ರೇಸ್‍ಕೋರ್ಸ್ ಸ್ಥಳಾಂತರ ಪ್ರಸ್ತಾಪಕ್ಕೆ ಸ್ವಾಗತ
ಮೈಸೂರು

ರೇಸ್‍ಕೋರ್ಸ್ ಸ್ಥಳಾಂತರ ಪ್ರಸ್ತಾಪಕ್ಕೆ ಸ್ವಾಗತ

June 23, 2018

ಮೈಸೂರು: ರೇಸ್ ಕೋರ್ಸ್ ಸ್ಥಳಾಂತರಿಸಿ ಅಲ್ಲಿ ಬಟಾನಿಕಲ್ ಗಾರ್ಡನ್ ನಿರ್ಮಿಸಬೇಕೆನ್ನುವ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಪ್ರಸ್ತಾಪ ಸೂಕ್ತವಾಗಿದ್ದು, ಇದನ್ನು ಕರ್ನಾಟಕ ಕನ್ನಡ ವೇದಿಕೆ ಸ್ವಾಗತಿಸುತ್ತದೆ ಎಂದು ವೇದಿಕೆ ಅಧ್ಯಕ್ಷ ಸುರೇಶ್‍ಬಾಬು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ರೇಸ್ ಕೋರ್ಸ್ ಸ್ಥಳಾಂತರ ಸೂಕ್ತವಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಹಿಂದೆಯೂ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಲಾಟರಿ ಮತ್ತು ಸಾರಾಯಿ ನಿಷೇಧ ಮಾಡಿದ್ದರು. ಅದೇ ರೀತಿ ರೇಸ್ ಕೋರ್ಸ್ ವ್ಯವಸ್ಥೆಗೆ ನಿಷೇಧ ತರುವಂತಹ ಮಹತ್ವದ ನಿಲುವನ್ನು ಸರ್ಕಾರ ತಾಳಬೇಕು ಎಂದು ಕೋರಿದರು.

ರೇಸ್ ಕೋರ್ಸ್ ಪ್ರದೇಶ ಸರ್ಕಾರದ ಸ್ವತ್ತಾಗಿದ್ದು, ಇದನ್ನು ಭೋಗ್ಯಕ್ಕೆ ಪಡೆದಿರುವ ರೇಸ್ ಕೋರ್ಸ್‍ನವರು, ಗಾಲ್ಫ್ ಕ್ಲಬ್‍ಗೆ ಒಳಗುತ್ತಿಗೆಯನ್ನು ನೀಡುವ ಮೂಲಕ ಭೋಗ್ಯದ ಕರಾರನ್ನು ಉಲ್ಲಂಘನೆ ಮಾಡಿದ್ದಾರೆ. ಜೊತೆಗೆ ಸರ್ಕಾರಕ್ಕೆ ಸಂದಾಯವಾಗಬೇಕಾದ ತೆರಿಗೆ ಹಾಗೂ ಭೋಗ್ಯದ ಶುಲ್ಕದಲ್ಲೂ ರೇಸ್ ಕೋರ್ಸ್ ಅಕ್ರಮ ಎಸಗಿದೆ. ಇದರ ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವೇದಿಕೆ ಗೌರವಾಧ್ಯಕ್ಷ ಹಾಗೂ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಭಾನು ಮೋಹನ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »