ಹುತಾತ್ಮ ವೀರ ಯೋಧರಿಗೆ ಪ್ರಧಾನಿ ಅಂತಿಮ ನಮನ
ಮೈಸೂರು

ಹುತಾತ್ಮ ವೀರ ಯೋಧರಿಗೆ ಪ್ರಧಾನಿ ಅಂತಿಮ ನಮನ

February 16, 2019

ನವದೆಹಲಿ: ನವದೆಹಲಿಯ ಪಾಲಂ ವಿಮಾನ ನಿಲ್ದಾಣ ಶುಕ್ರವಾರ ಸಂಜೆ ಬಲು ಬಾವುಕ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು.

ಒಂದೆಡೆ ಸಾಲಾಗಿ ಜೋಡಿಸಲಾಗಿದ್ದ 40 ವೀರ ಯೋಧರ ಮೃತದೇಹಗಳಿದ್ದ ಪೆಟ್ಟಿಗೆಗಳ ಮೇಲೆ ತ್ರಿವರ್ಣ ಧ್ವಜ ಮೌನ ವಾಗಿ ರೋಧಿಸುತ್ತಿತ್ತು. ಶವಪೆಟ್ಟಿಗೆಗಳ ಮೇಲೆಲ್ಲ ಹರಡಿದ್ದ ಹೂಗಳೂ ಮಂಕಾಗಿದ್ದವು. ಶುಕ್ರವಾರ ಸಂಜೆ 7 ಗಂಟೆಗೆ ಸಿಆರ್‍ಪಿಎಫ್ ಯೋಧರ ಪಾರ್ಥಿವ ಶರೀರಗಳನ್ನು ಶ್ರೀನಗರದಿಂದ ಪಾಲಂ ವಿಮಾನ ನಿಲ್ದಾಣಕ್ಕೆ ಸೇನಾಪಡೆಯ ವಿಶೇಷ ವಿಮಾನದಲ್ಲಿ ತರಲಾಯಿತು. ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್, ವಾಯು ಪಡೆ ಹಾಗೂ ನೌಕಾದಳದ ಮುಖ್ಯಸ್ಥರು ಶವಪೆಟ್ಟಿಗೆಗಳನ್ನು ಸ್ವೀಕರಿಸಿ ಗೌರವ ಸಲ್ಲಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. ಪ್ರಧಾನಿ ಹುತಾತ್ಮ ಯೋಧರ ಕಳೇಬರ ಗಳಿದ್ದ ಪೆಟ್ಟಿಗೆಗಳೆದುರು ತಲೆಬಾಗಿ ಮೌನವಾಗಿ ನಿಂತರು. ಸೈನಿಕರ ಒಂದು ತಂಡ ವಾದ್ಯ ನುಡಿಸುತ್ತಿದ್ದಂತೆಯೇ ಆವರಣದಲ್ಲಿ ಪೂರ್ಣ ನಿಶ್ಶಬ್ದ ಆವರಿಸಿತು. ಪ್ರಧಾನಿಯಾದಿಯಾಗಿ ಅಲ್ಲಿದ್ದ ಎಲ್ಲರೂ ನತಮಸ್ತಕರಾಗಿ ನಿಂತು ಹುತಾತ್ಮ
ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮೋದಿ ಅವರು ಹಲವು ನಿಮಿಷ ಮೌನವಾಗಿ ನಿಂತವರು ನಂತರ ಶವಪೆಟ್ಟಿಗೆಗಳಿಗೆ ಪ್ರದಕ್ಷಿಣೆ ಹಾಕಿ ಕೈಮುಗಿದು ಹಿಮ್ಮುಖವಾಗಿಯೇ ಬಂದು ತಮಗಾಗಿ ಕಾಯುತ್ತಾ ನಿಂತಿದ್ದ ಸಹೋದ್ಯೋಗಿಗಳನ್ನು ಕೂಡಿಕೊಂಡರು. ನಂತರ, ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಎಲ್ಲರೂ ಹುತಾತ್ಮರಿಗೆ ನಮಿಸಿ ಪ್ರಧಾನಿ ಜತೆ ಅಲ್ಲಿಂದ ನಿರ್ಗಮಿಸಿದರು. ಬಳಿಕ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಅಂತಿಮ ಗೌರವ ಸಲ್ಲಿಸಿದರು.

ವಿವಿಧ ರಾಜ್ಯಗಳವರು: ಹುತಾತ್ಮ 40 ಸಿಆರ್‍ಪಿಎಫ್ ಯೋಧರಲ್ಲಿ 12 ಮಂದಿ ಉತ್ತರ ಪ್ರದೇಶ, ಐವರು ರಾಜಸ್ಥಾನ, ನಾಲ್ವರು ಪಂಜಾಬ್‍ಗೆ ಸೇರಿದವರು. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಬಿಹಾರ್, ಉತ್ತರಾಖಂಡ್, ಒರಿಸ್ಸಾ, ತಮಿಳುನಾಡಿನ ತಲಾ ಇಬ್ಬರು, ಕರ್ನಾಟಕ, ಅಸ್ಸಾಂ, ಕೇರಳ, ಜಾರ್ಖಂಡ್, ಮಧ್ಯಪ್ರದೇಶ, ಹಿಮಾಚಲ್, ಜಮ್ಮು-ಕಾಶ್ಮೀರದ ತಲಾ ಒಬ್ಬ ಸೈನಿಕರು ಹುತಾತ್ಮರಾಗಿದ್ದಾರೆ.

Translate »