ಶ್ರೀರಂಗಪಟ್ಟಣ: ಐತಿಹಾಸಿಕ ಪ್ರವಾಸಿ ತಾಣ ಶ್ರೀರಂಗಪಟ್ಟಣದಲ್ಲಿ ಇಂದಿನಿಂದ 3 ದಿನಗಳ ಕಾಲ ನಡೆಯುವ ಪಾರಂಪರಿಕ ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.
ತಾಲೂಕಿನ ಕಿರಂಗೂರು ಸಮೀಪದ ಬನ್ನಿಮಂಟಪದ ಬಳಿ ನಿರ್ಮಿಸಿದ್ದ ವೇದಿಕೆ ಏರಿ, ಚಾಮುಂಡೇಶ್ವರಿ ವಿಗ್ರಹ ಹೊತ್ತ ಆನೆ ಅಭಿಮನ್ಯುವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು. ಬಳಿಕ ಶ್ರೀರಂಗಪಟ್ಟಣ ಪ್ರಮುಖ ಬೀದಿಯಲ್ಲಿ ಸಾಗಿದ ಮೆರವಣಿಗೆಯಲ್ಲಿ ಅಭಿಮನ್ಯುಗೆ, ವರಲಕ್ಷ್ಮೀ ಹಾಗೂ ಕಾವೇರಿ ಕುಮ್ಕಿ ಆನೆಗಳಾಗಿ ಸಾಥ್ ನೀಡಿದವು.
ದಸರಾ ಉತ್ಸವಕ್ಕೆ ಚಾಲನೆ ನೀಡುವ ವೇಳೆ ಮುಖ್ಯಮಂತ್ರಿಗಳಿಗೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ,
ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು, ರೇಷ್ಮೆ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್, ವೆಂಕಟರಾವ್ ನಾಡಗೌಡ ಸಾಥ್ ನೀಡಿದರು. ಶಾಸಕರಾದ ಎ.ಎಸ್.ರವೀಂದ್ರ ಶ್ರೀಕಂಠಯ್ಯ, ಎಂ.ಶ್ರೀನಿವಾಸ್, ಸುರೇಶ್‍ಗೌಡ, ಉಪವಿಭಾಗಾಧಿಕಾರಿ ಶೈಲಜಾ, ತಹಸೀಲ್ದಾರ್ ಡಿ.ನಾಗೇಶ್, ಪುರಸಭಾ ಮುಖ್ಯಾಧಿಕಾರಿ ಕೃಷ್ಣ ಸೇರಿದಂತೆ, ಜಿಪಂ, ತಾಪಂ, ಪುರಸಭೆ ಸದಸ್ಯರು ಹಾಗೂ ಸಾಹಿತಿ, ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ದಸರಾ ಮೆರವಣಿಗೆಗೆ ಸಾಕ್ಷಿಯಾದರು.
ಇದಕ್ಕೂ ಮೊದಲು ವೇದ ಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ಹಾಗೂ ಲಕ್ಷ್ಮೀಶರ ನೇತೃತ್ವದಲ್ಲಿ 15 ಮಂದಿ ವೈದಿಕರು ನಂದಿ ಕಂಬಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ 2.45ರ ಅಭಿಜಿನ್ ಲಗ್ನದಲ್ಲಿ ವಿವಿಧ ಬಗೆಯ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದರೊಂದಿಗೆ ವಿಧ್ಯುಕ್ತವಾಗಿ ಉತ್ಸವಕ್ಕೆ ಚಾಲನೆ ದೊರೆಯಿತು. ಗಣಪತಿ ಹೋಮ, ನವಗ್ರಹ ಪೂಜೆ, ಪುಣ್ಯಾಹ, ಶಮಿಪೂಜೆ, ಚಾಮುಂಡಿ ಪೂಜೆ, ಹಾಗೂ ನೂತನ ಬನ್ನಿಮಂಟಪಕ್ಕೆ ಬನ್ನಿಪೂಜೆ ಕೂಷ್ಮಾಂಡ ಚೇಧನ, ಮಹಾಭಿಷೇಕ, ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ಬನ್ನಿ ವೃಕ್ಷಕ್ಕೆ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ದಂಪತಿ ಪೂಜೆ ನೆರವೇರಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಸೇರಿದಂತೆ ಶಾಸಕರು ಹಾಗೂ ಅಧಿಕಾರಿಗಳು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದರು. ಚಾಮುಂಡೇಶ್ವರಿ ದೇವಿ ಮೂರ್ತಿಯನ್ನೊತ್ತ ರಥದೊಂದಿಗೆ ಆರಂಭಗೊಂಡ ದಸರಾ ಉತ್ಸವವು, ಕಳಸಹೊತ್ತ ಮಹಿಳೆಯರು, ವಿವಿಧ ಕಲಾತಂಡಗಳೊಂದಿಗೆ ಕಿರಂಗೂರು ಗ್ರಾಮದ ಮಾರ್ಗವಾಗಿ ಬಾಬುರಾಯನಕೊಪ್ಪಲು, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗಿ ಪಟ್ಟಣದ ಕೋಟೆಯ ದ್ವಾರದ ಮೂಲಕ ರಾಜಬೀದಿಗಳಲ್ಲಿ ಮೆರವಣಿಗೆ ಸಾಗಿ ರಂಗನಾಥ ಸನ್ನಿಧಿಯನ್ನು ಮುಟ್ಟಿತು.
