ಮೈಸೂರು: 48ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಕಾರ್ಮಿಕರು ಮೈಸೂರಲ್ಲಿ ಇಂದು ಬೃಹತ್ ಜನ ಜಾಗೃತಿ ಜಾಥಾ ನಡೆಸಿದರು. ಕರ್ನಾಟಕ ರಾಜ್ಯ ಸುರಕ್ಷಾ ಸಂಸ್ಥೆ, ನ್ಯಾಷ ನಲ್ ಇನ್‍ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ ಮೆಂಟ್ ಹಾಗೂ ನಂಜನಗೂಡು ಕೈಗಾರಿಕಾ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಜಾಗೃತಿ ಜಾಥಾಗೆ ಜೆ.ಕೆ ಮೈದಾನದ ಬಳಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಹಾಗೂ ಎಟಿ ಅಂಡ್ ಎಸ್ ಇಂಡಿಯಾ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ರಾಬರ್ಟ್ ಗ್ರೋಬ್ಬಾವರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ದಿವಾನ್ಸ್ ರಸ್ತೆ, ರಮಾವಿಲಾಸ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ ಮಾರ್ಗವಾಗಿ ಸಾಗಿದ ಜಾಥಾವು ಗಾಯತ್ರಿ ಭವನದ ಮೂಲಕ ಮರಳಿ ಜೆ.ಕೆ ಮೈದಾನ ದಲ್ಲಿ ಅಂತ್ಯವಾಯಿತು. ರಾಣೆ ಮದ್ರಾಸ್, ತ್ರಿವೇಣಿ ಇಂಜಿನಿಯರಿಂಗ್, ಆಟೋಮೋಟಿವ್ ಆಕ್ಸಲ್ಸ್ ಪ್ರೈವೇಟ್ ಲಿಮಿಟೆಡ್, ಬೊರೂಕಾ ಅಲ್ಯೂಮಿನಿಯಂ, ಎಲ್ ಅಂಡ್ ಟಿ., ಮೈಪಾಲ್, ಜೆ.ಕೆ.ಟೈರ್ಸ್, ಜುಬಿ ಲಿಯಂಟ್, ಎನ್‍ಆರ್ ಗ್ರೂಪ್ಸ್ ಸೇರಿದಂತೆ ಮೈಸೂರು ಹಾಗೂ ನಂಜನಗೂಡು ಭಾಗದ 25ಕ್ಕೂ ಹೆಚ್ಚು ಕೈಗಾರಿಕೆಗಳ ಸುಮಾರು 1000 ಮಂದಿ ಕಾರ್ಮಿಕರು ಅರಿವು ಜಾಥಾದಲ್ಲಿ ಪಾಲ್ಗೊಂಡಿದ್ದರು.
ನಂತರ ಜೆ.ಕೆ.ಮೈದಾನದ ಪ್ಲಾಟಿನಂ ಜುಬಿಲಿ ಹಾಲ್‍ನಲ್ಲಿ ನಡೆದ 48ನೇ ರಾಷ್ಟ್ರೀಯ ಸುರಕ್ಷತಾ ದಿನಾ ಚರಣೆ ಸಮಾರಂಭವನ್ನು ಸತ್ರ ನ್ಯಾಯಾಧೀಶ ಎಸ್.ಕೆ. ವಂಟಿಗೋಡಿ ಉದ್ಘಾಟಿಸಿದರು. ಇದೇ ವೇಳೆ ಕೈಗಾರಿ ಕೋದ್ಯಮಿಗಳು ಹಾಗೂ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಖಾನೆಗಳಲ್ಲಿ ಕೆಲಸ ಮಾಡು ವಾಗ ಮ್ಯಾನೇಜ್‍ಮೆಂಟ್‍ನವರು ಎಲ್ಲಾ ಅಗತ್ಯ ಮುಂಜಾ ಗ್ರತಾ ಸುರಕ್ಷಾ ಕ್ರಮಗಳನ್ನು ಕೈಗೊಂಡಾಗ್ಯೂ ಕೆಲ ಸಂದರ್ಭಗಳಲ್ಲಿ ಅವಘಡಗಳು ಸಂಭವಿಸುತ್ತವೆ ಎಂದರು.
