ಸಮರ್ಥ ಆಡಳಿತ ನೀಡಿದ ಸಂತೃಪ್ತಿ
ಮೈಸೂರು

ಸಮರ್ಥ ಆಡಳಿತ ನೀಡಿದ ಸಂತೃಪ್ತಿ

February 14, 2019

ನವದೆಹಲಿ: ಹದಿನಾರನೇ ಲೋಕಸಭೆಯ ಕಟ್ಟ ಕಡೆಯ ಅಧಿ ವೇಶನದಲ್ಲಿ, ಕೊನೆಯ ದಿನವಾದ ಬುಧವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಎಂದಿನ ಆಕ್ರಮಣಕಾರಿ ಶೈಲಿ ಬಿಟ್ಟು ಧನ್ಯವಾದ ಮತ್ತು ಅಭಿನಂದನೆಯ ಮಾತುಗಳಿಂದ ಭಿನ್ನರೀತಿಯಲ್ಲಿ ದೀರ್ಘ ಕಾಲ ಮಾತನಾಡಿದರು.

`ನೀವೇ ಮತ್ತೊಮ್ಮೆ ಪ್ರಧಾನಿಯಾಗಬೇಕು’ ಎಂದು ಹಾರೈ ಸಿದ, ಪ್ರತಿಪಕ್ಷಗಳ ಸಾಲಿನ ಹಿರಿಯ ಸದಸ್ಯ ಮುಲಾಯಂಸಿಂಗ್ ಯಾದವ್ ಅವರಿಗೆ ಧನ್ಯವಾದ ಹೇಳಿದರು. ಸದನದ ಕಲಾಪಗಳನ್ನು 5 ವರ್ಷಗಳ ಅವಧಿ ಯಲ್ಲಿ ಅತ್ಯುತ್ತಮ ರೀತಿ ನಡೆಸಿಕೊಟ್ಟಿದ್ದಕ್ಕಾಗಿ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಜಿಎಸ್‍ಟಿ, ತ್ರಿವಳಿ ತಲಾಖ್‍ನಂತಹ ಬಲುಚರ್ಚಿತ ಹಾಗೂ ಅತ್ಯಂತ ಮಹತ್ತಾದ ಮಸೂದೆಗಳೂ ಸೇರಿ ದಂತೆ 200ಕ್ಕೂ ಅಧಿಕ ಹೊಸ ತಿದ್ದುಪಡಿ ಶಾಸನಗಳ ರಚನೆಗೆ ಸಹಕಾರ, ಬೆಂಬಲ ನೀಡಿದ ಸದನದ ಎಲ್ಲ ಸದಸ್ಯ ರಿಗೂ ಧನ್ಯವಾದ ಹೇಳಿದರು. ರಾಫೆಲ್ ಒಪ್ಪಂದದ ಬಗ್ಗೆ ರಾಹುಲ್ ಲೋಕ ಸಭೆಯಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ ಎನ್ನಲಾಗಿತ್ತು, ಆದರೆ ನನಗೆ ಅಂತಹದ್ದೇನೂ ಕಾಣಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಎನ್‍ಡಿಎಗೆ ಬಹುಮತ ಸಿಕ್ಕ ಈ ಐದು ವರ್ಷಗಳಲ್ಲಿ ಭಾರತದ ಗೌರವ ಜಾಗತಿಕ ಮಟ್ಟದಲ್ಲಿ ವೃದ್ಧಿಸಿದೆ. ಇದುವೇ ದೇಶದ ಅಭಿವೃದ್ಧಿಗೆ ಕಾರಣವಾಗಿದೆ. ಪ್ರಧಾನಿ ಮಾತನಾಡುವ ವೇಳೆ ರಾಹುಲ್ ಗಾಂಧಿ ಸದನದಲ್ಲಿ ಹಾಜರಿರಲಿಲ್ಲ. ರಾಫೆಲ್ ಬಗ್ಗೆ ರಾಹುಲ್ ಟೀಕೆಗಳನ್ನು ಉಲ್ಲೇಖಿಸಿದ ಪ್ರಧಾನಿ “ರಾಹುಲ್ ಓರ್ವ ಸಂಸದರು, ಆದರೆ ಅವರು ನನ್ನನ್ನು ತಬ್ಬಿಕೊಂಡದ್ದು, ಕಣ್ಣು ಹೊಡೆದದ್ದು ಎಲ್ಲವೂ ಓರ್ವ ಸಂಸತ್ ಸದಸ್ಯರ ಕಡೆಯಿಂದ ಇದೇ ಮೊದಲ ಬಾರಿಗೆ ನೊಡಿದ್ದೇನೆ” ಎಂದರು.

ಈ ಲೋಕಸಭೆಯ 17 ಅಧಿವೇಶನಗಳ ಪೈಕಿ ಎಂಟು ಅಧಿವೇಶನಗಳು 100 ಪ್ರತಿಶತದಷ್ಟು ಯಶಸ್ವಿಯಾಗಿವೆ. ಕಲಾಪ ಕುರಿತಂತೆ ಹೇಳುವುದಾದರೆ ಶೇಕಡಾ 85ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಯಶಸ್ಸು ಕಂಡಿದೆ ಎಂದು ಪ್ರಶಂಸಿಸಿದರು. ಕೆಲ ತಪ್ಪಾದ ಆಜ್ಞೆ, ಕಾನೂನುಗಳಿಂದಾಗಿ ಭಾರತವು ಜಾಗತಿಕವಾಗಿ ತನ್ನ ಗೌರವಕ್ಕೆ ಕುಂದು ತಂದುಕೊಂಡಿತ್ತು. ಆದರೆ ಇದೀಗ ಬಹು ಮತದ ಸರ್ಕಾರದಿಂದ ಜಾಗತಿಕವಾಗಿ ದೇಶದ ಆತ್ಮಗೌರವ ಇಮ್ಮಡಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಬೆಳಗುತ್ತಿದೆ. ಇದರೊಡನೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಜಾಗತಿಕ ಭಾರತದ ಕೀರ್ತಿಗೆ ಕಾರಣರಾಗಿದ್ದಾರೆ. ಲೋಕಸಭೆಯಲ್ಲಿ ಸರಕಾರವು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿರುವುದೇ ಇದಕ್ಕೆಲ್ಲಾ ಕಾರಣ ಎಂದು ಪ್ರಧಾನಿ ಹೇಳಿದರು.

Translate »