ಮೈಸೂರಲ್ಲಿ ಭಕ್ತಿ-ಭಾವದ ರಂಜಾನ್ ಪ್ರಾರ್ಥನೆ
ಮೈಸೂರು

ಮೈಸೂರಲ್ಲಿ ಭಕ್ತಿ-ಭಾವದ ರಂಜಾನ್ ಪ್ರಾರ್ಥನೆ

June 17, 2018

ಮೈಸೂರು:  ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಭಕ್ತಿ-ಭಾವ ಹಾಗೂ ಸಂಭ್ರಮದಿಂದ ಶನಿವಾರ ರಂಜಾನ್ ಆಚರಿಸಿದರು.
ತಿಲಕ್‍ನಗರದಲ್ಲಿರುವ ಈದ್ಗಾ ಮೈದಾನ, ರಾಜೀವ್‍ನಗರ 3ನೇ ಹಂತದ ಗೌಸಿಯಾ ನಗರ ಸೇರಿದಂತೆ ನಗರದ ಹಲವು ಈದ್ಗಾ ಮೈದಾನ ಹಾಗೂ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸರ್‍ಖಾಜಿ ಆಫ್ ಮೈಸೂರು ಡಾ. ಮೌಲಾನಾ ಮೊಹಮದ್ ಉಸ್ಮಾನ್ ಷರೀಫ್ ಅವರು ತಿಲಕ್‍ನಗರದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ನಾಡಿನ ಜನತೆಗೆ ರಂಜಾನ್ ಸಂದೇಶ ನೀಡಿದರು.

ಬಡವರ ಹಸಿವಿನ ತೀವ್ರತೆ ಏನೆಂಬು ದನ್ನು ಅರಿಯಲು ಒಂದು ತಿಂಗಳು ಉಪ ವಾಸ ಪದ್ಧತಿ ಅಸ್ತಿತ್ವದಲ್ಲಿದೆ. ಈ 30 ದಿನ ಗಳ ಉಪವಾಸ ಮುಂದಿನ 11 ತಿಂಗಳು ಹೇಗೆ ಬದುಕು ಸಾಗಿಸಬೇಕೆಂಬುದರ ಬಗ್ಗೆ ತರಬೇತಿ ನೀಡುತ್ತದೆ ಎಂದ ಅವರು, ಚಾರಿಟಿ ಮೂಲಕ ನಿಮ್ಮ ಉಳಿತಾಯದಲ್ಲಿ ಶೇ 2.5ರಷ್ಟು ಹಣವನ್ನು ಬಡವರಿಗಾಗಿ ನೀಡ ಬೇಕೆಂಬುದೇ ಹಬ್ಬದ ಮುಖ್ಯ ಸಂದೇಶ ಎಂದು ತಿಳಿಸಿದರು. ಮುಸ್ಲಿಮರು, ಹಿಂದೂ ಗಳು ಹಾಗೂ ಕ್ರೈಸ್ತರು ತಮ್ಮ ಹಬ್ಬದ ದಿನ ಗಳಲ್ಲಿ ಒಂದಾಗಿ ಸೇರಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಪರಸ್ಪರ ಬಾಂಧವ್ಯ ಭಾವನೆ ಮೂಡಿಸಬೇಕು. ಕೋಮು, ಸೌಹಾರ್ಧ, ಐಕ್ಯತೆ, ಸಾಮರಸ್ಯ ಮೂಡಿಸುವ ಮೂಲಕ ದೇಶದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಬೇಕು ಎಂದು ಕೋರಿದರು.

ಬಡವ-ಶ್ರೀಮಂತ ಎಂಬ ಭೇದ ಭಾವಮರೆತು ಎಲ್ಲರಿಗೂ ಒಳಿತಾಗಲು ಸರ್ವಧರ್ಮಿ ಯರೂ ಒಂದಾಗಬೇಕು. ಎಲ್ಲರೂ ಸುಖವಾಗಿರಲೆಂದು ಪ್ರಾರ್ಥಿಸುವುದೇ ರಂಜಾನ್ ಉದ್ದೇಶವಾಗಿದೆ. ಮಾನವೀಯತೆ ಸಮಾಜ ನಿರ್ಮಾಣ ಮಾಡಿ ಎಂದು ಕರೆ ನೀಡಿದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಹಿಂದೂ, ಮುಸ್ಲಿಂ ಬಾಂಧವರು ಪರಸ್ಪರ ಪ್ರೀತಿ-ವಿಶ್ವಾಸದಿಂದ ಸಹಬಾಳ್ವೆ ನಡೆಸುವುದರಿಂದ ಸಮಾಜ ದಲ್ಲಿ ಭಾತೃತ್ವದ ಭಾವನೆ ಗಟ್ಟಿಗೊಳ್ಳುತ್ತದೆ. ಸರ್ಕಾರ ನಿಮ್ಮೊಂದಿಗಿದೆ. ಹಲವು ಯೋಜನೆಯ ಮೂಲಕ ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯಗಳ ಶ್ರೇಯೋ ಭಿವೃದ್ಧಿಗೆ ಬದ್ಧವಾಗಿದೆ ಎಂದರು. ಮಾಜಿ ಶಾಸಕರಾದ ವಾಸು, ಸೋಮಶೇಖರ್, ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿ ಡಾ.ಬಿ.ಶೇಖ್‍ಅಲಿ, ಮಂಗಳೂರಿನ ಎನ್‍ಪೋಯ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಸೈಯದ್ ಅಖಿಲ್ ಅಹಮದ್, ಎಸ್‍ಜೆಸಿಇ ಮಾಜಿ ಪ್ರಾಂಶುಪಾಲ ಡಾ.ಶಕಿಬ್ ಉಲ್ ರೆಹಮಾನ್, ಫರೂಕಿಯಾ ಪಿಯು ಕಾಲೇಜು ಗೌರವ ಕಾರ್ಯದರ್ಶಿ ಡಾ.ಎಂ.ಸೈಯ್ಯದ್ ಅಹಮದ್, ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಆರಿಫ್‍ಮೆಕ್ರಿ, ತನಜೀಮ-ಎ-ಅಹ್ಲೆ ಸುನತ ಜ್ಹಮಾತ್, ಅಧ್ಯಕ್ಷ ಹುಮಾಯೂನ್‍ಫರ್, ಮುಸ್ಲಿಂ ಕೋ-ಆಫರೇಟಿವ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಫಯಾಜ್‍ಪಾಷಾ, ಮುಖಂಡ ಶೌಕತ್ ಅಲಿ ಖಾನ್, ಕಾರ್ಪೊರೇಟರ್‍ಗಳಾದ ಶೇಕಿತ್‍ಪಾಷಾ, ಸುಹೇಲ್‍ಬೇಗ್, ಮಾಜಿ ಕಾರ್ಪೊರೇಟರ್ ಎಂ.ಶಿವಣ್ಣ, ಕರ್ನಾಟಕ ರಾಜ್ಯ ವಕ್ಫ್ ಕಮಿಟಿ ಸದಸ್ಯ ಮುಮ್ತಾಜ್ ಅಹಮದ್ ಸೇರಿದಂತೆ ಹಲವು ಮುಖಂಡರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ನಗರ ಪೊಲೀಸ್ ಕಮೀಷನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಶುಭಾಶಯ ಕೋರಿದರು. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಎನ್.ವಿಷ್ಣುವರ್ಧನ್ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕೆಎಸ್‍ಆರ್‍ಪಿ, ಸಿಎಆರ್ ಕಮಾಂಡೋ ಪಡೆಯ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು. ಸುಗಮ ಸಂಚಾರ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

Translate »