ಅಂತಹ ಘಟನೆಗಳಲ್ಲಿ ಪ್ರಾಣ ಹಾನಿ ಅಥವಾ ಅಂಗ ವಿಕಲರಾದರೆ ಅವರನ್ನೇ ನಂಬಿರುವ ಕುಟುಂಬ ಬೀದಿಗೆ ಬರಲಿದೆಯಾದ್ದರಿಂದ ಬಹಳ ಎಚ್ಚರಿಕೆ ವಹಿಸಿ ಅಗತ್ಯ ಸುರಕ್ಷತೆಗಳೊಂದಿಗೆ ಕೆಲಸ ಮಾಡಬೇಕು. ಫ್ಯಾಕ್ಟರೀಸ್ ಅಂಡ್ ಬಾಯ್ಲರ್ ಇಲಾಖೆ ಅಧಿಕಾರಿಗಳು ಆಗಿಂದಾಗ್ಗೆ ಕೈಗಾರಿಕೆಗಳಿಗೆ ಭೇಟಿ ನೀಡಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಬೇಕು ಎಂದರು.
ಮ್ಯಾನೇಜ್‍ಮೆಂಟ್‍ನೊಂದಿಗಿರುವ ವ್ಯಾಜ್ಯಗಳನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳುವುದೊಳಿತು. ಅನಿವಾರ್ಯ ಎನಿಸಿದರೆ ಮಾತ್ರ ನ್ಯಾಯಾಲಯಕ್ಕೆ ಬನ್ನಿ ಎಂದ ನ್ಯಾಯಾಧೀಶರು, ಬೇರೆ ಇನ್ನಿತರ ಸಮಸ್ಯೆಗಳಿದ್ದರೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರೆ ತಾವು ವಿಚಾರಣೆ ನಡೆಸಿ ಇತ್ಯರ್ಥಗೊಳಿಸುತ್ತೇವೆ. ಈ ಸೌಲಭ್ಯ ವನ್ನು ಉಪಯೋಗಿಸಿಕೊಳ್ಳಿ ಎಂದೂ ಸಲಹೆ ನೀಡಿದರು.
ಆಟೋಮೋಟಿವ್ ಆಕ್ಸಲ್ಸ್ ಲಿ. ಅಧ್ಯಕ್ಷ ಡಾ.ಎನ್. ಮುತ್ತುಕುಮಾರ್, ತ್ರಿವೇಣಿ ಇಂಜಿನಿಯರಿಂಗ್‍ನ ಸಿಇಓ ರಾಜೀವ್ ರಾಜ್‍ಪೌಲ್, ಕಾರ್ಖಾನೆಗಳು, ಬಾಯ್ಲರ್ಸ್ ಇಲಾಖೆ ಅಡಿಷನಲ್ ಡೈರೆಕ್ಟರ್ ಬಿವಿ.ರವಿಕುಮಾರ್, ಅಸಿಸ್ಟೆಂಟ್ ಡೈರೆಕ್ಟರ್ ಹೆಚ್.ಹರೀಶ್, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‍ಮೆಂಟ್ ಮೈಸೂರು ಘಟಕದ ಅಧ್ಯಕ್ಷ ಹರೀಶ ಮಾಚಯ್ಯ, ಎಲ್ ಅಂಡ್ ಟಿಯ ಜಂಟಿ ಪ್ರಧಾನ ವ್ಯವಸ್ಥಾಪಕ ಜೆ.ಹರಿಹರ ಮಹದೇವನ್, ಸುಬ್ರಹ್ಮಣ್ಯ, ಎಂ.ಎಸ್. ರಾಮಪ್ರಸಾದ್, ಅನಂತಕೃಷ್ಣ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ರಾಣೆ ಮದ್ರಾಸ್ ಕಂಪನಿಯ ಕಾರ್ಮಿಕರು ಕಿರು ನಾಟಕ ಪ್ರದರ್ಶಿಸುವ ಮೂಲಕ ನಿರ್ಲಕ್ಷ್ಯವಹಿಸಿದರೆ ಅಪಾಯ ಸಂಭವಿಸುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸಿದರು. ಸುರಕ್ಷತಾ ಪ್ರತಿಜ್ಞಾವಿಧಿಯನ್ನು ಕಾರ್ಮಿಕರು ಸ್ವೀಕರಿಸಿದರು.