ಕೇಂದ್ರದಿಂದ ಮೈಸೂರಿಗೆ 11 ಸಾವಿರ  ಕೋಟಿ ಅನುದಾನ: ಪ್ರತಾಪ್ ಸಿಂಹ
ಮೈಸೂರು

ಕೇಂದ್ರದಿಂದ ಮೈಸೂರಿಗೆ 11 ಸಾವಿರ  ಕೋಟಿ ಅನುದಾನ: ಪ್ರತಾಪ್ ಸಿಂಹ

June 17, 2018

ಮೈಸೂರು:  ಕಳೆದ 4 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್‍ಡಿಎ ಸರ್ಕಾರ ಮೈಸೂರಿನ ಅಭಿವೃದ್ಧಿಗಾಗಿ 11 ಸಾವಿರ ಕೋಟಿ ರೂ. ಅನುದಾನ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಬಿಜೆಪಿಯ `ಸಂಪರ್ಕ ಸಮರ್ಥನ್’ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಮೈಸೂರು ಅರಮನೆ ಹಾಗೂ ಸುತ್ತೂರು ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಳೆದ 48 ತಿಂಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಹೊಂದಿರುವ ಕಿರುಪುಸ್ತಕಗಳನ್ನು ಗಣ್ಯರಿಗೆ ನೀಡುವ ಪ್ರಚಾರಾಂದೋಲನ ದೇಶಾದ್ಯಂತ ನಡೆಯುತ್ತಿದೆ. ಕೇಂದ್ರ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಮೈಸೂರು ಜಿಲ್ಲೆಗೆ 11 ಸಾವಿರ ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಇದನ್ನು ಜನತೆಗೆ ಮನವರಿಕೆ ಮಾಡಿಕೊಡ ಲಾಗುವುದು ಎಂದು ಹೇಳಿದರು. ಕಳೆದ ನಾಲ್ಕು ವರ್ಷಗಳಲ್ಲಿ ಮೈಸೂರು ಭಾಗದ ಅಭಿವೃದ್ಧಿಗೆ ಕೇಂದ್ರದಿಂದ ಭಾರೀ ಅನುದಾನ ತರಲಾಗಿದೆ.

ಮೇಟಗಳ್ಳಿಯಲ್ಲಿ `ಪಾಸ್‍ಪೋರ್ಟ್ ಸೇವಾ ಕೇಂದ್ರ’ ತೆರೆಯಲಾಗಿದ್ದು, ಇದರಿಂದ 20 ಸಾವಿರಕ್ಕೂ ಹೆಚ್ಚು ಮಂದಿ ಪಾಸ್‍ಪೋರ್ಟ್ ಪಡೆದುಕೊಂಡಿದ್ದಾರೆ. ಬೆಂಗಳೂರು-ಮೈಸೂರು ನಡುವೆ 7 ಸಾವಿರ ಕೋಟಿ ರೂ. ವೆಚ್ಚದಲ್ಲಿ 8 ಪಥದ ಹೆದ್ದಾರಿ ನಿರ್ಮಾಣಕ್ಕೆ ಮಾರ್ಚ್ 23ರಂದು ಚಾಲನೆ ನೀಡಲಾಗಿದೆ. ಇದು ಇನ್ನು 24 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಮುದ್ರಾ ಯೋಜನೆ, ಸ್ಕಿಲ್ ಇಂಡಿಯಾ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದೆ. ಪರಿಣಾಮ ದೇಶದ ಅರ್ಥ ವ್ಯವಸ್ಥೆ ಪ್ರಗತಿಯತ್ತ ಸಾಗುತ್ತಿದೆ. 48 ತಿಂಗಳ ಹಿಂದೆ ದೇಶದ ಜನತೆ ಆದೇಶವನ್ನು ಗೌರವಪೂರ್ವಕವಾಗಿ ಸ್ವೀಕರಿಸಿ, ಜನತೆಯ ಆಶಯಕ್ಕೆ ತಕ್ಕಂತೆ ಕೆಲಸ ಮಾಡಲಾಗುತ್ತಿದೆ ಎಂದರು.

`ಕರ್ನಾಟಕ’ ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು: ಕರ್ನಾಟಕದಲ್ಲಿ 1998ರಿಂದ ಇಲ್ಲಿಯವರೆಗೆ ಲೋಕಸಭಾ ಚುನಾವಣೆಗಳಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ 104 ಸ್ಥಾನಗಳನ್ನು ಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಒಂದಾಗಿವೆ ಎಂಬ ಬಗ್ಗೆ ನಮಗೆ ಆತಂಕವಿಲ್ಲ. ನಾವು ಅಭಿವೃದ್ಧಿ ಹಾಗೂ ವಿಕಾಸದ ಆಧಾರದಲ್ಲಿ ಜನರ ಬಳಿ ಹೋಗುತ್ತೇವೆ. ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂಬುದೇ ನಮ್ಮ ಗುರಿ ಎಂದು ಪ್ರಶ್ನೆಯೊಂದಕ್ಕೆ ಪ್ರತಾಪ್‍ಸಿಂಹ ಪ್ರತಿಕ್ರಿಯಿಸಿದರು.

ವಿಶ್ವ ಯೋಗ ದಿನ: ಮೈಸೂರಿನಲ್ಲಿ ಆಚರಿಸುವ ವಿಶ್ವ ಯೋಗ ದಿನದಲ್ಲಿ ಪಾಲ್ಗೊಂಡು ಯೋಗಾಸನ ಪ್ರದರ್ಶಿಸಲು ಈಗಾಗಲೇ ಸುಮಾರು 70 ಸಾವಿರ ಮಂದಿ ತಮ್ಮ ಭಾಗವಹಿಸುವಿಕೆಯನ್ನು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ಗಿನ್ನಿಸ್ ದಾಖಲೆ ನಿರ್ಮಿಸಲಾಗಿದೆ. ಸದ್ಯ ಈ ಬಾರಿ ಗಿನ್ನಿಸ್ ಸಂಸ್ಥೆ ಸಂಪರ್ಕಿಸಿಲ್ಲ ಎಂದ ಅವರು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹೆಸರುಗಳು ಕೇಳಿ ಬರುತ್ತಿರುವ ಬಗ್ಗೆ ಮತ್ತೊಂದು ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡುತ್ತೇನೆಂದರು.

Translate »