ಅತಿವೃಷ್ಟಿ ಪರಿಹಾರ ಕಾಮಗಾರಿಗೆ 27.94 ಕೋಟಿ ಬಿಡುಗಡೆ
ಹಾಸನ

ಅತಿವೃಷ್ಟಿ ಪರಿಹಾರ ಕಾಮಗಾರಿಗೆ 27.94 ಕೋಟಿ ಬಿಡುಗಡೆ

October 5, 2018

ಹಾಸನ: ‘ಅತಿವೃಷ್ಟಿ ಹಾನಿ ಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾಮಗಾರಿಗಳಿಗೆ 27.94 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇನ್ನೊಂದು ವಾರದೊಳಗೆ ಕ್ರಿಯಾ ಯೋಜನೆಯನ್ನು ಇಲಾಖಾವಾರು ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅತಿವೃಷ್ಟಿ ಪರಿಹಾರ ಕುರಿತಂತೆ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಳೆ ಹಾನಿ ಕುರಿತು ಇಲಾಖಾ ವಾರು ಅಂದಾಜಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಹಾಲಿ ಈಗ ಬಿಡುಗಡೆಯಾಗಿರುವ ಮೊತ್ತಕ್ಕೆ ಕೇಂದ್ರ ರಾಷ್ಟ್ರೀಯ ವಿಪತ್ತು ನಿಧಿ ಮಾರ್ಗಸೂಚಿಯನ್ವಯ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಬೇಕು ಎಂದರು.

ಜಿಲ್ಲೆಯ ಸಕಲೇಶಪುರ, ಆಲೂರು, ಅರ ಕಲಗೂಡು ಹಾಗೂ ಹೊಳೆನರಸೀಪುರ ತಾಲೂಕುಗಳನ್ನು ಮಳೆಹಾನಿ ಪೀಡಿತ ಪ್ರದೇಶಗಳೆಂದು ಗುರುತಿಸಲ್ಪಟ್ಟಿದ್ದು, ಜಿಲ್ಲೆಗೆ 27.94 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರೂ.12.68 ಕೋಟಿ, ಲೋಕೋಪಯೋಗಿ ಇಲಾಖೆಗೆ ರೂ.10.57 ಕೋಟಿ, ಇಂಧನ ಇಲಾಖೆಗೆ 0.94 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮ ಪಂಚಾಯಿತಿವಾರು ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧಗೊಳ್ಳಬೇಕು. ಅತಿವೃಷ್ಟಿ ಪೀಡಿತ ತಾಲೂಕುಗಳಾದ ಸಕಲೇ ಶಪುರ, ಆಲೂರು, ಅರಕಲಗೂಡು, ಹೊಳೇನರಸೀಪುರ ತಾಲೂಕುಗಳಲ್ಲಿ ತಡೆಗೊಡೆ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ತಮ್ಮ ಪಂಚಾಯಿತಿಗಳಲ್ಲಿ ಮನವಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಒಂದು ವಾರಗಳ ಕಾಲಾವಕಾಶ ಇದ್ದು ಆನಂತರ ಗ್ರಾಮ ಪಂಚಾಯಿತಿವಾರು ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.

ರಾಜ್ಯದಲ್ಲಿ ಕೊಡಗು, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಅತಿವೃಷ್ಠಿ ಪೀಡಿತ ಪ್ರದೇಶಗಳೆಂದು ಪರಿಗಣಿಸಲಾಗಿದೆ. ಒಟ್ಟಾರೆ 7 ಜಿಲ್ಲೆಗಳಲ್ಲಿ ಅತಿವೃಷ್ಟಿ ಪರಿಹಾರ ಕಾರ್ಯಗಳಿಗೆ 200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಸಂಬಂಧ ಪಟ್ಟ ಇಲಾಖೆಗಳು ಕೂಡಲೇ ಅಗತ್ಯ ಪರಿಹಾರ ಕಾರ್ಯಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದರು.

ಉಪ ವಿಭಾಗಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಮಾತನಾಡಿ, ಸಕಲೇಶಪುರ ಭಾಗದಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಗಳು ಹೆಚ್ಚಿನ ಹಾನಿಗೀಡಾಗಿದ್ದು ಸರಿಯಾಗಿ ಅಂದಾಜಿಸಿ ಅಷ್ಟು ವ್ಯಾಪ್ತಿಯ ಮಾರ್ಗ ದುರ ಸ್ತಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ, ಜಿಪಂ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುಟ್ಟಸ್ವಾಮಿ, ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಇದ್ದರು.

ಬೆಳೆ ಸಮೀಕ್ಷೆ ಶೀಘ್ರ ಮುಕ್ತಾಯಕ್ಕೆ ಡಿಸಿ ಸೂಚನೆ

ಹಾಸನ: ಮುಂದಿನ ಹತ್ತು ದಿನಗಳೊಳಗಾಗಿ ಎಲ್ಲಾ ತಾಲೂಕುಗಳ ಬೆಳೆ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ತಾಲೂಕು ತಹಶೀಲ್ದಾರ್‍ರೊಂದಿಗೆ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಅವರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.

