3 ದಿನದ ಹಿಂದಷ್ಟೇ ಕರ್ತವ್ಯಕ್ಕೆ  ಸೇರಿದ್ದ ಕಾನ್‍ಸ್ಟೇಬಲ್ ಹೃದಯಾಘಾತದಿಂದ ಸಾವು
ಮೈಸೂರು

3 ದಿನದ ಹಿಂದಷ್ಟೇ ಕರ್ತವ್ಯಕ್ಕೆ ಸೇರಿದ್ದ ಕಾನ್‍ಸ್ಟೇಬಲ್ ಹೃದಯಾಘಾತದಿಂದ ಸಾವು

March 15, 2021

ಸೈನ್ಯದಲ್ಲಿ ಸೇವೆ ಮುಗಿಸಿದ ಬಳಿಕ ಪೊಲೀಸ್ ಇಲಾಖೆಗೆ ಸೇರಿದ್ದ ವಾಸು

ಮೈಸೂರು, ಮಾ.14(ಆರ್‍ಕೆ)- ಮೂರು ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದ ಪೊಲೀಸ್ ಕಾನ್‍ಸ್ಟೇಬಲ್ ತೀವ್ರ ಹೃದಯಾ ಘಾತದಿಂದ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.

ಮೈಸೂರಿನ ರಾಘವೇಂದ್ರ ನಗರ ನಿವಾಸಿ ವಾಸು(43) ಸಾವನ್ನಪ್ಪಿದವರು. ಇಂದು ಬೆಳಿಗ್ಗೆ 7 ಗಂಟೆ ವೇಳೆ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಕಾವೇರಿ ಆಸ್ಪತ್ರೆಗೆ ಕರೆ ದೊಯ್ದು ಚಿಕಿತ್ಸೆ ಕೊಡಿಸಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಜೆಎಸ್‍ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಬೆಳಿಗ್ಗೆ 9 ಗಂಟೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯು ಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಿದ ನಂತರ ಕಾನ್‍ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದ ವಾಸು, ಧಾರವಾಡದಲ್ಲಿ ಒಂದು ವರ್ಷಕಾಲ ಭುನಾದಿ ತರಬೇತಿ ಪಡೆದು ಮೈಸೂರಿನ ಅಶೋಕಪುರಂ ಠಾಣೆಗೆ ನಿಯೋಜನೆಗೊಂಡಿದ್ದರು. ಮಾರ್ಚ್ 12ರಂದು ಬೆಳಿಗ್ಗೆ ಠಾಣೆಗೆ ಬಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು. ಎರಡು ದಿನ ಮಾತ್ರ ನಮ್ಮಲ್ಲಿ ಕೆಲಸ ಮಾಡಿದ್ದ ವಾಸು, ಭಾನುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅಶೋಕಪುರಂ ಠಾಣೆ ಇನ್‍ಸ್ಪೆಕ್ಟರ್ ಪ್ರಕಾಶ್ ತಿಳಿಸಿದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Translate »