ಪಾರಂಪರಿಕ ವಿನ್ಯಾಸಕ್ಕೆ ಧಕ್ಕೆ ಬಾರದಂತೆ ರೈಲು ನಿಲ್ದಾಣ ಅಭಿವೃದ್ಧಿ
ಮೈಸೂರು

ಪಾರಂಪರಿಕ ವಿನ್ಯಾಸಕ್ಕೆ ಧಕ್ಕೆ ಬಾರದಂತೆ ರೈಲು ನಿಲ್ದಾಣ ಅಭಿವೃದ್ಧಿ

June 1, 2019

ಮೈಸೂರು: ಪಾರಂಪರಿಕ ಸ್ವರೂಪಕ್ಕೆ ಧಕ್ಕೆ ಬಾರದಂತೆ ಮೈಸೂರು ರೈಲು ನಿಲ್ದಾಣ ಅಭಿವೃದ್ಧಿಪಡಿಸಲು ರೈಲ್ವೇ ಅಧಿಕಾರಿಗಳು ಸಮ್ಮತಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಾರಂಪರಿಕ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ರೈಲ್ವೇ ಅಧಿಕಾರಿಗಳು, ಪ್ರಯಾಣಿಕರ ಅನುಕೂಲಕ್ಕಾಗಿ ಸುರಕ್ಷತಾ ಕಾಮಗಾರಿ ಮಾಡುತ್ತಿದ್ದೇವೆ. ಪಾರಂಪರಿಕ ಕಟ್ಟಡದ ಮೂಲ ಸ್ವರೂಪವನ್ನು ಎಲ್ಲೂ ವಿರೂಪಗೊಳಿಸಿಲ್ಲ ಎಂದರು.

ಪಾರಂಪರಿಕ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿ ಕಾರಿ ಅಭಿರಾಂ ಜಿ. ಶಂಕರ್ ಅವರು ರೈಲ್ವೇ ನಿಲ್ದಾಣ ಹಾಗೂ ಡಿಆರ್‍ಎಂ ಪಾರಂಪರಿಕ ಕಟ್ಟಡಗಳಿಗೆ ಬಿಳಿ ಮತ್ತು ಐವರಿ ಬಣ್ಣವನ್ನು ಮಾತ್ರ ಬಳಿಯಬೇಕು, ಸುತ್ತಲಿನ ಕಾಂಪೌಂಡ್ ಗ್ರಿಲ್‍ಗಳಿಗೆ ಸಿಲ್ವರ್ ಕಲರ್ ಪೇಂಟ್ ಮಾಡಬೇಕು, ತೆಗೆದು ಹಾಕಿರುವ ಉಕ್ಕಿನ ಗ್ರಿಲ್‍ಗಳನ್ನು ರೈಲು ನಿಲ್ದಾಣದ ಆವರಣ ಹಾಗೂ ರೈಲ್ವೇ ಮ್ಯೂಸಿಯಂಗಳಲ್ಲಿ ಅಳವಡಿಸುವ ಮೂಲಕ ಈ ಹಿಂದಿನ ಪರಂಪರೆಯನ್ನು ಉಳಿಸಿ ಸಂರಕ್ಷಿಸ ಬೇಕೆಂದು ಸಲಹೆ ನೀಡಿದರು.

ಮೈಸೂರು ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಅಳ ವಡಿಸುತ್ತಿರುವ ಲಿಫ್ಟ್‍ನಿಂದಾಗಿ ಪಾರಂಪರಿಕ ಕಟ್ಟಡದ ಅಂದ ಹಾಳಾಗುತ್ತಿದೆ. ಪಾರಂಪರಿಕ ತಜ್ಞರ ಸಮಿತಿಯ ಆರ್ಕಿಟೆಕ್ಟ್ ಇಂಜಿನಿಯರ್‍ಗಳಿಂದ ವಿನ್ಯಾಸ ಪಡೆದು ಅದರಂತೆ ಕಾಮಗಾರಿ ಮುಂದುವರೆಸಿ ಎಂದು ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸರ್ಕಾರಿ ಅತಿಥಿ ಗೃಹದ ಉತ್ತರ ದ್ವಾರದ ಆರ್ಚ್, ದೊಡ್ಡ ಗಡಿಯಾರದ ರಿಪೇರಿ ಮತ್ತು ನವೀಕರಣ ವನ್ನು ಆರ್ಕಿಯಾಲಜಿ ಇಲಾಖೆ ಮತ್ತು ಪಾರಂಪರಿಕ ಸಮಿತಿ ನೀಡುವ ವಿನ್ಯಾಸದಂತೆ ಮಾಡಿ ಎಂದು ಪಾಲಿಕೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಮಾನಸಗಂಗೋತ್ರಿಯಲ್ಲಿರುವ ಜಯಲಕ್ಷ್ಮೀ ಮ್ಯಾನ್ ಷನ್ ನವೀಕರಣ ಹಾಗೂ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಕುರಿತಂತೆ ಮೈಸೂರು ವಿಶ್ವವಿದ್ಯಾನಿಲ ಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸಲಹೆ ಮಾರ್ಗದರ್ಶನ ನೀಡಲು ಸಭೆಯಲ್ಲಿ ತೀರ್ಮಾ ನಿಸಲಾಯಿತು. ಲಲಿತ ಮಹಲ್ ರಸ್ತೆಯ ಹೆಲಿಪ್ಯಾಡ್ ಬಳಿ ಇರುವ ಪಾರಂಪರಿಕ ಕಮಾನು ಗೇಟ್ ಶಿಥಿಲ ಗೊಂಡು ಸುತ್ತ ಗಿಡ, ಬಳ್ಳಿಗಳು ಬೆಳೆದಿರುವುದರಿಂದ ಸ್ವಚ್ಛಗೊಳಿಸಿ ರಿಪೇರಿ ಹಾಗೂ ನಿರ್ವಹಣೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹೇಶ್, ಮುಡಾ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುವರ್ಣ, ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರಾದ ಪ್ರೊ. ಎನ್.ಎಸ್.ರಂಗರಾಜ್, ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ, ಪಾರಂಪರಿಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹೆಚ್.ಪಿ. ಜನಾರ್ಧನ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು.

Translate »