ರಾಮನವಮಿ: ರಾಮರಸ ಕುಡಿದು ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಹಾಸನ

ರಾಮನವಮಿ: ರಾಮರಸ ಕುಡಿದು ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ

April 14, 2019

ಹಾಸನ: ರಾಮರಸ ಕುಡಿದು 100ಕ್ಕೂ ಹೆಚ್ಚುಮಂದಿ ಅಸ್ವಸ್ಥರಾಗಿದ್ದು, ಅವರಲ್ಲಿ 9 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿರುವ ಘಟನೆ ನಡೆದಿದೆ.

ತಾಲೂಕಿನ ಕಸಬಾ ಹೋಬಳಿಯ ನಂಜದೇವರ ಕಾವಲು ಗ್ರಾಮದಲ್ಲಿ ಶನಿವಾರ ಶ್ರೀರಾಮನವಮಿ ಅಂಗವಾಗಿ ರಾಮರಸವನ್ನು ವಿತರಿಸಲಾಯಿತು. ಇದನ್ನು ಸೇವಿಸಿದ 100ಕ್ಕೂ ಹೆಚ್ಚು ಮಂದಿ ಸುಸ್ತು, ವಾಂತಿಯಿಂದ ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಗ್ರಾಮದ ಲೋಕೇಶ್ (38), ಮಂಜೇಗೌಡ (50), ಶಂಕರಗೌಡ (55), ರಂಗಸ್ವಾಮಿ (26), ನವೀನ್ (28), ಪವನ್ (18) ಸೇರಿದಂತೆ ಒಟ್ಟು 9 ಜನರ ತೀವ್ರ ಅಸ್ವಸ್ಥಗೊಂಡು ಹೆಚ್ಚಿನ ಚಿಕಿತ್ಸೆಗೆ ಅವರನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಆರೋಗ್ಯವಾಗಿದ್ದು, ಯಾವುದೇ ಅಪಾಯವಾಗುವ ಆತಂಕವಿಲ್ಲ. ರಾಮರಸವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಶಸಸ್ತ್ರ ಚಿಕಿತ್ಸಕ ಡಾ.ಶಂಕರ್ ತಿಳಿಸಿದ್ದಾರೆ.

Translate »