ಉಗ್ರರ ದಾಳಿಗೆ ತಕ್ಕ ಪ್ರತೀಕಾರ: ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಪ್ರಧಾನಿ ಮೋದಿ ಘೋಷಣೆ
ಮೈಸೂರು

ಉಗ್ರರ ದಾಳಿಗೆ ತಕ್ಕ ಪ್ರತೀಕಾರ: ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಪ್ರಧಾನಿ ಮೋದಿ ಘೋಷಣೆ

February 16, 2019

ನವದೆಹಲಿ: ಕಾಶ್ಮೀರದ ಪುಲ್ವಾಮಾದಲ್ಲಿ ನಮ್ಮ ವೀರ ಯೋಧರನ್ನು ಬಲಿತೆಗೆದು ಕೊಂಡ ಉಗ್ರರ ದಾಳಿಗೆ ಪ್ರತಿಯಾಗಿ ಕಾರ್ಯಾಚರಣೆ ನಡೆಸಲು ನಮ್ಮ ಭದ್ರತಾ ಪಡೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಸಂಪೂರ್ಣ ದೇಶೀ ನಿರ್ಮಿತ ಸ್ವಯಂಚಾಲಿತ ಅತಿವೇಗದ ರೈಲು, ದೆಹಲಿ-ವಾರಣಾಸಿ ನಡುವೆ ಸಂಚರಿಸುವ `ವಂದೇ ಭಾರತ’ ಎಕ್ಸ್ ಪ್ರೆಸ್‍ಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ವೀರಯೋಧರ ಬಲಿದಾನ, ದಾಳಿಗೆ ಕಾರಣರಾದವರಿಗೆ ತಕ್ಕ ಪಾಠ ಕಲಿಸುವ ಕುರಿತೇ ಹೆಚ್ಚು ಮಾತನಾಡಿದರು.

ನಮ್ಮ ವೀರ ಯೋಧರ ಧೈರ್ಯ, ಸಾಹಸಗಳ ಮೇಲೆ ನಮಗೆ ನಂಬಿಕೆಯಿದೆ. ಹಾಗಾಗಿ ಪುಲ್ವಾಮಾ ದಾಳಿಗೆ ಪ್ರತಿಯಾಗಿ ದಾಳಿ ನಡೆಸುವುದಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವುದಕ್ಕೆ ಸೇನೆಗೆ ಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದರು. ಪ್ರತಿದಾಳಿಯ ಕಾರ್ಯಸ್ವರೂಪ, ಕಾರ್ಯಾಚರಣೆಯ ವೈಖರಿ, ಪ್ರತೀಕಾರದ ಕ್ರಮ, ವಿಧಾನ ಎಲ್ಲ ವಿಚಾರದಲ್ಲಿಯೂ ನಿರ್ಧಾರ ತೆಗೆದುಕೊಳ್ಳಲು ನಮ್ಮ ಸೇನೆ ಸಮರ್ಥವಾಗಿದೆ ಎಂದರು. ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಜಗತ್ತಿನಿಂದ ಪೂರ್ಣ ದೂರ ಉಳಿದಿರುವ ನಮ್ಮ ನೆರೆಯ ದೇಶ ತನ್ನ ತಂತ್ರ ಮತ್ತು ಪಿತೂರಿಯಿಂದ ಭಾರತವನ್ನು ಅಸ್ಥಿರಗೊಳಿ ಸಬಹುದು ಎಂದು ಭಾವಿಸಿದರೆ ಅದು ಖಂಡಿತಾ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಎಚ್ಚರಿಸಿದರು. ಭಾರತದ ಭದ್ರತಾ ಪಡೆ ಯೋಧರ ಮೇಲೆ ದಾಳಿ ನಡೆಸಿದವರು, ಅದಕ್ಕೆ ನೆರವಾಗುತ್ತಿರುವವರು ಭಾರೀ ದೊಡ್ಡ ತಪ್ಪು ಮಾಡಿದ್ದಾರೆ, ಅದಕ್ಕೆ ತಕ್ಕ ಬೆಲೆಯನ್ನು ಅವರು ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಭಾರತ ನವಭಾರತ ಎಂಬುದನ್ನು ನೆರೆಯ ರಾಷ್ಟ್ರ ಮೆರೆತಂತಿದೆ. ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಭಿಕ್ಷೆ ಬೇಡುವಂತಾಗಿದೆ ಎಂಬ ಸುದ್ದಿ ಹರಡಿದ್ದು, ವಿಶ್ವದ ಯಾವುದೇ ರಾಷ್ಟ್ರಗಳ ನೆರವು ನೀಡಲು ಮುಂದೆ ಬರುತ್ತಿಲ್ಲ ಎಂದು ಟೀಕಿಸಿದ್ದಾರೆ.

