ರಸ್ತೆ ಕಾಮಗಾರಿ ಸ್ಥಗಿತ: ಸಾರ್ವಜನಿಕರ ಪರದಾಟ
ಹಾಸನ

ರಸ್ತೆ ಕಾಮಗಾರಿ ಸ್ಥಗಿತ: ಸಾರ್ವಜನಿಕರ ಪರದಾಟ

September 7, 2018

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ, ಶೀಘ್ರದಲ್ಲಿಯೇ ಪ್ರತಿಭಟನೆ ನಡೆಸುವ ಎಚ್ಚರಿಕೆ
ಬೇಲೂರು:ಎಂಟು ತಿಂಗಳ ಹಿಂದೆ ಆರಂಭಗೊಂಡಿದ್ದ ಪಟ್ಟಣದ ಕನಕದಾಸರ ಬೀದಿಯ 4ನೇ ಅಡ್ಡರಸ್ತೆ ಕಾಮಗಾರಿ ಪುರಸಭೆ ಅಧಿಕಾರಿಗಳ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಸ್ಥಗಿತಗೊಂಡಿದ್ದು ಬಡಾವಣೆಯ ನಿವಾಸಿ ಗಳ ಓಡಾಟಕ್ಕೆ ಅಡ್ಡಿಯಾಗಿದೆ.

ಪುರಸಭೆಯ ಅನುದಾನದಲ್ಲಿ ಚರಂಡಿ ನಿರ್ಮಿಸುವುದು ಹಾಗೂ ರಸ್ತೆಯಲ್ಲಿನ ಚಪ್ಪಡಿಗಳ ತೆರವುಗೊಳಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ 8 ತಿಂಗಳ ಹಿಂದೆಯೇ ತೀರ್ಥಹಳ್ಳಿಯ ಅತೀಫ್ ಎನ್ನುವವರು ಗುತ್ತಿಗೆ ಪಡೆದಿದ್ದರು. ಈ ಸಂಬಂಧ ಕೆಲಸ ಆರಂಭಿಸಿದ ಅವರು ರಸ್ತೆಯಲ್ಲಿದ್ದ ಕಲ್ಲು ಚಪ್ಪಡಿಗಳನ್ನು ಕಿತ್ತು ರಸ್ತೆ ಮಧ್ಯದಲ್ಲಿ ಶೇಖರಿಸಿಟ್ಟರು. ರಸ್ತೆಯ ಎರಡೂ ಬದಿ ಚರಂಡಿಯನ್ನು ಮಾಡಿದ ನಂತರ ಕೆಲಸ ನಿಲ್ಲಿಸಿ ನಾಪತ್ತೆಯಾಗಿ ದ್ದಾರೆ ಎಂದು ಸ್ಥಳೀಯರು ದೂರಿದರು.

ಮೊದಲೇ ಕಿರಿದಾದ ರಸ್ತೆಯ ಮಧ್ಯ ದಲ್ಲಿ ರಾಶಿಹಾಕಿದ ಚಪ್ಪಡಿಗಳಿಂದ ಸಾರ್ವ ಜನಿಕರ ಓಡಾಟಕ್ಕೆ ಕಷ್ಟವಾಗುತ್ತಿದೆ. ಶಾಲಾ ಮಕ್ಕಳು, ವೃದ್ಧರು ಚರಂಡಿ ದಾಟಲಾಗದೆ ಬಿದ್ದು ಪೆಟ್ಟು ಮಾಡಿಕೊಂಡಿ ರುವ ಹಲವು ನಿದರ್ಶನಗಳಿದೆ ಎಂದು ತಿಳಿಸಿದರು.
ಮಳೆ ಬಂದಾಗ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟಿತ್ತು. ನಿವಾಸಿಗಳು ತಮ್ಮ ಮನೆಗೆ ತೆರಳಲು ಪರದಾಡುವಂತ ಪರಿ ಸ್ಥಿತಿ ನಿರ್ಮಾಣವಾಗುತ್ತದೆ. ಇನ್ನೂ ರಸ್ತೆ ಮದ್ಯದಲ್ಲೇ ಚಪ್ಪಡಿ ಹಾಕಿದ್ದರಿಂದ ದ್ವಿಚಕ್ರ ವಾಹನಗಳನ್ನು ಮನೆಯ ಸಮೀಪಕ್ಕೆ ತರಲಾಗದೆ ದೂರದಲ್ಲೇ ನಿಲ್ಲಿಸಿ ಬರು ವಂತಾಗಿದೆ. ಈ ಸಮಸ್ಯೆಯಿಂದ ಯಾವಾಗ ಮುಕ್ತಿ ದೊರೆಯುತ್ತದೆ ಎಂದು ವಾರ್ಡ್‍ನ ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತ ಪಡಿಸಿದರು.

