ರಕ್ಷಕರಿಗೇ ರಕ್ಷಣೆ ಇಲ್ಲಾಂದ್ರೆ ಇನ್ಯಾರಿಗೆ ರಕ್ಷಣೆ ಇದೆ..!
ಮಂಡ್ಯ, ಮೈಸೂರು

ರಕ್ಷಕರಿಗೇ ರಕ್ಷಣೆ ಇಲ್ಲಾಂದ್ರೆ ಇನ್ಯಾರಿಗೆ ರಕ್ಷಣೆ ಇದೆ..!

February 16, 2019

ಮಂಡ್ಯ: ದೇಶ ಕಾಯೋ ರಕ್ಷಕರಿಗೇ ರಕ್ಷಣೆ ಇಲ್ಲಾಂದ್ರೆ ಇನ್ಯಾರಿಗೆ ರಕ್ಷಣೆ ಇದೆ, ನನ್ನ ಗಂಡನನ್ನು ಕೊಂದವರನ್ನು ಬ್ಲಾಸ್ಟ್ ಮಾಡಿ, ಯಾವುದೇ ಕಾರಣಕ್ಕೂ ಬಿಡಬೇಡಿ..!

ಜಮ್ಮು-ಕಾಶ್ಮೀರದ ಪುಲ್ವಾಮಾದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಹೆಚ್.ಗುರು ಅವರ ಪತ್ನಿ ಕಲಾವತಿ ಅವರ ಆಕ್ರೋಶದ ನುಡಿಗಳಿವು. ಪತಿಯನ್ನು ಕಳೆದುಕೊಂಡ ದುಃಖದ ನಡುವೆಯೇ ತನ್ನ ಪತಿ ಸಾವಿಗೆ ಪ್ರತೀಕಾರ ಸಾರಿದರು.

ನಾನು ಪ್ರತಿದಿನ ಅವರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದೆ. ಅವರು ನಿನ್ನೆ ಬೆಳಿಗ್ಗೆ 11 ಗಂಟೆಗೆ ಫೋನ್ ಮಾಡಿದ್ದರು. ನಾನು ಕೆಲಸ ಮಾಡು ತ್ತಿದ್ದರಿಂದ ಅವರ ಜೊತೆ ಮಾತನಾಡಲು ಸಾಧ್ಯವಾಗಿಲ್ಲ. ಅವರು ಊರಿಂದ ಹೋಗಿ 4 ದಿನವೂ ಆಗಿರಲಿಲ್ಲ. ಅಯ್ಯೋ ದೇವರೆ ನನಗ್ಯಾಕೆ ಈ ಶಿಕ್ಷೆ ಎಂದು ಕಲಾವತಿ ಕಣ್ಣೀರು ಸುರಿಸಿದರು. ಗುರುವಾರ ಒಂದು ದಿನ ಅವರ ಜೊತೆ ಮಾತನಾಡಿದ್ರೆ ಆಗುತ್ತಿತ್ತು. ನಾನು 6 ಗಂಟೆಯಿಂದ ಫೋನ್ ಮಾಡಿ ಮಾಡಿ ಸಾಕಾಯ್ತು. ನನಗೆ ಅವರು ಬೇಕು ಅಮ್ಮಾ ಎಂದು ತಾಯಿ ಮಡಿಲಲ್ಲಿ ಮಲಗಿದ್ದ ಕಲಾವತಿಯ ಆಕ್ರಂದನ ನೆರದಿದ್ದವರ ಕಣ್ಣಾಲಿಗಳಲ್ಲೂ ಕಂಬನಿ ಜಿನುಗುತ್ತಿದ್ದವು. ಗುರು ಊರಿಗೆ ಬಂದು ಮತ್ತೇ ಹಿಂದಿರುಗುವ ವೇಳೆ ಎಲ್ಲರನ್ನು ನಗುನಗುತ್ತಾ ಮಾತನಾಡಿಸುತ್ತಿದ್ದ. ನಾನು ಮತ್ತೆ ಯಾವಾಗ ಬರುತ್ತೀಯಾ ಎಂದು ಕೇಳಿದಾಗ, ಅಪ್ಪ ಈಗ ಹೋಗುತ್ತಿದ್ದೇನೆ. ಅವರು ಯಾವಾಗ ಕಳುಹಿಸುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದನು ಎಂದು ಗುರು ತಂದೆ ಹೊನ್ನಯ್ಯ ನೋವಿನಿಂದ ನುಡಿದರು.

