ಇಂದು ಗೋಣ ಕೊಪ್ಪದಲ್ಲಿ ರಾಹುಲ್ ಗಾಂಧಿ ಪ್ರಚಾರ
ಕೊಡಗು

ಇಂದು ಗೋಣ ಕೊಪ್ಪದಲ್ಲಿ ರಾಹುಲ್ ಗಾಂಧಿ ಪ್ರಚಾರ

April 27, 2018

ಗೋಣ ಕೊಪ್ಪಲು: ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷ ಗೋಣ ಕೊಪ್ಪ ನಗರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಕಾಂಗ್ರೆಸ್‍ನ ನಾಯಕರು ರಾಹುಲ್ ಅದ್ಧೂರಿ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

ಮೊಟ್ಟಮೊದಲ ಬಾರಿಗೆ ಕೊಡಗು ಜಿಲ್ಲೆಯ ಗೋಣ ಕೊಪ್ಪಲುವಿಗೆ ರಾಹುಲ್‍ಗಾಂಧಿಯವರು ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಸ್ಥಳೀಯ ಕಾವೇರಿ ಕಾಲೇಜು ಆವರಣದಿಂದ ಬಹಿರಂಗ ಸಭೆಯ ವೇದಿಕೆಯ ವರೆಗೂ ಡಿ ಜೋನ್ ನಿರ್ಮಾಣ ಮಾಡಲಾಗಿದೆ.

ಬೃಹತ್ ವೇದಿಕೆ ನಿರ್ಮಾಣಗೊಂಡಿದ್ದು, 8 ಸಾವಿರ ಆಸನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 60 ಮಂದಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರುಗಳು ಕುಳಿತುಕೊಳ್ಳುವ ವಿಶೇಷ ವೇದಿಕೆ ನಿರ್ಮಾಣಗೊಂಡಿದೆ.

ಕಾರ್ಯಕ್ರಮ ತಡವಾಗುವ ಹಿನ್ನಲೆಯಲ್ಲಿ ವೇದಿಕೆಯಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮಳೆಯ ಮುನ್ಸೂಚನೆ ಹಿನ್ನಲೆಯಲ್ಲಿ ಸಾರ್ವ ಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ವಾಟರ್ ಪ್ರೂಫ್ ಶೀಟ್ ಅನ್ನು ಅಳವಡಿಸಿ ವೇದಿಕೆ ನಿರ್ಮಾಣ ಮಾಡಲಾಗಿದೆ.

ಏ.27ರ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ರಾಹುಲ್‍ಗಾಂಧಿ ಗೋಣ ಕೊಪ್ಪಲುವಿನ ದಸರಾ ಮೈದಾನದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದು, ಕಾವೇರಿ ಕಾಲೇಜು ಮೈದಾನಕ್ಕೆ ವಿಶೇಷ ವಿಮಾನ ದಲ್ಲಿ ಆಗಮಿಸಲಿದ್ದಾರೆ. ಕಾಲೇಜು ಮೈದಾನದಲ್ಲಿ ಎರಡು ವಿಶೇಷ ಹೆಲಿಕ್ಯಾಪ್ಟರ್ ಇಳಿಯಲು ಹೆಲಿಪ್ಯಾಡ್ ನಿರ್ಮಾಣವಾಗಿದ್ದು, ಒಂದು ಹೆಲಿ ಕ್ಯಾಪ್ಟರ್‍ನಲ್ಲಿ ರಾಹುಲ್ ಗಾಂಧಿ ಆಗಮಿಸಲಿದ್ದು, ಮತ್ತೊಂದು ಹೆಲಿಕ್ಯಾಪ್ಟರ್‍ನಲ್ಲಿ ಭದ್ರತಾ ಸಿಬ್ಬಂದಿ ಗಳು ಆಗಮಿಸಲಿದ್ದಾರೆ.

ರಾಹುಲ್ ಗಾಂಧಿ ಆಗಮನದ ಹಿನ್ನಲೆಯಲ್ಲಿ ಎಸ್‍ಜಿಪಿ ತಂಡ ಈಗಾಗಲೇ ನಗರದಲ್ಲಿ ಮೊಖಂ ಹೂಡಿದ್ದು, ಬೆಳಿಗ್ಗೆಯಿಂದಲೇ ರಾಹುಲ್ ಗಾಂಧಿ ಪ್ರಚಾರ ಭಾಷಣ ಮಾಡುವ ವೇದಿಕೆಯನ್ನು ಸುಪರ್ಧಿಗೆ ತೆಗೆದುಕೊಳ್ಳಲಿದ್ದಾರೆ. ಪ್ರಚಾರ ಭಾಷಣ ಮಾಡುವ ವೇದಿಕೆಯಿಂದ ನೂರು ಮೀ. ದೂರ ದಲ್ಲಿ ಸಾರ್ವಜನಿಕರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮದವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಮಧ್ಯಾಹ್ನ ನಗರಕ್ಕೆ ಆಗಮಿಸಿದ ತರುವಾಯ ಮೊದಲಿಗೆ ಕಾಲೇಜು ಆವರಣದಲ್ಲಿರುವ ಕಾವೇರಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದು, ತದ ನಂತರ ಸಮೀಪದಲ್ಲಿರುವ ವೀರ ಸೇನಾನಿಗಳಾದ ಜನರಲ್ ಕಾರ್ಯಪ್ದ ಹಾಗೂ ಜನರಲ್ ತಿಮ್ಮಯ್ಯ ನವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮಾಡಲಿದ್ದಾರೆ. ನಂತರ ತೆರೆದ ವಾಹನದಲ್ಲಿ ಬಿಗಿ ಬಂದೋಬಸ್ತ್ ನಡುವೆ ನೇರವಾಗಿ ದಸರಾ ಮೈದಾನಕ್ಕೆ ಪ್ರವೇಶ ಮಾಡಲಿದ್ದಾರೆ.

ರಾಹುಲ್‍ಗಾಂಧಿ ಭೇಟಿ ಹಿನ್ನಲೆಯಲ್ಲಿ ದಸರಾ ಮೈದಾನಕ್ಕೆ ಮೈಸೂರಿನ ಐಜಿಪಿ ಹಾಗೂ ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಎಸ್‍ಜಿಪಿ ತಂಡ ಡಿವೈಎಸ್‍ಪಿ ಹಾಗೂ ಇತರ ಉನ್ನತ ಅಧಿಕಾರಿಗಳು ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಿದರು. ಚುನಾವಣಾ ಪ್ರಚಾರ ಭಾಷಣ ಮಾಡಲು ಆಗಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ 10ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಬಹುದೆಂದು ಪಕ್ಷದ ಜಿಲ್ಲಾಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ ಮಾಹಿತಿ ತಿಳಿಸಿದರು.

Translate »