ಹೆಚ್.ಡಿ.ಕೋಟೆ: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಭೇಟಿ ನೀಡಿ, ಪರಿಶೀಲಿಸಿದರಲ್ಲದೆ, 2 ಕೋಟಿ. ರೂ. ಹಣ ಬಿಡುಗಡೆಗೊಳಿಸಿರುವ ಸರ್ಕಾರದ ಆದೇಶದ ಪ್ರತಿಯನ್ನು ಸಂಸದ ಧ್ರುವನಾರಯಣ ಹಾಗೂ ಶಾಸಕ ಅನಿಲ್ ಚಿಕ್ಕಮಾದುಗೆ ವಿತರಿಸಿದರು.
ನಂತರ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ಸಂಸದರು, ಶಾಸಕರು ಹಾಗೂ ಪದಾಧಿಕಾರಿಗಳು ಭವನ ನಿರ್ಮಾಣದ ಅನುದಾನಕ್ಕೆ ನನಗೆ ಮನವಿ ಮಾಡಿದ್ದರು. ಆ ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆಯಲ್ಲಿ ಚರ್ಚೆ ಮಾಡಿ, ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡಿಸಿ ಆದೇಶ ಪ್ರತಿ ತಂದಿದ್ದೇನೆ ಎಂದರು.
ಅಂದಾಜು 5 ಕೋಟಿ ರೂ. ವೆಚ್ಚದ ವಾಲ್ಮೀಕಿ ಭವನ ನಿರ್ಮಾಣವಾಗುತ್ತಿದ್ದು, ಗುಣಮಟ್ಟದ ಕಾಮಗಾರಿ ಆಗಬೇಕು ಎಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಇದೇ ವೇಳೆ ಸೂಚನೆ ನೀಡುವುದರ ಜೊತೆಗೆ ಗುಣಮಟ್ಟದ ಕಾಮಗಾರಿ ಬಗ್ಗೆ ಸಮಾಜದ ಮುಖಂಡರು ಹೆಚ್ಚಿನ ಗಮನ ಹರಿಸಿ, ದಿವಂಗತ ಮಾಜಿ ಶಾಸಕ ಚಿಕ್ಕಮಾದು ಅವರ ಕನಸನ್ನು ನನಸು ಮಾಡಲು ನಾವೆಲ್ಲ ಒಗ್ಗೂಡಿ ನಿಲ್ಲಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಆರ್. ಧ್ರುವನಾರಾಯಣ್, ಶಾಸಕ ಅನಿಲ್ ಚಿಕ್ಕಮಾದು, ಸರಗೂರು ಹಾಗೂ ಕೋಟೆ ತಾಲೂಕು ನಾಯಕ ಸಂಘದ ಅಧ್ಯಕ್ಷರಾದ ಶಂಭುಲಿಂಗ ನಾಯಕ, ಪುರದ ಕಟ್ಟೆ ಬಸವರಾಜ್, ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡದ ಪ್ರಧಾನ ಕಾರ್ಯದರ್ಶಿ ಕ್ಯಾತನಹಳ್ಳಿ ನಾಗರಾಜ್, ತಾಪಂ ಸದಸ್ಯ ಅಂಕ ನಾಯಕ, ಬಿ.ಸಿ.ರಾಜು, ಪುರಸಭಾ ಸದಸ್ಯ ಪುಟ್ಟ ಬಸವ ನಾಯಕ, ಮುಖಂಡರಾದ ಎಂ.ಸಿ.ದೊಡ್ಡ ನಾಯಕ, ಸರಗೂರು ಶ್ರೀನಿವಾಸ್, ಜಿನ್ನಹಳ್ಳಿ ರಾಜನಾಯ್ಕ, ದಾಸ ನಾಯಕ, ಸಿದ್ದ ನಾಯಕ, ಆಗತೂರು ಅಂಕ ನಯಾಕ, ಬೆಟ್ಟ ನಾಯಕ, ವೇಣು ಮುಂತಾದವರಿದ್ದರು.