ಸ್ಯಾಂಡಲ್‍ವುಡ್ ನಟರು, ನಿರ್ಮಾಪಕರ ಬಳಿ   109 ಕೋಟಿ ರೂ. ಮೌಲ್ಯದ   ಅಘೋಷಿತ ಆಸ್ತಿ ಪತ್ತೆ
ಮೈಸೂರು

ಸ್ಯಾಂಡಲ್‍ವುಡ್ ನಟರು, ನಿರ್ಮಾಪಕರ ಬಳಿ 109 ಕೋಟಿ ರೂ. ಮೌಲ್ಯದ ಅಘೋಷಿತ ಆಸ್ತಿ ಪತ್ತೆ

January 7, 2019

ಬೆಂಗಳೂರು: ಕನ್ನಡ ಚಿತ್ರರಂಗದ ನಟರು ಮತ್ತು ನಿರ್ಮಾಪಕರ ಮನೆ ಹಾಗೂ ಕಚೇರಿಗಳ ಮೇಲೆ ನಡೆಸಿದ ದಾಳಿ ವೇಳೆ 109 ಕೋಟಿ ರೂ. ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದ್ದು, 2.85 ಕೋಟಿ ನಗದು ಹಾಗೂ 25.3 ಕೆ.ಜಿ. ಚಿನ್ನಾಭರಣ ಸೇರಿ ಒಟ್ಟು 11 ಕೋಟಿ ರೂ. ಜಪ್ತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ತನಿಖಾ ತಂಡ ಭಾನುವಾರ ಸಂಜೆ ಅಧಿಕೃತವಾಗಿ ಘೋಷಿಸಿದೆ.

ಚಿತ್ರನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ಯಶ್, ನಿರ್ಮಾಪಕರಾದ ವಿಜಯ್ ಕಿರಂಗದೂರು, ಸಿ.ಆರ್.ಮನೋಹರ್, ರಾಕ್‍ಲೈನ್ ವೆಂಕಟೇಶ್ ಮತ್ತು ಜಯಣ್ಣ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜ.3ರಿಂದ ಮೂರು ದಿನಗಳ ಕಾಲ ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆಯ ವಲಯಾಧಿಕಾರಿಗಳು ದಾಳಿ ನಡೆಸಿದ್ದರು.

ಕನ್ನಡ ಚಿತ್ರರಂಗದ ಈ ಎಂಟು ಮಂದಿ ಪ್ರಮುಖರ ವರಮಾನ-ವಹಿವಾಟುಗಳ ಮಾಹಿತಿಗಳನ್ನು ಕಳೆದ ಮೂರು ತಿಂಗಳುಗಳಿಂದ ಸಂಗ್ರಹಿಸಿ, ಸಿದ್ಧತೆಗಳನ್ನು ಮಾಡಿಕೊಂಡು, ಒಟ್ಟು 180 ಅಧಿಕಾರಿಗಳ ದೊಡ್ಡ ತಂಡದೊಂದಿಗೆ 21 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಅಲ್ಲದೇ 5 ಕಡೆ ಸರ್ವೇ ಕಾರ್ಯವನ್ನೂ ಕೂಡ ಕೈಗೊಳ್ಳಲಾಯಿತು. ಚಿತ್ರ ನಿರ್ಮಾಣ ಸಂಸ್ಥೆಗಳು, ನಿರ್ಮಾಪಕರು, ಫೈನಾನ್ಷಿಯರ್‍ಗಳು ಮತ್ತು ನಟರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಯಿತು ಎಂದು ಆದಾಯ ತೆರಿಗೆ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಆದಾಯ ತೆರಿಗೆ ಇಲಾಖೆಗೆ ಘೋಷಣೆ ಮಾಡಿಕೊಳ್ಳದ 109 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ದಾಖಲೆಗಳು ದಾಳಿ ವೇಳೆ ಸಿಕ್ಕಿವೆ. ಜಪ್ತಿ ಮಾಡಿಕೊಂಡಿರುವ 2.85 ಕೋಟಿ ರೂ. ನಗದು ಮತ್ತು 25.3 ಕೆ.ಜಿ. ಚಿನ್ನಾ ಭರಣಗಳಿಗೂ ಕೂಡ ಯಾವುದೇ ರಶೀತಿಯಾಗಲೀ, ಅಧಿಕೃತ ದಾಖಲೆಗಳಾಗಲೀ ಇಲ್ಲ. ಇದು ಮಾತ್ರವಲ್ಲದೇ ಹಲವು ದಾಖಲೆ ಪತ್ರಗಳು ಹಾಗೂ ಅಘೋಷಿತ ಸಂಪನ್ಮೂಲಗಳು ಶೋಧನೆ ವೇಳೆ ಕಂಡು ಬಂದಿದ್ದು, ಅವುಗಳನ್ನು ಸೂಕ್ತವಾಗಿ ಪರಿಶೀಲನೆ ನಡೆಸಿದರೆ, ಬಳಿಕ ತೆರಿಗೆ ವಂಚಿಸಿರುವ ಆಸ್ತಿಯ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚಿತ್ರ ನಿರ್ಮಾಣ, ವಿತರಣೆ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದ ವಹಿವಾಟಿನಲ್ಲಿ ತೆರಿಗೆ ವಂಚಿಸಿರುವುದು ಸಾಕ್ಷ್ಯ ಸಮೇತ ದೃಢಪಟ್ಟಿದೆ. ಚಿತ್ರಮಂದಿರಗಳಿಂದ ನಗದು ರೂಪದಲ್ಲಿ ಸಂಗ್ರಹವಾದ ಆದಾಯವನ್ನೂ ಮರೆಮಾಚಲಾಗಿದೆ. ಕಲಾವಿದರು ತಾವು ಪಡೆದ ಸಂಭಾವನೆಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನೂ ಹೊಂದಿಲ್ಲ. ಇದರ ಮೂಲಕ ಬಂದ ಹಣವನ್ನು ಆಸ್ತಿ-ಪಾಸ್ತಿ ಹಾಗೂ ಚಿನ್ನಾಭರಣ ಖರೀದಿಯಲ್ಲಿ ತೊಡಗಿಸಿರುವುದು ಕಂಡು ಬಂದಿದೆ.

