ತಿ.ನರಸೀಪುರದಲ್ಲಿ ಕುಂಭಮೇಳಕ್ಕೆ ಚಾಲನೆ
ಮೈಸೂರು

ತಿ.ನರಸೀಪುರದಲ್ಲಿ ಕುಂಭಮೇಳಕ್ಕೆ ಚಾಲನೆ

February 18, 2019

ತಿ.ನರಸೀಪುರ: ತಿರುಮ ಕೂಡಲು ತ್ರಿವೇಣಿ ಸಂಗಮ ಶ್ರೀಕ್ಷೇತ್ರದಲ್ಲಿ ಜರುಗುತ್ತಿರುವ 11ನೇ ಮಹಾ ಕುಂಭ ಮೇಳಕ್ಕೆ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭಾನುವಾರ ವಿಧ್ಯುಕ್ತ ಚಾಲನೆ ನೀಡಿದರು.

ನದಿ ಮಧ್ಯದ ನಡುಗಡ್ಡೆಯಲ್ಲಿ ನಿರ್ಮಿ ಸಲಾಗಿರುವ `ತ್ರಿವೇಣಿ ಸಂಗಮ ವೇದಿಕೆ’ ಯಲ್ಲಿ ವಿವಿಧ ಮಠಾಧೀಶರು ಹಾಗೂ ಗಣ್ಯರೊಡಗೂಡಿ ದೀಪ ಬೆಳಗಿಸುವ ಮೂಲಕ ಕುಂಭಮೇಳಕ್ಕೆ ಚಾಲನೆ ನೀಡಿದ ಅವರು, ಡೋಲು ಭಾರಿಸುವ ಮೂಲಕ ಮೂರು ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ವಿಧ್ಯುಕ್ತ ವಾಗಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ದಕ್ಷಿಣ ಪ್ರಯಾಗ, ಕಾಶಿಗಿಂತಲೂ ಗುಲಗಂಜಿ ಯಷ್ಟು ಹೆಚ್ಚು ಪಾವಿತ್ರ್ಯತೆ ಇರುವುದರಿಂದ ದಕ್ಷಿಣ ಭಾರತದ ಕುಂಭಮೇಳ ನಡೆ ಯುವ ತಿರುಮಕೂಡಲು ತ್ರಿವೇಣಿ ಸಂಗಮ ಕ್ಷೇತ್ರ ಧಾರ್ಮಿಕವಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಗಂಗೆಯಷ್ಟೇ ಪರಮ ಪವಿತ್ರವಾದ ಕಾವೇರಿ, ಕಪಿಲೆ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ನದಿಗಳ ತ್ರಿವೇಣಿ ಸಂಗಮ, ಉತ್ತರ ಭಾರತದ ಅಲಹಾಬಾದ್‍ನ ಪ್ರಯಾಗಕ್ಕಿಂತಲೂ ಶ್ರೇಷ್ಠತೆಯನ್ನು ಹೊಂದಿದೆ ಎಂದರು.

ಭೈರವೈಕ್ಯ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ದತ್ತಪೀಠದ ಗಣಪತಿ ಸಚ್ಚಿ ದಾನಂದ ಸ್ವಾಮೀಜಿ, ಕೈಲಾಸಾಶ್ರಮದ ತಿರುಚ್ಚಿ ಸ್ವಾಮೀಜಿ ಸೇರಿದಂತೆ ಹರಗೂರು ಚರಮೂರ್ತಿಗಳು ದಕ್ಷಿಣ ಭಾರತದ ಜನರಿಗೆ ಕುಂಭಮೇಳದಂತಹ ಧಾರ್ಮಿಕ ಉತ್ಸವ ನೋಡುವ ಭಾಗ್ಯ ಕಲ್ಪಿಸಿಕೊಟ್ಟಿ ದ್ದಾರೆ. ಈಗ 11ನೇ ಮಹಾಕುಂಭಮೇಳ ಅದ್ಧೂರಿಯಾಗಿ ನಡೆಯುತ್ತಿದೆ.

ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶೇಷ ಕಾಳಜಿ ವಹಿಸಿ ಉತ್ಸವಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಶಾಸಕರಾದ ಡಾ. ಎಸ್.ಯತೀಂದ್ರ ಹಾಗೂ ಎಂ.ಅಶ್ವಿನ್‍ಕುಮಾರ್ ಲವ-ಕುಶರಂತೆ ಶ್ರಮ ವಹಿಸಿದ್ದಾರೆ ಎಂದು ಶ್ಲಾಘಿಸಿದರು. ತಿ. ನರಸೀಪುರ ತ್ರಿವೇಣಿ ಸಂಗಮವು ಪುಣ್ಯ ಭೂಮಿ. ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿ, ದೇಶ ಸಮೃದ್ಧಿಯಿಂದ ಕೂಡಲು ಧಾರ್ಮಿಕ ಆಚರಣೆಗಳು ನಡೆಯಬೇಕು. ಇದು ನಮ್ಮ ಮನೆಯ ಹಬ್ಬ. ದಕ್ಷಿಣ ಭಾರತದ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. ಅವರ ಆತಿಥ್ಯ ವಹಿಸು ವುದು ನಮ್ಮ ಜಿಲ್ಲೆಯ ಸೌಭಾಗ್ಯ. ಈ ಸಂದರ್ಭದಲ್ಲಿ ತ್ರಿವಿಧ ದಾಸೋಹಿ ಶ್ರೀಶಿವಕುಮಾರ ಸ್ವಾಮೀಜಿಯವರನ್ನು ಸ್ಮರಿಸುತ್ತೇನೆ ಎಂದ ಅವರು, ಅಲ್ಪ ಅವಧಿಯಲ್ಲೇ ಕುಂಭಮೇಳಕ್ಕೆ ಸಕಲ ಸಿದ್ಧತೆಯನ್ನು ಅಚ್ಚುಕಟ್ಟಾಗಿ ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸಚಿವರೂ ಕ್ಷೇತ್ರದ ಶಾಸಕರೂ ಆಗಿದ್ದ ಡಾ.ಹೆಚ್.ಸಿ. ಮಹದೇವಪ್ಪ ಅವರು ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಧಾರ್ಮಿಕ, ಐತಿಹಾಸಿಕ ಕ್ಷೇತ್ರಗಳು, ನೈಸರ್ಗಿಕ ತಾಣಗಳಿಂದ ತುಂಬಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯನಾಗಲು ನಾನು ಪುಣ್ಯ ಮಾಡಿದ್ದೇನೆ. ತ್ರಿವೇಣಿ ಸಂಗಮ ಪ್ರಸಿದ್ಧ ಕ್ಷೇತ್ರವಾಗಿ ಅಭಿವೃದ್ಧಿಗೊಳ್ಳಲಿ. ಮೂರು ದಿನಗಳ ಕುಂಭಮೇಳ ಯಶಸ್ವಿಯಾಗಲೆಂದು ಆಶಿಸಿದರು.

