ರಾಜಪಥ ರಸ್ತೆ ಬ್ಯಾರಿಕೇಡ್‍ಗೆ ಕಳಪೆ ಕಲ್ಲು ಬಳಕೆ ಆರೋಪ: ಡಿಸಿ ಆಫೀಸ್ ಬಳಿ ಏಕಾಂಗಿ ಪ್ರತಿಭಟನೆ
ಮೈಸೂರು

ರಾಜಪಥ ರಸ್ತೆ ಬ್ಯಾರಿಕೇಡ್‍ಗೆ ಕಳಪೆ ಕಲ್ಲು ಬಳಕೆ ಆರೋಪ: ಡಿಸಿ ಆಫೀಸ್ ಬಳಿ ಏಕಾಂಗಿ ಪ್ರತಿಭಟನೆ

June 23, 2018

ಮೈಸೂರು:  ರಾಜಪಥದ ರಸ್ತೆಯ ಇಕ್ಕೆಲಗಳ ಬ್ಯಾರಿಕೇಡ್‍ಗೆ ಕಳಪೆ ಕಲ್ಲು ಬಳಸಲಾಗಿದೆ ಎಂದು ಆರೋಪಿಸಿ ಎಲೆಕ್ಟ್ರಿಕಲ್ ನಾಗರಾಜು ಎಂಬುವರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು ಏಕಾಂಗಿ ಪ್ರತಿಭಟನೆ ನಡೆಸಿದರು.

ರಾಜಪಥದ ಹೆಸರಲ್ಲಿ ಕಳಪೆ ಕಲ್ಲಿನಿಂದ ತಡೆಗೋಡೆ ನಿರ್ಮಿಸಿರುವುದಲ್ಲದೆ, ಫುಟ್‍ಪಾತ್‍ಗೆ ಕಡಿಮೆ ಗುಣಮಟ್ಟದ ಟೈಲ್ಸ್‍ಗಳನ್ನು ಹಾಕಿರುವುದರಿಂದ ಮೂರೇ ವರ್ಷಕ್ಕೆ ಅಲ್ಲಲ್ಲಿ ಕಲ್ಲಿನ ಬ್ಯಾರಿಕೇಡ್‍ಗಳು ಮುರಿದು ಬಿದ್ದಿದ್ದು, ಪಾದಚಾರಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ಓಡಾಡಲು ತೊಂದರೆಯಾಗುತ್ತಿದೆ ಎಂದು ನಾಗರಾಜು ಆರೋ ಪಿಸಿದರು. ಕಾಮಗಾರಿ ಹೆಸರಲ್ಲಿ ಸಾರ್ವಜನಿಕ ತೆರಿಗೆ ಹಣ ದುರುಪಯೋಗವಾಗಿದೆ. ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಆಗಮಿಸುವ ಮೈಸೂರು ನಗರದ ಬಗ್ಗೆ ಕೀಳರಿಮೆ ಬರುವುದರಿಂದ ಕಾಮಗಾರಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ಅವರಿಂದಲೇ ಮತ್ತೆ ರಾಜ ಪಥದ ಗುಣಾತ್ಮಕ ಬ್ಯಾರಿಕೇಡ್‍ಗಳನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಿದ ನಾಗರಾಜು, ಇನ್ನು ಮುಂದೆ ಸಾಂಸ್ಕøತಿಕ ನಗರಿಯಲ್ಲಿ ಯಾವುದೇ ಸಾರ್ವಜನಿಕ ಸೌಲಭ್ಯದ ಕೆಲಸ ಮಾಡುವಾಗ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಒತ್ತಾಯಿಸಿದರು.

Translate »