ಸಿನಿಮಾಗಳ ಆಡಿಯೋ, ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳ ಮಾರಾಟ ದಿಂದ ಬಂದ ಹಣಕ್ಕೂ ಕೂಡ ಯಾವುದೇ ರೀತಿಯ ಲೆಕ್ಕ ಪತ್ರಗಳನ್ನು ಇಡದೇ ತೆರಿಗೆ ವಂಚಿಸಿರುವುದು ಸಾಕ್ಷ್ಯ ಸಮೇತ ಖಚಿತವಾಗಿದೆ. ನಿರ್ಮಾಪಕರು ವಿತರಕರಿಂದ ಪಡೆದ ಹಣಕ್ಕೂ ಕೂಡ ಯಾವುದೇ ರೀತಿಯ ಲೆಕ್ಕ ಪತ್ರಗಳನ್ನೂ ಇಟ್ಟಿಲ್ಲ. ಈ ಆದಾಯದಲ್ಲೂ ಕೂಡ ತೆರಿಗೆ ವಂಚನೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದ್ದು, ಈ ಸಂಬಂಧ ಜಾರೀ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಗುವುದು. ಅಲ್ಲದೇ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯಿಂದ ಮೊಕದ್ದಮೆ ಹೂಡುವ ಪ್ರಕ್ರಿಯೆಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದಾಯ ತೆರಿಗೆ ಇಲಾಖೆಯು ಕನ್ನಡ ಚಿತ್ರರಂಗಕ್ಕೆ ಸ್ಪಷ್ಟ ಸೂಚನೆಯನ್ನು ನೀಡಿದ್ದು, ಚಿತ್ರೋದ್ಯಮಕ್ಕೆ ಸಂಬಂಧಪಟ್ಟವರು ಹಣಕಾಸು ವಹಿವಾಟಿಗೆ ಸಂಬಂ ಧಿಸಿದಂತೆ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಆದಾಯಕ್ಕೆ ತಕ್ಕಂತೆ ತೆರಿಗೆ ಪಾವತಿಸಬೇಕು ಎಂದು ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ನಟರು, ನಿರ್ಮಾಪಕರ ವಿರುದ್ಧ ಕೇಸ್ ದಾಖಲು?
ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿಗೊಳಗಾದ ಕನ್ನಡ ಚಿತ್ರರಂಗದ ನಟರು ಮತ್ತು ನಿರ್ಮಾಪಕರ ವಿರುದ್ಧ ಆದಾಯ ತೆರಿಗೆ ಇಲಾಖೆ ಕಾಯ್ದೆಯಡಿ ಪ್ರಕರಣ ದಾಖಲಾಗುವ ಸಾಧ್ಯತೆ ಕಂಡು ಬರುತ್ತಿದೆ. ನಾಯಕ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಯಶ್, ಸುದೀಪ್, ನಿರ್ಮಾಪಕರಾದ ರಾಕ್‍ಲೈನ್ ವೆಂಕ ಟೇಶ್, ವಿಜಯ್ ಕಿರಂಗದೂರು, ಜಯಣ್ಣ, ಸಿ.