ನಿವೃತ್ತ ಪೊಲೀಸ್ ಅಧಿಕಾರಿಗಳು,  ಸಿಬ್ಬಂದಿಗೆ ‘ಆರೋಗ್ಯ ಭಾಗ್ಯ’ ಯೋಜನೆ
ಮೈಸೂರು

ನಿವೃತ್ತ ಪೊಲೀಸ್ ಅಧಿಕಾರಿಗಳು,  ಸಿಬ್ಬಂದಿಗೆ ‘ಆರೋಗ್ಯ ಭಾಗ್ಯ’ ಯೋಜನೆ

June 23, 2018

ಮೈಸೂರು:  ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಾಜ್ಯ ಸರ್ಕಾರ ‘ಆರೋಗ್ಯ ಭಾಗ್ಯ ಯೋಜನೆ’ ರೂಪಿಸಿ 10 ಕೋಟಿ ರೂ. ಮಂಜೂರು ಮಾಡಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಮೈಸೂರು-ಚಾಮರಾಜನಗರ ಘಟಕದ ಅಧ್ಯಕ್ಷ ಎಂ.ಸಿ.ಮರಿಸ್ವಾಮಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಜ್ಯದಲ್ಲಿ ತಾವು ನೆಲೆಸಿರುವ ಜಿಲ್ಲೆ ಮತ್ತು ನಗರದಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಸದಸ್ಯತ್ವ ಪಡೆದು, ಮಾಸಿಕ ವಂತಿಗೆ ಪಾವತಿ ಮಾಡುವ ಮೂಲಕ ಈ ಯೋಜನೆ ಬಳಸಿಕೊಳ್ಳಬಹುದು ಎಂದು ಹೇಳಿದರು.
ನಿವೃತ್ತ ಪೊಲೀಸ್ ಪೇದೆ (ಪಿಸಿ) 100 ರೂ., ನಿವೃತ್ತ ಎಎಸ್‍ಐ ಮತ್ತು ಹೆಚ್‍ಸಿ 150 ರೂ., ನಿವೃತ್ತ ಪಿಐ ಮತ್ತು ಪಿಎಸ್‍ಐ 200 ರೂ. ಹಾಗೂ ನಿವೃತ್ತ ಡಿವೈಎಸ್‍ಪಿ ಮತ್ತು ಮೇಲ್ಪಟ್ಟ ಅಧಿಕಾರಿಗಳು 250 ರೂ.ಗಳ ಮಾಸಿಕ ವಂತಿಗೆ ಪಾವತಿ ಮಾಡುವ ಮೂಲಕ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು. ಮಾಸಿಕ ವಂತಿಗೆಯನ್ನು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಸಂಘದ ಖಾತೆಗೆ ಜಮಾ ಮಾಡಬೇಕು ಎಂದು ವಿವರಿಸಿದರು.

ಇದೇ 2018ರ ಜುಲೈನಿಂದ ಈ ಆರೋಗ್ಯ ಯೋಜನೆ ಜಾರಿಗೆ ಬರಲಿದ್ದು, ಮಾಸಿಕ ವಂತಿಗೆಯನ್ನು ಸದಸ್ಯರು 2018ರ ಏಪ್ರಿಲ್‍ನಿಂದ ಜೂನ್‍ವರೆಗೆ ಪಾವತಿ ಮಾಡಿರಬೇಕು. ಈ ಮೂರು ತಿಂಗಳ ವಂತಿಗೆಯನ್ನು ಒಮ್ಮೆಲೇ ಕಟ್ಟಲು ಅವಕಾಶವಿದೆ. ಈ ವೈದ್ಯಕೀಯ ಸೇವೆ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಯ ಪತಿ ಮತ್ತು ಪತ್ನಿಗೆ ಮಾತ್ರ ಸೀಮಿತವಾಗಿರುತ್ತದೆ. ಚಿಕಿತ್ಸೆಗಾಗಿ ಲಕ್ಷ ರೂ.ವರೆಗೆ ಹಾಗೂ ಶಸ್ತ್ರಚಿಕಿತ್ಸೆಗೆ 2 ಲಕ್ಷ ರೂ.ವರೆಗೆ ಈ ಯೋಜನೆಯಡಿ ಆರೋಗ್ಯ ಸೇವೆ ಪಡೆಯಬಹುದು. ಹೆಚ್ಚಿನ ಮಾಹಿತಿ ಮತ್ತು ಸದಸ್ಯತ್ವಕ್ಕೆ ಮೈಸೂರಿನ ನಜರ್‍ಬಾದ್ ಪೊಲೀಸ್ ಠಾಣೆ ಆವರಣದಲ್ಲಿರುವ ಸಂಘಕ್ಕೆ ಭೇಟಿ ನೀಡಬಹುದು ಎಂದು ವಿವರಿಸಿದರು.

ಸಂಘದ ಉಪಾಧ್ಯಕ್ಷ ಚಿಕ್ಕಮಾದಪ್ಪ, ಕಾರ್ಯದರ್ಶಿ ಶಿವಕುಮಾರಸ್ವಾಮಿ, ಖಜಾಂಚಿ ಆಲನಹಳ್ಳಿ ಎಂ.ರಾಜು, ಪದಾಧಿಕಾರಿಗಳಾದ ಕೆ.ಪಟ್ಟಾಭಿರಾಮ್, ನಾರಾಯಣಸ್ವಾಮಿ, ಪ್ರಭುಸ್ವಾಮಿ, ನಾಗಪ್ರಕಾಶ್ ಗೋಷ್ಠಿಯಲ್ಲಿದ್ದರು.

Translate »