ಶಾಸಕ ರಾಮದಾಸ್‍ರಿಂದ ಪಾದಯಾತ್ರೆ ಶ್ರೀರಾಮಪುರದಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ ಭರವಸೆ
ಮೈಸೂರು

ಶಾಸಕ ರಾಮದಾಸ್‍ರಿಂದ ಪಾದಯಾತ್ರೆ ಶ್ರೀರಾಮಪುರದಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ ಭರವಸೆ

June 23, 2018

ಮೈಸೂರು: ಮೈಸೂರಿನ ಕೆ.ಆರ್. ಕ್ಷೇತ್ರ ವ್ಯಾಪ್ತಿಯ ಪಾಲಿಕೆ 13ನೇ ವಾರ್ಡ್‍ನಲ್ಲಿ ಶುಕ್ರವಾರ ಶಾಸಕ ಎಸ್.ಎ.ರಾಮದಾಸ್, ಪಾದಯಾತ್ರೆ ನಡೆಸಿ ಸ್ಥಳೀಯರ ಅಹವಾಲು ಆಲಿಸಿದರಲ್ಲದೆ, ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಪಾದಯಾತ್ರೆ ಆರಂಭಿಸಿದ ಎಸ್.ಎ.ರಾಮದಾಸ್ ಅವರು 13ನೇ ವಾರ್ಡ್ ವ್ಯಾಪ್ತಿಗೆ ಬರುವ ಶ್ರೀರಾಮಪುರ ಬಡಾವಣೆಯಲ್ಲೂ ಅಹವಾಲು ಆಲಿಸಿದರು. ಈ ವೇಳೆ ರಸ್ತೆ, ಚರಂಡಿ, ಒಳಚರಂಡಿ, ಬೀದಿದೀಪ, ಕುಡಿಯುವ ನೀರಿನ ಅಸಮರ್ಪಕ ನಿರ್ವಹಣೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವು ದೂರುಗಳು ಸಲ್ಲಿಕೆಯಾದವು. ಸ್ಥಳೀಯ ನಿವಾಸಿಗಳು ನೀಡಿದ ಎಲ್ಲಾ ದೂರುಗಳಿಗೆ ಶೀಘ್ರದಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ರಾಮದಾಸ್ ಮಾತನಾಡಿ, ಈ ವಿಧಾನಸಭಾ ಚುನಾವಣೆಯಲ್ಲಿ ನನಗೆ ಅತೀ ಹೆಚ್ಚು ಮತ ಕೊಟ್ಟಂತಹ ವಾರ್ಡಿನಿಂದ ಪಾದ ಯಾತ್ರೆ ಆರಂಭಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದೆ. ಅಂದು ನೀಡಿದ್ದ ಭರವಸೆಯಂತೆಯೇ ಅತೀ ಹೆಚ್ಚು ಮತಗಳ ಲೀಡ್ ನೀಡಿದ 13ನೇ ವಾರ್ಡ್‍ನಿಂದ ಪಾದಯಾತ್ರೆ ಆರಂಭಿಸಿದ್ದೇನೆ. ಶ್ರೀರಾಂಪುರದ ಶೇಕಡಾ 75 ರಷ್ಟು ಮಂದಿ ನನಗೆ ಮತ ಚಲಾಯಿಸಿದ್ದು, ಈ ಭಾಗದ ನಿವಾಸಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ನಿವಾರಿಸುವುದಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಕೆ.ಆರ್.ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪ್ರತಿ ವಾರ್ಡಿನಲ್ಲಿಯೂ ಒಂದು ಆಟದ ಮೈದಾನ ಹಾಗೂ ಯೋಗ ಕೇಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೇನೆ. ಶ್ರೀರಾಮಪುರದಲ್ಲಿ ಕಾನೂನಾತ್ಮಕವಾದ ಕೆಲ ಸಮಸ್ಯೆಗಳಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಭಾಗದಲ್ಲಿ ಖಾಸಗಿ ಬಡಾವಣೆಗಳಿವೆ. ಇವುಗಳು ಇನ್ನು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನಿರ್ವಹಣೆಗೆ ಸಂಬಂಧಿಸಿದಂತೆ ಕೆಲವು ತೊಡಕುಗಳಿವೆ. ಹಾಗಾಗಿ ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ. ಬೀದಿ ದೀಪ ನಿರ್ವಹಣೆ, ರಸ್ತೆ ಕಾಮಗಾರಿ, ಕುಡಿಯುವ ನೀರಿನ ಸರಬರಾಜು ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಾಗಾಗಿ ಬಡಾವಣೆಯನ್ನು ಪಾಲಿಕೆ ವ್ಯಾಪ್ತಿಗೆ ತರುವುದಕ್ಕಾಗಿ ಶೀಘ್ರವೇ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ ಎಂದರು.

ಮುಡಾ ವ್ಯಾಪ್ತಿಯ ಎಂ.ಡಿ.ಸಿ.ಸಿ ಬಡಾವಣೆ, ಅನ್ನಪೂರ್ಣ ಬಡಾವಣೆ, ಕಂದಾಯ ಬಡಾವಣೆ, ಭಾರತ್ ಬಡಾವಣೆ ಇನ್ನಿತರೆ ಖಾಸಗಿ ಬಡಾವಣೆಯಲ್ಲಿರುವ ನಿವಾಸಿಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಲ್ಲದೆ ಇರುವುದು ಗಮನಕ್ಕೆ ಬಂದಿದೆ. ಸುಮಾರು 8 ಖಾಸಗಿ ಬಡಾವಣೆಗಳ ನಕ್ಷೆಯನ್ನು ತಯಾರಿಸಲು ಸೂಚಿಸಲಾಗಿದೆ. ಹೊಸ ಬಡಾವಣೆಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವುದು, ಕಬಿನಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಒಳ ಚರಂಡಿಗೆ ಪೈಪ್‍ಲೈನ್ ಅಳವಡಿಕೆಗೂ ಆದೇಶಿಸಲಾಗಿದೆ ಎಂದರು.

ಈ ಭಾಗದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ಇದನ್ನು ಗುರುತಿಸಲಾಗಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಚರಂಡಿ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರಲ್ಲದೆ, ಶೀಘ್ರದಲ್ಲಿಯೇ ಆದ್ಯತೆ ಅನುಸಾರ ಶ್ರೀರಾಮಪುರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಮಾಜಿ ಸದಸ್ಯೆ ಎಂ.ವಿ. ವಿದ್ಯಾ ಅರಸ್, ಪಾಲಿಕೆ ಸದಸ್ಯ ಜಗದೀಶ್, ಜಯಂತಿ, ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »