ಹುಣಸೂರು ಬಳಿ ರಸ್ತೆ ಅಪಘಾತ: ಬಾಲಿವುಡ್ ಸಾಹಸ ನಿರ್ದೇಶಕ ದುರ್ಮರಣ
ಮೈಸೂರು

ಹುಣಸೂರು ಬಳಿ ರಸ್ತೆ ಅಪಘಾತ: ಬಾಲಿವುಡ್ ಸಾಹಸ ನಿರ್ದೇಶಕ ದುರ್ಮರಣ

October 17, 2018

ಹುಣಸೂರು: ಹಿಂದಿ ಚಿತ್ರರಂಗದ ಸ್ಟಂಟ್ ಮಾಸ್ಟರ್‌ಗಳು (ಸಾಹಸ ನಿರ್ದೇಶಕರು) ತೆರಳುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಮುಂಬೈ ಮೂಲದ ಒಬ್ಬ ಸ್ಟಂಟ್ ಮಾಸ್ಟರ್ ಸಾವನ್ನಪ್ಪಿದರೆ, ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ಹುಣಸೂರು ತಾಲೂಕಿನ ಯಶೋಧರಪುರದ ಬಳಿಯಲ್ಲಿ ಮಂಗಳ ವಾರ ಮುಂಜಾನೆ ನಡೆದಿದೆ.

ಸ್ಟಂಟ್ ಮಾಸ್ಟರ್ ಸತ್ತಾರ್ ಅಹಮದ್ ಖಾನ್(41) ದುರಂತದಲ್ಲಿ ಮೃತಪಟ್ಟವರು. ಮತ್ತೊಬ್ಬ ಸ್ಟಂಟ್ ಮಾಸ್ಟರ್ ಅರುಣ್‍ಕುಮಾರ್ ತೀವ್ರವಾಗಿ ಗಾಯಗೊಂಡಿದ್ದು, ಮೈಸೂರಿನ ಬೃಂದಾವನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಉಮೇಶ್‍ಗೆ ಸಣ್ಣಪುಟ್ಟಗಾಯಗಳಾಗಿವೆ.

ಘಟನೆ ವಿವರ: ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಉಧ್ಘರ್ಷ’ ಚಿತ್ರದ ಅಂತಿಮ ಹಂತದ ಶೂಟಿಂಗ್ ಮಡಿಕೇರಿ ಸುತ್ತ ಮುತ್ತಲಿನಲ್ಲಿ ನಡೆಯುತ್ತಿದೆ. ಅಹಮದ್ ಖಾನ್, ಅರುಣ್‍ಕುಮಾರ್‍ನೊಂದಿಗೆ ಫೈಟಿಂಗ್ ಶೂಟಿಂಗ್ ಗಾಗಿ ಬಂದಿದ್ದರು. ಬೆಂಗಳೂರಿನ ಏರ್‍ಪೋರ್ಟ್‍ನಿಂದ ಖಾಸಗಿ ಟ್ರಾವಲ್ಸ್‍ಗೆ ಸೇರಿದ ಸ್ವಿಪ್ಟ್ ಡಿಸೈರ್ (ಕೆ.ಎ.42,ಎ.6064) ಕಾರಿನಲ್ಲಿ ಮಡಿಕೇರಿಗೆ ತೆರಳುತ್ತಿದ್ದ ವೇಳೆ ಹುಣಸೂರಿಗೆ ಸಮೀಪದ ಯಶೋಧರಪುರದ ಬಳಿ ಮುಂಜಾನೆ 5ರ ವೇಳೆಗೆ ಅಪಘಾತವಾಗಿದೆ. ಮಂಜು ಮುಸುಕಿದ್ದರಿಂದ ದಾರಿ ಕಾಣದೆ ಇತ್ತೀಚೆಗಷ್ಟೆ ನಿರ್ಮಿಸಿದ್ದ ಡಿವೈಡರ್‌ಗೆಗೆ ಕಾರು ಡಿಕ್ಕಿ ಹೊಡೆದು ಉರುಳಿ ಬಿದ್ದ ರಭಸಕ್ಕೆ ನಿದ್ರಿಸುತ್ತಿದ್ದ ಅಹಮದ್‍ಖಾನ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ. ಸ್ಥಳಕ್ಕೆ ಡಿವೈಎಸ್‍ಪಿ ಭಾಸ್ಕರ ಸರ್ಕಲ್ ಇನ್ಸ್‍ಪೆಕ್ಟರ್ ನಿರೀಕ್ಷಕ ಕೆ.ಸಿ.ಪೂವಯ್ಯ ಭೇಟಿ ನೀಡಿದ್ದರು. ಗ್ರಾಮಾಂತರ ಠಾಣೆ ಎಸ್‍ಐ ಶಿವಪ್ರಕಾಶ್ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಸೀಟ್‍ನಲ್ಲಿ ಕುಳಿತಿದ್ದ ಸತ್ತಾರ್ ಅಹಮದ್‍ಖಾನ್ ಒಂದೊಮ್ಮೆ ಸೀಟ್ ಬೆಲ್ಟ್ ಧರಿಸಿದ್ದರೆ ಹಾಗೂ ಕಾರಿನಲ್ಲಿ ಏರ್‍ಬ್ಯಾಗ್ ಇದ್ದಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು ಎನ್ನಲಾಗಿದೆ. ಈ ಮಧ್ಯೆ ಚಾಲಕ ಉಮೇಶ್ ಸೀಟ್ ಬೆಲ್ಟ್ ಧರಿಸಿದ್ದರಿಂದಾಗಿ ಗಾಯ ಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಹಮದ್‍ಖಾನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಮಂಗಳವಾರ ಮಧ್ಯಾಹ್ನ ಬೆಂಗಳೂರಿನಿಂದ ವಿಮಾನದಲ್ಲಿ ಮುಂಬೈಗೆ ಕಳುಹಿಸಿಕೊಡಲಾಗಿದೆ ಎಂದು ಸರ್ಕಲ್ ಇನ್ಸ್‍ಪೆಕ್ಟರ್ ಪೂವಯ್ಯ ತಿಳಿಸಿದ್ದಾರೆ.

Translate »