ನನ್ನ ಮಗ ಎಲ್ಲರ ಮೇಲೂ ಪ್ರೀತಿ ಇಟ್ಟುಕೊಂಡಿದ್ದ. ಅವನೇ ಸಾಲ ಮಾಡಿ ನಮಗೆ ಹಾಗೂ ತಮ್ಮಂದಿರಿಗಾಗಿ ಮನೆ ಕಟ್ಟಿಸಿದ್ದ. ನಮ್ಮೆಲ್ಲೆರನ್ನು ಪ್ರೀತಿ ಮಾಡುತ್ತಿದ್ದನು. ನನ್ನ ಮಗನನ್ನು ಕೊಂದ ದುಷ್ಟರನ್ನು ಬಿಡಬಾರದು. ಅವರನ್ನು ಭೂಮಿ ಮೇಲೆ ಬಿಟ್ಟರೆ ಇನ್ನೂ ಎಷ್ಟು ಜನರ ಕೊಲ್ಲುತ್ತಾರೋ ಎಂದು ಗುರು ತಂದೆ ಕಣ್ಣೀರು ಹಾಕಿದರು. ಈ ಕೆಲಸ ಬಿಟ್ಟು ಬಿಡು, ಇಲ್ಲೇ ಇರು ಅಂತಿದ್ದೆ, ಆದರೆ ನಾನು ದೇಶ ಸೇವೆ ಮಾಡಬೇಕು. ನನ್ನಂತಹ ಲಕ್ಷಾಂತರ ಮಂದಿ ಯೋಧರಿದ್ದಾರೆ. ನಾವು ಕೋಟ್ಯಾಂತರ ಜನರ ರಕ್ಷಣೆ ಮಾಡಬೇಕು. ನಾನು ಕೆಲಸ ಬಿಡಲ್ಲ ಅಂತಿದ್ದ. ಈಗ ನನ್ನ ಮಗನೇ ಇಲ್ಲವಲ್ಲೋ’’ ಅಂತ ಗುರುವಿನ ತಾಯಿ ಚಿಕ್ಕೋಳಮ್ಮ ಅವರ ಚೀರಾಟ ಕರುಳು ಹಿಂಡುವಂತಿತ್ತು. ಅಣ್ಣ ನಮಗೆಲ್ಲ ಜೋಪಾನ, ಧೈರ್ಯವಾಗಿರಿ ಎನ್ನುತ್ತಿದ್ದ. ಆದರೆ ಈಗ ಅಣ್ಣನೇ ಇಲ್ಲ ಎಂದು ಗುರು ಅವರ ಸಹೋದರ ಮಧು ಅಣ್ಣನನ್ನು ನೆನೆಪಿಸಿಕೊಂಡು ಗೋಳಾಡುತ್ತಿದ್ದರು.

ತಂಗಿಯ ಹುಟ್ಟುಹಬ್ಬ ಆಚರಿಸಿ ಕರ್ತವ್ಯಕ್ಕೆ ತೆರಳಿದ್ದರು.! ಪುಲ್ವಾಮಾದ ಭಯೋ ತ್ಪಾದಕ ದಾಳಿಯಲ್ಲಿ ಹುತಾತ್ಮನಾದ ಜಿಲ್ಲೆಯ ವೀರ ಯೋಧ ಗುರು ಅವರಿಗೆ ತಂಗಿ ಚಿಕ್ಕಮ್ಮನ ಮಗಳು ಎಂದರೆ ಪ್ರಾಣ. ಕರ್ತವ್ಯಕ್ಕೆ ಮರಳುವ ಮೊದಲು ತಂಗಿಯ ಹುಟ್ಟುಹಬ್ಬ ಆಚರಣೆ ಮಾಡಿ ನಂತರ ಕರ್ತವ್ಯಕ್ಕೆ ತೆರಳಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.

