲದಲ್ಲಿ ಗರುಡಗಲ್ಲುಗಳಿಗೆ ವಿಶೇಷ ಆದ್ಯತೆ ನೀಡಲಾಗಿತ್ತು ಎಂದು ವಿವರಿಸಿದರು.

ಬಳಿಕ ಪ್ರಬಂಧಗಳಿಗೆ ಸಂಬಂಧಿಸಿದಂತೆ ಸಂವಾದ ನಡೆಯಿತು. ಪ್ರತಿ 15 ದಿನಗಳಿ ಗೊಮ್ಮೆ ಸಂಸ್ಥೆಯಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ಇಂದು 5ನೇ ಕಾರ್ಯಕ್ರಮ ನಡೆಯಿತು. ಅತಿಥಿಯಾಗಿ ಸಿಐಐಎಲ್‍ನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್.ದುರ್ಗಾದಾಸ್ ಪಾಲ್ಗೊಂಡಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್, ಪ್ರಾಧ್ಯಾಪಕಿ ಪ್ರೊ.ವಿಜಯ ಕುಮಾರಿ ಎಸ್.ಕರಿಕಲ್ ಸೇರಿದಂತೆ ಸಂಸ್ಥೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Translate »