ಇಷ್ಟೆಲ್ಲಾ ಸಮಸ್ಯೆಯಾದರೂ ಸಹ ಗುಂಡಿಬಿದ್ದ ರಸ್ತೆಗೆ ಸಿಮೆಂಟ್ ಹಾಕಿಸುವ ಕೆಲಸವನ್ನು ಪುರಸಭೆ ಮಾಡಲಿಲ್ಲ. ಈ ಬಗ್ಗೆ ನಿವಾಸಿಗಳು ಹಲವು ಬಾರಿ ಮುಖ್ಯಾಧಿಕಾರಿ ಮಂಜುನಾಥ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋ ಜನವಾಗಿಲ್ಲ. ವಾರ್ಡ್‍ನ ಎಲ್ಲ ನಿವಾಸಿ ಗಳು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರೊಬ್ಬರು ಎಚ್ಚರಿಕೆ ನೀಡಿದರು.
‘ಗುಂಡಿಬಿದ್ದ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಸಕ್ಕರೆ ಕಾಯಿಲೆ ಇದ್ದವರು ಕಲ್ಲುಚುಚ್ಚಿ ಪೆಟ್ಟು ಮಾಡಿಕೊಂಡರೆ ಅವರಿಗೆ ಯಾರು ಚಿಕಿತ್ಸೆ ಕೊಡಿಸುತ್ತಾರೆ. ರಸ್ತೆ ನಡುವೆ ಇದ್ದ ಚಪ್ಪಡಿಯನ್ನು ಇಲ್ಲಿನ ನಿವಾಸಿಗಳೇ ತೆರವುಗೊಳಿಸಿಕೊಂಡಿದ್ದೇವೆ. ನಮ್ಮಿಂದ ತೆರಿಗೆ ಹಣ ಕಟ್ಟಿಸಿಕೊಂಡು ಕೆಲಸ ಮಾಡಿಸಲಿಲ್ಲ ಎಂದರೆ ಏನರ್ಥ. ಅಧಿಕಾರಿಗಳು ನೀಡುವ ಭರವಸೆ ಕೇಳಿ ಕೇಳಿ ಸಾಕಾಗಿದೆ. ಇನ್ನು ಪ್ರತಿಭಟನೆ ನಡೆಸುವುದೊಂದೇ ಇರುವ ಏಕೈಕ ಮಾರ್ಗ’ ಎಂದು ವಾರ್ಡ್‍ನ ನಿವಾಸಿ ಗಳಾದ ಉಷಾ, ಶೀಲಾ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ವಾರ್ಡಿನ ಪುರಸಭೆ ಸದಸ್ಯನಾಗಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಹಲವು ಬಾರಿ ಪುರಸಭೆ ಮುಖ್ಯಾಧಿಕಾರಿ ಗಮನಕ್ಕೆ ತಂದಿದ್ದೇನೆ. ಆದರೂ ಅವರು ಗಮನಹರಿಸಿಲ್ಲ. ಗುತ್ತಿಗೆದಾರ ಕೆಲಸ ನಿಲ್ಲಿಸಿ ಹೋಗಿದ್ದಾನೆ ಎಂದು ಹೇಳುತ್ತಿದ್ದಾರೆ. ಶೀಘ್ರವೇ ಕೆಲಸ ಮಾಡಿಸದೆ ಇದ್ದಲ್ಲಿ ನಿವಾಸಿಗಳೊಂದಿಗೆ ನಾನೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ.
– ಬಿ.ಎಲ್.ಧರ್ಮೇಗೌಡ, ಪುರಸಭೆ ಸದಸ್ಯ

ನಮಗೂ ತಾಳ್ಮೆ ಇದೆ. ಅದನ್ನು ಪರೀಕ್ಷೆ ಮಾಡುವುದು ಸರಿಯಲ್ಲ. ನಮ್ಮ ಸಮಸ್ಯೆ ಯಂತೆ ಅಧಿಕಾರಿಗಳಿಗೂ ಅವರ ಮನೆ ಬಳಿ ಇದ್ದಿದ್ದರೆ ಸುಮ್ಮನೆ ಇರುತ್ತಿದ್ದರಾ? ಯಾವುದಾದರೊಂದು ಅನುದಾನದಲ್ಲಿ ಕೆಲಸ ಮಾಡಿಸುತ್ತಿದ್ದರು. ಈಗಾಗಲೇ ಕೆಲವರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಅಂಗನವಾಡಿ ಮಕ್ಕಳು ಚರಂಡಿಗೆ ಬಿದ್ದು ಏನಾದರೂ ಹೆಚ್ಚಿನ ಅನಾಹುತ ಆದರೆ ಅದಕ್ಕೆ ಪುರಸಭೆ ಅಧಿಕಾರಿಗಳೆ ಹೊಣೆಯಾಗುತ್ತಾರೆ. ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು ಇಲ್ಲದಿದ್ದರೇ ಶೀಘ್ರವೆ ಪ್ರತಿಭಟನೆ ನಡೆಸಲಾಗುವುದು – ಸೌಮ್ಯ, ವಾರ್ಡ್‍ನ ನಿವಾಸಿ

Translate »