ಭಾರತ ಸರ್ಕಾರದ ವಾರ್ತಾ ಇಲಾಖೆ ಉಪನಿರ್ದೇಶಕಿ ಟಿ.ಸಿ.ಪೂರ್ಣಿಮಾ, `ತ್ರಿವೇಣಿ ಸಂಗಮ ಹಾಗೂ ಕುಂಭಮೇಳ ಮಹತ್ವ’ ಕುರಿತು ಮಾತನಾಡಿದರು. ಆದಿಚುಂಚನಗಿರಿ ಶಾಖಾಮಠದ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಹಾಗೂ ಕಾಗಿನೆಲೆ ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮೈಸೂರು ನಗರದ ವಿಶ್ವಮಾನವ ಶಾಲೆಯ ಮಕ್ಕಳು ವೇದಘೋಷದೊಂದಿಗೆ ಶ್ಲೋಕಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿ, ಮೆಚ್ಚುಗೆಗೆ ಪಾತ್ರರಾದರು.

ಸಮಾರಂಭದಲ್ಲಿ ಚುಂಚನಕಟ್ಟೆ ಶಾಖಾಮಠದ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀಭಕ್ತಕನಕದಾಸ ಮಠದ ಶ್ರೀ ದೊರೆಸ್ವಾಮಿಗಳು, ಶಾಸಕರಾದ ಡಾ.ಎಸ್.ಯತೀಂದ್ರ ಸಿದ್ದರಾಮಯ್ಯ, ಎಂ.ಅಶ್ವಿನ್ ಕುಮಾರ್, ಮೈಸೂರು ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್, ಎಡಿಸಿ ಬಿ.ಆರ್.ಪೂರ್ಣಿಮಾ, ಚಾಮರಾಜನಗರ ಜಿಪಂ ಅಧ್ಯಕ್ಷೆ ಶಿವಮ್ಮ, ತಾಪಂ ಅಧ್ಯಕ್ಷ ಚೆಲುವರಾಜು, ಜಿಪಂ ಸದಸ್ಯರಾದ ಎಸ್.ವಿ.ಜಯಪಾಲ್ ಭರಣಿ, ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ, ಪುರಸಭಾ ಸದಸ್ಯರಾದ ಎಸ್.ಕೆ.ಕಿರಣ್, ಟಿ.ಎಂ.ನಂಜುಂಡಸ್ವಾಮಿ, ತುಂಬಲ ಸಿ.ಪ್ರಕಾಶ್, ಬಾದಾಮಿ ಮಂಜು, ನಾಗರತ್ನ ಮಾದೇಶ, ವಸಂತ ಶ್ರೀಕಂಠ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಸಮಾಜ ಸೇವಕ ಮಹೇಂದ್ರ ಸಿಂಗ್ ಕಾಳಪ್ಪ, ಮುಖಂಡರಾದ ಪಿ.ಸ್ವಾಮಿನಾಥ್, ಬಿ.ಮರಯ್ಯ, ಆಲಗೂಡು ನಾಗರಾಜು ಸೇರಿದಂತೆ ಅನೇಕ ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಮೆರವಣಿಗೆ: ಇದಕ್ಕೂ ಮುನ್ನ ವೀರಗಾಸೆ, ಡೊಳ್ಳುಕುಣಿತ, ವಾದ್ಯಗೋಷ್ಠಿ, ಗಾರುಡಿ ಗೊಂಬೆ ಸೇರಿದಂತೆ ವಿವಿಧ ಕಲಾ ತಂಡಗಳ ಸಹಿತ ಪೂರ್ಣಕುಂಭ ಮೆರವಣಿಗೆ ತಿರುಮಕೂಡಲು ವೃತ್ತದಿಂದ ತ್ರಿವೇಣಿ ಸಂಗಮ ವೇದಿಕೆವರೆಗೆ ನೆರವೇರಿತು. ಇದರೊಂದಿಗೆ ವಿವಿಧ ಮಠಾಧೀಶರು ಹಾಗೂ ಗಣ್ಯರನ್ನು ಭವ್ಯ ಸ್ವಾಗತ ಕೋರಲಾಯಿತು.

Translate »