ಆರ್. ಮನೋಹರ್ ಅವರ ಮನೆ ಮತ್ತು ಕಚೇರಿಗಳ ಮೇಲೆ 3 ದಿನ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯು, 109 ಕೋಟಿ ರೂ. ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ಅಧಿಕೃತವಾಗಿ ಘೋಷಿಸುತ್ತಿದ್ದಂತೆಯೇ ಇವರಿಗೆಲ್ಲಾ ತೆರಿಗೆ ವಂಚನೆಯ ಕ್ರಿಮಿನಲ್ ಕೇಸ್ ಭೀತಿ ಎದುರಾಗಿದೆ. ಅದು ಮಾತ್ರವಲ್ಲದೇ ಇವರು ಗಳಿಂದ ಆದಾಯ ತೆರಿಗೆ ಇಲಾಖೆಯು 2.85 ಕೋಟಿ ರೂ. ನಗದು ಹಾಗೂ 25.3 ಕೆ.ಜಿ. ಚಿನ್ನಾ ಭರಣವನ್ನು ವಶಪಡಿಸಿಕೊಂಡಿದೆ. ಇವೆಲ್ಲಕ್ಕೂ ಇವರು ಗಳು ಸಮರ್ಪಕವಾದ ದಾಖಲೆಗಳನ್ನು ನೀಡದಿದ್ದಲ್ಲಿ ಪ್ರಕರಣದಲ್ಲಿ ಸಿಲುಕುವುದು ಖಚಿತ. ಇವರ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆಯನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಿಸಿದ್ದು, ಐಟಿ ಕಾಯ್ದೆ 278 (ಡಿ) ಪ್ರಕಾರ ಕೇಸ್ ದಾಖಲಾಗುವ ಸಾಧ್ಯತೆ ಕಂಡು ಬಂದಿದೆ. ಆದಾಯ ತೆರಿಗೆ ಇಲಾಖೆಯ ನಿಯ ಮಾವಳಿ ಪ್ರಕಾರ ಮದುವೆ ಸಮಾರಂಭಗಳಲ್ಲಿ ಪಡೆದ ಉಡುಗೊರೆಗೆ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ ನಿಶ್ಚಿತಾರ್ಥ ಹಾಗೂ ಹುಟ್ಟುಹಬ್ಬ ಸಮಾರಂಭಗಳಲ್ಲಿ ಪಡೆದಿರುವ ಉಡುಗೊರೆಗಳಿಗೂ ತೆರಿಗೆ ಪಾವತಿಸಬೇಕಾಗುತ್ತದೆ. ನಟರಿಗೆ ಸಿಗುವ ಸಂಭಾವನೆ 20 ಲಕ್ಷ ರೂ.ಗಳಿಗೂ ಹೆಚ್ಚು ಇದ್ದರೆ ಅವರು ಶೇ.28ರಷ್ಟು ತೆರಿಗೆ ಪಾವತಿಸಬೇಕು. ಕೆಲ ನಟರು ಚಲನಚಿತ್ರದ ಒಟ್ಟು ಆದಾಯದಲ್ಲಿ ಶೇಕಡಾವಾರು ಪಾಲನ್ನೂ ಕೂಡ ಪಡೆಯುತ್ತಿರುವ ಅಂಶವನ್ನು ಮುಂದಿಟ್ಟುಕೊಂಡು ಕಳೆದ ಮೂರು ತಿಂಗಳಿಂದ ಪೂರ್ವ ತಯ್ಯಾರಿ ಮಾಡಿಕೊಂಡು ನ್ಯಾಯಾಲಯದ ಆದೇಶ ಪಡೆದು ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

Translate »