ಎಲ್ಲಾ ತಾಲೂಕುಗಳಲ್ಲಿ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಸಮೀಕ್ಷೆ ಕಾರ್ಯ ಪ್ರಾರಂಭವಾಗಬೇಕು. ಪ್ರತಿಯೊಬ್ಬರೂ ಕನಿಷ್ಠ 150 ರಿಂದ 200 ತಾಲೂಕುಗಳ ಗುರಿ ನಿಗದಿ ಪಡಿಸಿಕೊಂಡು ಪೂರ್ಣ ಗೊಳಿಸಬೇಕು. ತಹಶೀಲ್ದಾರರು ಗ್ರೇಡ್ 2 ತಹಶೀಲ್ದಾರರು ಹಾಗೂ ಕಂದಾಯ ಪರಿವೀಕ್ಷಕರು ಮೇಲ್ವಿಚಾರಣೆ ನಡೆಸುವುದರ ಜೊತೆಗೆ ಸ್ವತಃ ಜಮೀನುಗಳಿಗೆ ತೆರಳಿ ಸರ್ವೆ ಕಾರ್ಯ ನಡೆಸಬೇಕು ಎಂದರು.

ಅ. 5ರಂದು ಎಲ್ಲಾ ತಾಲೂಕುಗಳ ತಹಶೀಲ್ದಾರರು ಸ್ವತಃ 200 ತಾಲೂಕುಗಳ ಸರ್ವೆ ಕಾರ್ಯ ನಡೆಸಿ ತಮಗೆ ವರದಿ ಸಲ್ಲಿಸಬೇಕು. ಸಮೀಕ್ಷೆಯಲ್ಲಿ ತೊಡಗಿರುವ ಪ್ರತಿಯೊಬ್ಬರು ದಿಶಾಂತ್ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಂಡು ಹಿಂದಿನ ದಿನವೇ ಮಾರ್ಗ ನಕ್ಷೆ ನಿಗದಿಪಡಿಸಿಕೊಂಡು ಸರ್ವೆ ಕಾರ್ಯವನ್ನು ನಡೆಸಬೇಕು ಎಂದು ಸಲಹೆ ನೀಡಿದರು ಎಲ್ಲೆಲ್ಲಿ ಸಮೀಕ್ಷಾ ಕಾರ್ಯ ಹಿನ್ನಡೆಯಾಗಿದೆಯೋ ಆ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮೀಕ್ಷಾದಾರರನ್ನು ನೇಮಕ ಮಾಡಿಕೊಳ್ಳಬೇಕು. ಇದಕ್ಕಾಗಿ ನುರಿತ ಖಾಸಗಿ ವ್ಯಕ್ತಿಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಯಾವುದೇ ತಾಲೂಕುಗಳಲ್ಲೂ ಕಾರ್ಯ ಹಿನ್ನಡೆಗೆ ಅನಗತ್ಯ ಸಬೂಬು ಹೇಳದೆ ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡಿ ತೋರಿಸಬೇಕು ಎಂದು ಅವರು ಹೇಳಿದರು. ಪ್ರತಿದಿನ ತಾಲೂಕುಗಳಿಂದ ಸಮೀಕ್ಷಾ ಪ್ರಗತಿ ವರದಿಯನ್ನು ಸಲ್ಲಿಸಬೇಕು. ಮುಂದಿನ ಹತ್ತು ದಿನಗಳ ಒಳಗಾಗಿ ಸಮೀಕ್ಷೆ ಮುಗಿಸಿ ದೈನಂದಿನ ಕಂದಾಯ ಇಲಾಖೆಯ ಕಾರ್ಯ ನಿರ್ವಹಣೆಯತ್ತ ಗಮನಹರಿಸಬೇಕು ಎಂದರು. ಉತ್ತಮ ಪ್ರಗತಿ ಸಾಧಿಸಿರುವ ಅರಸೀಕೆರೆ ಮತ್ತು ಆಲೂರು ತಾಲೂಕುಗಳಿಗೆ ಅಭಿನಂದನೆ ಸಲ್ಲಿಸಿದ ಅವರು ಇತರ ತಾಲೂಕುಗಳಲ್ಲಿ ಇದು ಅನುಕರಣೆಯಾಗಬೇಕು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ, ಪ್ರೋಬೆಷನರಿ ಐಎಎಸ್ ಅಧಿಕಾರಿ ಎಂ.ಪ್ರಿಯಾಂಕ, ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿ, ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಮಧುಸೂಧನ್, ಉಪ ನಿರ್ದೇಶಕ ಕೋಕಿಲ, ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

Translate »