ಕಾಂಗ್ರೆಸ್ ಮುಖಂಡರ ಮನೆಗೆ ರೇವಣ್ಣ ಭೇಟಿ
ಹಾಸನ

ಕಾಂಗ್ರೆಸ್ ಮುಖಂಡರ ಮನೆಗೆ ರೇವಣ್ಣ ಭೇಟಿ

March 22, 2019

ಪುತ್ರನಿಗೆ ಬೆಂಬಲ ನೀಡುವಂತೆ ಬಿ.ಕೆ.ರಂಗಸ್ವಾಮಿ, ಎಸ್.ಎಂ. ಆನಂದ್‍ಗೆ ಮನವಿ
ಹಾಸನ: ಲೋಕಸಭೆ ಚುನಾ ವಣೆಯಲ್ಲಿ ಪುತ್ರ ಪ್ರಜ್ವಲ್ ಗೆಲ್ಲಿಸಲು ಪಣ ತೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಗುರುವಾರವೂ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದರು.

ಕಾಂಗ್ರೆಸ್ ನಾಯಕರಾದ ಬಿ.ಕೆ.ರಂಗ ಸ್ವಾಮಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ.ಆನಂದ್ ನಿವಾಸಕ್ಕೆ ಭೇಟಿ ನೀಡಿದ ಅವರು ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಅವರನ್ನು ಬೆಂಬಲಿಸು ವಂತೆ ಮನವಿ ಮಾಡಿದರು.

ನಗರದ ವಿದ್ಯಾನಗರದಲ್ಲಿನ ಬಿ.ಕೆ.ರಂಗ ಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ನಂತರ ಮಾತನಾಡಿದ ಅವರು, ಕೋಮುವಾದಿ ಶಕ್ತಿಗಳನ್ನು ಅಧಿಕಾರ ದಿಂದ ದೂರ ಇಡಬೇಕು ಎನ್ನುವ ಉದ್ದೇಶ ದಿಂದ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ. ವಿಧಾನಸಭೆ ಚುನಾವಣೆ ಬಳಿಕ ಆಗಿರುವ ಒಪ್ಪಂದ ಲೋಕ ಸಭೆಯಲ್ಲೂ ಮುಂದುವರೆಯ ಲಿದೆ. ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜ್ವಲ್‍ಗೆ ಬೆಂಬಲ: ಕಾಂಗ್ರೆಸ್ ಮುಖಂಡ ರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿ ಅನೇಕ ಹಿರಿಯರು ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಸೂಚಿಸಿದ್ದು ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ವಿಧಾನ ಪರಿಷ್ ಮಾಜಿ ಸದಸ್ಯ ಎಸ್.ಎಂ.ಆನಂದ್ ಹೇಳಿದರು.

ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅವರೊಂದಿಗೆ ಮಾತನಾಡಿದರು. ಮಾ. 22ರಂದು ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ನಾಮಪತ್ರ ಸಲ್ಲಿಸಲಿದ್ದು, ಸಚಿವ ಎಚ್.ಡಿ. ರೇವಣ್ಣ ನಮಗೆ ಆಹ್ವಾನಿಸಿ ದ್ದಾರೆ. ಹೀಗಾಗಿ ನಾಮಪತ್ರ ಸಲ್ಲಿಸುವ ವೇಳೆ ಭಾಗಿಯಾಗುತ್ತೇವೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ವೇಳೆ ಹೈ ಕಮಾಂಡ್ ಕೈಗೊಂಡ ನಿರ್ಧಾರದಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾ ಗಿದೆ. ಇದಕ್ಕೆ ಪರಿಹಾರ ಕಲ್ಪಿಸುವಂತೆ ಕೋರಲಾಗಿದೆ. ಚುನಾವಣೆ ಬಳಿಕ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ಭರವಸೆ ಇದೆ ಎಂದರು.
ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ರಾಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಜಿಪಂ ಮಾಜಿ ಸದಸ್ಯ ಸ್ವಾಮಿಗೌಡ, ಜೆಡಿಎಸ್ ವಕ್ತಾರ ಹೊಂಗೆರೆ ರಘು ಇತರರು ಇದ್ದರು.

Translate »