ವಿವಿಧ ಸಂಘಟನೆಗಳಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಮೈಸೂರು

ವಿವಿಧ ಸಂಘಟನೆಗಳಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

February 18, 2019

ಮೈಸೂರು: ಜಮ್ಮುವಿನ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಡೆದ ಪಾಕ್ ಪ್ರಾಯೋಜಿತ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕೆಎಸ್ ಆರ್‍ಪಿ ಸಿಬ್ಬಂದಿ, ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ, ಯೋಗ ಫೆಡರೇಷನ್ ಆಫ್ ಮೈಸೂರು, ಮಿಲಿಟರಿ ವೆಟರನ್ಸ್ ವೆಲ್‍ಫೆರ್ ಅಸೋಸಿಯೇಷನ್ ಮತ್ತಿತರ ಸಂಸ್ಥೆ ಗಳ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೈಸೂರಿನ ಕೋಟೆ ಆಂಜನೇಯ ದೇವ ಸ್ಥಾನದ ಬಳಿ ಮೇಣದ ಬತ್ತಿ ಹೊತ್ತಿಸಿ, ಹುತಾತ್ಮ ರಾದ ಯೋಧರಿಗೆ ನಮನ ಸಲ್ಲಿಸಿದರು. ಭಯೋತ್ಪಾದಕರ ದಾಳಿಗೆ ಕುಮ್ಮಕ್ಕು ನೀಡು ತ್ತಿರುವ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ, ಭಯೋತ್ಪಾದಕರ ಹೇಯ ಕೃತ್ಯವನ್ನು ಖಂಡಿಸಿ, ಜಾಥಾ ನಡೆಸಿದರು.

ಬಳಿಕ ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಭಾರತಾಂಭೆಗೆ ಜೈಕಾರ ಮೊಳಗಿಸಿದರಲ್ಲದೆ, ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಿದರು. ಅಲ್ಲದೆ ಭಾರತೀಯ ಸೈನ್ಯಕ್ಕೆ ಜಯಘೋಷ ಹಾಕಿ, ಸೈನಿಕರೊಂದಿಗೆ ನಾವಿದ್ದೇವೆ. ದಾಳಿ ಯಿಂದ ಧೃತಿಗೆಡದಂತೆ ಕೋರಿದರು. ನಂತರ ಸಿಆರ್‍ಪಿಎಫ್ ನಿವೃತ್ತ ಐಜಿಪಿ ಅರ್ಕೇಶ್ ಮಾತ ನಾಡಿ, ಭಾರತದ ಎಲ್ಲರ ಮನಸ್ಸಿನಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಪಾಕಿಸ್ತಾನ ಮಾಡಿದೆ. ದೇಶದ ಅಖಂಡತ್ವಕ್ಕೆ ಭಂಗ ತರುವ ಕೆಲಸವನ್ನು ಮಾಡು ತ್ತಿದ್ದು, ಎಲ್ಲಾ ವಿಧದಲ್ಲಿಯೂ ಅಭಿವೃದ್ಧಿಯನ್ನು ಹೊಂದಿರುವ ಭಾರತವನ್ನು ನೇರವಾಗಿ ಎದುರಿಸ ಲಾಗದೆ ಸಂಚು ರೂಪಿಸಿ ಇಂತಹ ಹೇಯ ಕೃತ್ಯ ಗಳನ್ನು ಮಾಡುತ್ತಿದೆ ಎಂದು ಕಿಡಿಕಾರಿದರು.

ನಾಲ್ಕು ಬಾರಿ ಸೋತಿರುವ ಪಾಕಿಸ್ತಾನ ದೇಶದ ಶಕ್ತಿಯನ್ನು ತಿಳಿದು ಅತೃಪ್ತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಭಾರತ ಒಂದು ಜವಾ ಬ್ದಾರಿಯುತ ರಾಷ್ಟ್ರವಾಗಿದ್ದು, ರೋಗಗ್ರಸ್ತ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತದೆ. ಅವರ ತಂತ್ರಗಳಿಗೆ ಪ್ರತಿತಂತ್ರಗಳನ್ನು ರೂಪಿಸುವ ಶಕ್ತಿ ಭಾರತಕ್ಕಿದೆ. ಪುಲ್ವಾಮಾದ ದುರಂತದಲ್ಲಿ ಹುತಾತ್ಮರಾದ ವೀರ ಯೋಧರು ಎಂದೆಂದಿಗೂ ಅಮರ ಎಂದು ನುಡಿದರು.

