ಐಷಾರಾಮಿ ವಾಹನಗಳ ಲೋಗೋ ಕದಿಯುತ್ತಿರುವ ಖದೀಮರು
ಮೈಸೂರು

ಐಷಾರಾಮಿ ವಾಹನಗಳ ಲೋಗೋ ಕದಿಯುತ್ತಿರುವ ಖದೀಮರು

October 21, 2019

ಮೈಸೂರು, ಅ.20(ಎಂಟಿವೈ)- ಐಷಾರಾಮಿ ಕಾರುಗಳ ಲೋಗೋ ಕದಿಯುವ ತಂಡ ಮೈಸೂರಿನಲ್ಲಿ ಕೈಚಳಕ ಪ್ರದರ್ಶಿ ಸುತ್ತಿದ್ದು, ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಲೋಗೋವನ್ನು ರಾತ್ರೋರಾತ್ರಿ ಕಳವು ಮಾಡುತ್ತಿದೆ. ಕಳೆದ ರಾತ್ರಿ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದ ಇಬ್ಬರು ಮೈಸೂರಿನ ಶ್ರೀರಾಂಪುರದ ನಿವಾಸಿ ಕಾಂಗ್ರೆಸ್ ಮುಖಂಡ ಮಂಜೇಗೌಡ ಅವರಿಗೆ ಸೇರಿದ ಬಿಎಂಡಬ್ಲ್ಯೂ ಕಾರಿನ ಲೋಗೋ ಎಗರಿಸಿ ಪರಾರಿಯಾಗಿದ್ದು, ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಎಂಡಬ್ಲೂ, ಆಡಿ, ವೋಕ್ಸ್ ವ್ಯಾಗನ್, ಸ್ಕೋಡಾ, ಮರ್ಸಿ ಡಿಸ್ ಬೆಂಜ್óó ಇನ್ನಿತರ ಕಂಪನಿಗಳ ಕಾರುಗಳ ಲೋಗೋಗಳನ್ನೇ ತಂಡವೊಂದು ಕಳವು ಮಾಡುತ್ತಿದ್ದು, ಇದುವರೆಗೂ ಇಂತಹ ಹಲವು ಪ್ರಕರಣಗಳು ಮೈಸೂರಲ್ಲಿ ನಡೆದಿವೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು, ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಸಂದರ್ಭ ದಲ್ಲಿಯೇ ಲೋಗೋ ಕಳುವಾಗುತ್ತಿದ್ದವು. ಇದನ್ನು ವಾಹನಗಳ ಮಾಲೀಕರು ಗಂಭೀರವಾಗಿ ಪರಿಗಣಿಸದೇ ಇದ್ದುದ್ದರಿಂದ ದೂರು ದಾಖಲಾಗಿರಲಿಲ್ಲ. ಒಂದು ವಾಹನದ ಲೋಗೊ 8,500 ರೂ. ನಿಂದ 10 ಸಾವಿರ ರೂ. ಬೆಲೆಬಾಳುತ್ತದೆಯಾದರೂ, ಕಳ್ಳರು ಮಾತ್ರ ಕೇವಲ 150ರಿಂದ 200 ರೂ.ಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.

ಮುಸುಕುಧಾರಿಗಳಿಂದ ಕೃತ್ಯ: ಶನಿವಾರ ರಾತ್ರಿ ಮೈಸೂರಿನ ಶ್ರೀರಾಂಪುರದ ಬಿಇಎಂಎಲ್ ಲೇಔಟ್ ನಿವಾಸಿ ಕಾಂಗ್ರೆಸ್ ಮುಖಂಡ ಮಂಜೇಗೌಡ, ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಬಿಎಂಡಬ್ಲ್ಯೂ (ಕೆಎ.51, ಎಂಎಫ್.8172) ಕಾರಿನ ಲೋಗೋ ಕಳವು ಮಾಡಲಾಗಿದೆ. ಮುಸುಕುಧಾರಿಗಳಾಗಿ ಬಂದ ಇಬ್ಬರು ಕಾರಿನ ಲೋಗೋ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಳ್ಳರ ಈ ಕೃತ್ಯ ಮಂಜೇಗೌಡರ ಮನೆ ಮುಂದೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಂದು ಬೆಳಿಗ್ಗೆ ಕಾರಿನ ಲೋಗೋ ಇಲ್ಲದೇ ಇರುವುದನ್ನು ಗಮನಿಸಿದ ಚಾಲಕ ಮಾಲೀಕನಿಗೆ ತಿಳಿಸಿದ್ದಾರೆ. ಕೂಡಲೇ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ದಾಗ ಇಬ್ಬರು ಲೋಗೋ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ದೃಶ್ಯಾವಳಿಯ ಸಿಡಿಯೊಂದಿಗೆ ಮಂಜೇಗೌಡರು ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Translate »