ನಾಡಹಬ್ಬ ದಸರಾ ಉತ್ಸವಕ್ಕೆ ಜಿಲ್ಲೆಯ ನಾನಾ ಕಡೆಯಿಂದ ಕಲಾ ತಂಡಗಳು ಆಗಮಿಸಿದ್ದವು. ಕೋಲಾಟ, ನಂದಿಧ್ವಜ, ಗಾರುಡಿ ಗೊಂಬೆಗಳು, ಪಟದ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಕತ್ತಿವರಸೆ, ದೊಣ್ಣೆವರಸೆ, ನಗಾರಿ ವಾದ್ಯ, ಪೊಲೀಸ್ ಬ್ಯಾಂಡ್, ಬ್ರೆಜಿಲ್ ದೇಶ ಪ್ರಸಿದ್ಧ ಸಾಂಬ ನೃತ್ಯ ಪ್ರದರ್ಶನ, ಯಕ್ಷಗಾನ, ಹುಲಿವೇಷ, ಕೇರಳದ ಕಥಕ್ಕಳಿ ಸೇರಿದಂತೆ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಮೆರವಣಿಗೆಗೆ ರಂಗು ತಂದವು. ಮಕ್ಕಳ ಯೋಗಾಭ್ಯಾಸ ಹಾಗೂ ಇತರ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡಿತು.
ಶ್ರೀರಂಗಟಪ್ಟಣ ದಸರಾ ವೀಕ್ಷಿಸಲು ತಾಲೂಕಿನ ಸುತ್ತಮುತ್ತಲಿಂದ ಆಗಮಿಸಿದ್ದ ಸಾರ್ವಜನಿಕರ ವೀಕ್ಷಣೆಗೆ ಬನ್ನಿಮಂಟಪ, ಪುರಸಭೆ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಬಳಿ ಗ್ಯಾಲರಿ ನಿರ್ಮಿಸಲಾಗಿತ್ತು. ದಸರಾ ಉತ್ಸವ ನೋಡಲು ಜನರು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು. ಜಿಪಂ, ತಾಪಂ, ಅರಣ್ಯ ಇಲಾಖೆ, ತೋಟಗಾರಿಕೆ, ಯುವಜನ ಕ್ರೀಡಾ ಇಲಾಖೆ, ಪುರಸಭೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬುದ್ಧನ ಸಂದೇಶದ ಶಬ್ಧ ಚಿತ್ರಗಳು ಸೇರಿದಂತೆ ಇತರ ಶಬ್ಧ ಚಿತ್ರಗಳು ದಸರಾ ಮೆರವಣಿಗೆ ಮತ್ತಷ್ಟು ಮೆರಗು ತಂದವು. ಡಾ.ಭಾನುಪ್ರಕಾಶ್ ಶರ್ಮಾ ಮಾತನಾಡಿ, ಆಯುಧ ಪೂಜೆ, ವಿಜಯ ದಶಮಿ ಎಂದಾಕ್ಷಣ ನೆನಪಾಗುವುದು ನಾಡಹಬ್ಬ ದಸರಾ, ಟಿಪ್ಪು ಸುಲ್ತಾನ್ ಕಾಲದಲ್ಲಿ ಮೈಸೂರು ಸಂಸ್ಥಾನಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ರಾಜಧಾನಿಯಾಗಿತ್ತು. ಅಂದಿನಿಂದಲೂ ಮೈಸೂರಿಗಿಂತ ಹೆಚ್ಚಾಗಿ ದಸರಾ ಆಚರಣೆ ಶ್ರೀರಂಗಪಟ್ಟಣದಲ್ಲಿ ಜಂಬೂ ಸವಾರಿ ಸೇರಿದಂತೆ ಅದ್ದೂರಿಯಾಗಿ ನಡೆಯುತ್ತಾ ಬಂದಿದೆ ಪ್ರತಿವರ್ಷ ಶ್ರೀರಂಗಪಟ್ಟಣ ದಸರಾ ಆಚರಣೆ ನಡೆದುಕೊಂಡು ಬರಲಿ ಎಂದರು.