ಉಗ್ರರ ದಾಳಿಯಿಂದ ವೀರಯೋಧರು ಹುತಾತ್ಮರಾಗಿದ್ದು ನೋಡಿ ನಿಮ್ಮ (ದೇಶ ವಾಸಿಗಳ) ರಕ್ತ ಕುದಿಯುತ್ತ್ತಿದೆ ಎಂದು ನನಗೆ ಗೊತ್ತಿದೆ. ಇದೊಂದು ಭಾವನಾತ್ಮಕ ಮತ್ತು ಸೂಕ್ಷ್ಮ ಸಮಯ. ಆಡಳಿತದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ ಈ ಸಂದರ್ಭದಲ್ಲಿ ನಾವು ರಾಜಕೀಯದಿಂದ ದೂರವುಳಿಯಬೇಕು. ದೇಶದ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು. ಪುಲ್ವಾಮಾ ಭಯೋತ್ಪಾದಕ ದಾಳಿ ಖಂಡಿಸಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ ಎಲ್ಲಾ ದೇಶಗಳಿಗೂ ಪ್ರಧಾನಿ ಧನ್ಯವಾದ ಹೇಳಿದರು. ಭಯೋತ್ಪಾದನೆಯನ್ನು ಹತ್ತಿಕ್ಕಲು ಎಲ್ಲರೂ ಒಗ್ಗಟ್ಟಿನಿಂದ ಹೋರಾ ಡೋಣ ಎಂದು ಕರೆ ನೀಡಿದರು. ಇದಕ್ಕೂ ಮುನ್ನ ನೆರೆದಿದ್ದ ಪ್ರಧಾನಿ ಸೇರಿದಂತೆ ಗಣ್ಯರು ನಿನ್ನೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ನೆನೆದು ಎರಡು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಿದರು.

ಹುತಾತ್ಮ ಯೋಧರ ಶವಪೆಟ್ಟಿಗೆಗೆ ಹೆಗಲು ಕೊಟ್ಟ ಗೃಹ ಸಚಿವ ರಾಜನಾಥ್ ಸಿಂಗ್
ಶ್ರೀನಗರ: ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಸಿಆರ್‍ಪಿಎಫ್ ಯೋಧರ ಪಾರ್ಥಿವ ಶರೀರ ವಿದ್ದ ಪೆಟ್ಟಿಗೆಗೆ ಕೇಂದ್ರ ಗೃಹ ಸಚಿವ ರಾಜ ನಾಥ್ ಸಿಂಗ್ ಹಾಗೂ ಡಿಜಿಪಿ ದಿಲ್ಬಾಗ್ ಸಿಂಗ್ ಬುದ್‍ಗಾವ್‍ನಲ್ಲಿ ಇಂದು ಹೆಗಲು ಕೊಟ್ಟರು. ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಮತ್ತು ಸೇನಾ ಉತ್ತರ ವಲಯದ ಕಮಾಂಡರ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ರಣ ಬೀರ್ ಸಿಂಗ್ ಅವರೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಯೋಧರ ಮೃತದೇಹಗಳನ್ನು ಸ್ವಗ್ರಾಮಗಳಿಗೆ ವಿಮಾನದ ಮೂಲಕ ರವಾನಿಸಲಾಯಿತು.

ಈ ವೇಳೆ ಸಿಆರ್‍ಪಿಎಫ್ ಶಿಬಿರದ ಬಳಿ ವೀರ ಜವಾನ್ ಅಮರ್ ರಹೇ ಘೋಷಣೆ ಗಳು ಮುಗಿಲುಮುಟ್ಟಿದವು. ಇದಕ್ಕೂ ಮುನ್ನ ಶವಪೆಟ್ಟಿಗೆಗಳಿಗೆ ತ್ರಿವರ್ಣ ಧ್ವಜ ಹೊದಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಯೋಧರ ಪಾರ್ಥಿವ ಶರೀರವನ್ನು ಶ್ರೀನಗರ ವಿಮಾನ ನಿಲ್ದಾಣಕ್ಕೆ ರವಾನಿಸಲು ಟ್ರಕ್‍ನಲ್ಲಿ ಇರಿಸುವವರೆಗೂ ಗಣ್ಯರು ನಿಶಬ್ಧವಾಗಿದ್ದರು. ನಂತರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸಿಆರ್‍ಪಿಎಫ್ ನಿರ್ದೇಶಕ ಆರ್.ಆರ್.ಭಟ್ನಾಗರ್ ಮತ್ತು ಹಿರಿಯ ಪೆÇಲೀಸ್ ಅಧಿಕಾರಿಗಳ ತಂಡ ಪರಿಸ್ಥಿತಿ ಪರಿಶೀಲಿಸÀಲು ಕಾಶ್ಮೀರಕ್ಕೆ ತೆರಳಿದರು. ಶ್ರೀನಗರದಲ್ಲಿ 92 ಬೇಸ್ ಆಸ್ಪತ್ರೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿದರು.

ಭದ್ರತಾ ಪಡೆಗಳು ಸಾಗುವಾಗ ಖಾಸಗಿ ವಾಹನ ಸಂಚಾರ ನಿರ್ಬಂಧ: ಭದ್ರತಾ ಪಡೆಗಳು ಸಂಚರಿಸುವ ವೇಳೆ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರಕಟಿಸಿದ್ದಾರೆ. ಶ್ರೀನಗರದಲ್ಲಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಹುತಾತ್ಮ ಯೋಧರ ಕುಟುಂಬ ದೊಂದಿಗೆ ನಾವು ಇದ್ದೇವೆ. ಅವರ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದೇನೆ ಎಂದರು. ಒಂದು ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಭದ್ರತಾ ಪಡೆಗಳು ಸಂಚರಿಸುತ್ತಿದ್ದರೆ, ಮುನ್ನಚ್ಚೆರಿಕೆ ಕ್ರಮವಾಗಿ ಸಾರ್ವಜನಿಕ ಸಂಚಾರಕ್ಕೆ ಕೆಲ ಸಮಯ ನಿರ್ಬಂಧ ವಿಧಿಸಲಾಗುವುದು ಎಂದು ಹೇಳಿದ್ದಾರೆ.

Translate »