ಮಾಜಿ ಶಾಸಕ ವಾಸು ಮಾತನಾಡಿ, 25 ವರ್ಷಗಳಿಂದಿಚೇಗೆ ಭಾರತ ದೇಶ ಬಹಳ ಶಾಂತಿಯುತವಾಗಿ ಎಲ್ಲಾ ರಂಗದಲ್ಲಿಯೂ ಪ್ರಗತಿಯನ್ನು ಸಾಧಿಸಿದೆ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಸರಿಸಮನಾಗಿ ನಿಲ್ಲುವ ಮಟ್ಟಕ್ಕೆ ಬೆಳೆದಿದೆ. ಇದನ್ನು ಅರಿತ ಪಾಕಿಸ್ತಾನ ನೇರ ವಾಗಿ ಯುದ್ಧ ಮಾಡಲಾಗದೆ ಹೇಡಿಯಂತೆ ಉಗ್ರರನ್ನು ಸಾಕುತ್ತಿದೆ. ಸಿಆರ್‍ಫಿಎಫ್ ಯೋಧರ ಮೇಲೆ ನಡೆದ ದಾಳಿ ಭಾರತೀಯರ ರಕ್ತ ಕುದಿಯುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗಾಗಿ ಸೇವೆ ಸಲ್ಲಿಸಿ, ಹುತಾತ್ಮರಾದ ಯೋಧರ ಕುಟುಂಬ ಗಳನ್ನು ಸರ್ಕಾರ ಪೋಷಣೆ ಮಾಡಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿ ಕೊಡಬೇಕು. ಮಾಜಿ ಶಾಸಕರಿಗಾಗಿ ಬರುವ ನನ್ನ ಒಂದು ತಿಂಗಳ  ಪಿಂಚಣಿ ಹಣವನ್ನು ಮಂಡ್ಯದ ವೀರ ಯೋಧ ಗುರು ಅವರ ಕುಟುಂಬಕ್ಕೆ ನೀಡುತ್ತೇನೆ. ಇದು ದೊಡ್ಡಮಟ್ಟದ ಹಣವಲ್ಲದಿದ್ದರೂ ಸಣ್ಣ ಕಾಣಿಕೆಯಾಗಿದೆ ಎಂದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಮಂಡ್ಯದ ವೀರ ಯೋಧನ ಪತ್ನಿ ಎಲ್ಲಾ ಮಹಿಳೆಯರಿಗೂ ಮಾದರಿಯಾಗಿದ್ದಾರೆ. ಅವರು, ಪತಿಯ ಪಾರ್ಥಿವ ಶರೀರಕ್ಕೆ ಸಲ್ಯೂಟ್ ಮಾಡಿದ ರೀತಿ ಎಲ್ಲಾ ಮಹಿಳೆಯರಲ್ಲಿ ದೈರ್ಯವನ್ನು ತುಂಬು ವಂತಿದೆ. ಇಂತಹ ಅನಾಹುತಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಮಾಜಿ ಮೇಯರ್ ಬಿ.ಎಲ್.ಬೈರಪ್ಪ, ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಕೆಎಸ್‍ಆರ್‍ಪಿ ಕಮಾಂಡೆಂಟ್ ರಘುನಾಥ್, ಎಸಿಪಿ ಡಿ.ನಾಗರಾಜ್, ಜಿಎಸ್‍ಎಸ್ ಫೌಂಡೇಶನ್ ಮುಖ್ಯಸ್ಥ ಶ್ರೀಹರಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಎ.ಆರ್.ರಾಮಸ್ವಾಮಿ, ಮಿಲಿಟರಿ ವೆಟರನ್ಸ್ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ವಿ.ಕೆ.ಅಡಪ್ಪ, ಕಾರ್ಯದರ್ಶಿ ಪಿ.ಲಕ್ಷ್ಮಣ್, ಮಾಜಿ ಸೈನಿಕರಾದ ಪಿ.ಕೆ.ಬಿದ್ದಪ್ಪ, ಬಿ.ಎಂ.ಗೋಪಾಲ್, ಕೆ.ಎಲ್.ಗಣೇಶ್, ಪಿ.ಸಿ.ಚಂಗಪ್ಪ, ಎ.ಎಸ್.ಪೂವಯ್ಯ, ಕರ್ನಾಟಕ ಪ್ರಜಾ ಪಾರ್ಟಿಯ ಅಧ್ಯಕ್ಷ ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.

Translate »