ಚಿಕ್ಕಮ್ಮನ ಊರಿಗೆ ಹೋಗಿ, ತಂಗಿಯಿಂದ ಕೇಕ್ ಕಟ್ ಮಾಡಿಸಿದ್ದ ಗುರು, ಹುಟ್ಟುಹಬ್ಬದ ಶುಭಾಶಯ ತಿಳಿಸಿ ಕರ್ತವ್ಯಕ್ಕೆ ಹೋಗಿದ್ದರಂತೆ. ಭಾನು ವಾರದವರೆಗೂ ಗ್ರಾಮದಲ್ಲೇ ಇದ್ದ ಗುರು, ರಜೆ ಮುಗಿಸಿ ಕಾಶ್ಮೀರಕ್ಕೆ ಹೋಗಿದ್ದರು. ಆದರೆ ವಿಧಿಯ ಆಟವೇ ಬೇರೆ ಇತ್ತು. ತಂಗಿಗೆ ವಿಶ್ ಮಾಡಿ ಹೋದ ಗುರು, ಮತ್ತೆ ಬಾರದ ಲೋಕಕ್ಕೆ ತೆರಳಿದ್ದಾರೆ.

ಸ್ನೇಹಿತರ ಪಾಲಿಗೆ ಗುರುವಾಗಿದ್ದ ಮಂಡ್ಯದ ಹುತಾತ್ಮ ಯೋಧ: ಇಡೀ ಕೆಲಸ ವನ್ನು ಬಿಡದೆ ಹಠದಿಂದ ಮಾಡುತ್ತಿದ್ದ. ತರಬೇತಿ ವೇಳೆ ಮೊದಲನೇ ಸ್ಥಾನದಲ್ಲಿ ತೇರ್ಗಡೆಯಾಗುತ್ತಿದ್ದ. ಸ್ನೇಹಿತರ ಪಾಲಿನ ಗುರುವಾಗಿಯೇ ಗುರುತಿಸಿಕೊಂಡಿದ್ದ. ಈ ಮಾತನ್ನು ಹೇಳಿದ್ದು ಗುರುವಿನ ಜೊತೆ ತರಬೇತಿ ಪಡೆದ ಮತ್ತೊಬ್ಬ ಯೋಧ ಮಹದೇವು. ಮೈಸೂರು ಜಿಲ್ಲೆಯ ಮಹದೇವು ಸಿಆರ್‍ಪಿಎಫ್‍ಗೆ ಸೇರಿದಾಗ ಜೊತೆಗಾರನಾಗಿದ್ದು ಗುಡಿಗೆರೆ ಕಾಲೋನಿಯ ಗುರು. ತರಬೇತಿ ವೇಳೆಯಲ್ಲಿ ಎಲ್ಲಾ ಪಟುಗಳನ್ನು ಹಿಂದಾಕುತ್ತಿದ್ದನು. ಎಲ್ಲರನ್ನು ಮಂಡ್ಯ ಭಾಷೆಯಲ್ಲೇ ಮಾತನಾಡಿಸಿ ನಗಿಸುತ್ತಿದ್ದನು. ಹಾಗಾಗಿ ಎಲ್ಲರ ಅಚ್ಚುಮೆಚ್ಚಿನ ಗೆಳೆಯನಾಗಿ ಗುರುವಾಗಿದ್ದ ಎಂದು ಸ್ನೇಹಿತನ ಗುಣಗಾನ ಮಾಡಿದರು. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕಾಗಿದೆ. ಕೇಂದ್ರ ಸರ್ಕಾರ ಯೋಧರ ಮೇಲೆ ಕಲ್ಲು ಹೊಡೆಯುವವರನ್ನು, ಬಸ್‍ಮೇಲೆ ಕಲ್ಲು ತೂರಾಟ ಮಾಡುವವರನ್ನು ಗುಂಡಿಕ್ಕಿ ಕೊಲ್ಲುವಂತಹ ಆದೇಶವನ್ನು ಹೊರಡಿಸಿದರೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದರು.

Translate »