ಮೈಸೂರು, ಫೆ.2(ಎಂಟಿವೈ)-ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೈಸೂರಿನ ಕಾಂಗ್ರೆಸ್ ಭವನದ ಆವರಣದಲ್ಲಿ ನಗರ-ಗ್ರಾಮಾಂತರ ಕಾಂಗ್ರೆಸ್ ಸಮಿತಿ ಭಾನುವಾರ ಆಯೋಜಿಸಿದ್ದ `ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್’ ಕುರಿತ ರಾಷ್ಟ್ರೀಯ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಅವರು, ಇಂಗ್ಲೆಂಡ್‍ನಲ್ಲಿದ್ದ ಸ್ನೇಹಿತ ಗಲ್ಲು ಶಿಕ್ಷೆಗೆ ಗುರಿಯಾಗಿ ದ್ದನ್ನು ಭಾರತದಲ್ಲಿದ್ದ ಸಾವರ್ಕರ್ ವಿರೋಧಿಸಿದ್ದಕ್ಕೆ ಬ್ರಿಟಿಷರು ಆತನನ್ನು ಜೈಲಿಗೆ ಹಾಕಿದ್ದರೇ ಹೊರತು ಸ್ವಾತಂತ್ರ್ಯ ಹೋರಾಟ ಮಾಡಿದ್ದಕ್ಕಲ್ಲ. ಸಾವರ್ಕರ್ ಜೈಲಿನಲ್ಲಿ ದ್ದಾಗ ಇನ್ನು ಮುಂದೆ ಬ್ರಿಟಿಷ್ ಆಡಳಿತವನ್ನು ವಿರೋ ಧಿಸುವುದಿಲ್ಲ ಎಂದು ಬರೆದುಕೊಟ್ಟಿದ್ದರಿಂದಲೇ ಅವರ ಬಿಡುಗಡೆಯಾಗಿತ್ತು. ನಂತರ ಆರ್‍ಎಸ್‍ಎಸ್‍ನವರು ದಾಮೋದರ್ ಸಾವರ್ಕರ್ ಅವರನ್ನು ವೀರ ಸಾವರ್ಕರ್ ಎಂದು ಬಿಂಬಿಸಿದರು. ಇದನ್ನು ಎಲ್ಲರೂ ಅರಿಯಬೇಕು. ಸತ್ಯ ಸಂಗತಿ ತಿಳಿಯದಿದ್ದರೆ ಪಟ್ಟಭದ್ರ ಹಿತಾಸಕ್ತಿಗಳು ಹೇಳುವ ಸುಳ್ಳನ್ನೇ ನಿಜ ಎಂದು ನಂಬುತ್ತೇವೆ. ಅದಕ್ಕೇ ಅಂಬೇಡ್ಕರ್ `ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು’ ಎಂದಿದ್ದರು. ಹೀಗಾಗಿ ಎಲ್ಲರೂ ಇತಿ ಹಾಸ ಅರಿಯಬೇಕು ಎಂದು ಸಲಹೆ ನೀಡಿದರು.
ಪ್ರಚೋದಿಸಿ ಹಿಂದೂಗಳನ್ನು ಎತ್ತಿಕಟ್ಟುವ ಮೂಲಕ ಕಾನೂನು-ಸುವ್ಯವಸ್ಥೆ ಹದಗೆಡಿಸಲು ಪೌರತ್ವ ತಿದ್ದುಪಡಿ ಮಸೂದೆ(ಸಿಎಎ) ಜಾರಿಗೆ ಮುಂದಾಗಿರುವ ಬಿಜೆಪಿಗೆ ತೀವ್ರ ಮುಖಭಂಗವಾಗುವುದು ಖಚಿತ. ತಿಪ್ಪರಲಾಗ ಹಾಕಿದರೂ ಈ ಕಾಯ್ದೆ ಅನುಷ್ಠಾನಗೊಳಿಸಲು ಆಗುವು ದಿಲ್ಲ ಎಂದ ಅವರು, ಈ ಕಾಯ್ದೆ ಅನುಷ್ಠಾನಗೊಳಿಸ ದಂತೆ ಸುಪ್ರೀಂಕೋರ್ಟ್‍ನಲ್ಲಿ 70ಕ್ಕೂ ಹೆಚ್ಚು ಸಾರ್ವ ಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲಾಗಿದೆ. ಸುಪ್ರಿಂ ಕೋರ್ಟ್ ಈ ಕಾಯ್ದೆ ರದ್ದುಗೊಳಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಕೇಂದ್ರ ಸರ್ಕಾರ ಈ ಕಾಯ್ದೆ ಜಾರಿ ವಿಚಾರ ದಲ್ಲಿ ಹಿನ್ನಡೆ ಅನುಭವಿಸುತ್ತದೆ ಎಂದು ಭವಿಷ್ಯ ನುಡಿದರು.
ಸಂವಿಧಾನ ರಚನೆ ವೇಳೆ ಎಲ್ಲಾ ಪಕ್ಷದವರೂ ಇದ್ದರು. 289 ಜನ ಸಂವಿಧಾನ ರಚನೆಯಲ್ಲಿ ತೊಡಗಿದ್ದರು. ಡಾ. ಅಂಬೇಡ್ಕರ್ ಕರಡು ಸಮಿತಿ ಅಧ್ಯಕ್ಷರಾಗಿದ್ದರು. ಶ್ಯಾಮ್ ಪ್ರಸಾದ್ ಮುಖರ್ಜಿಯೂ ಸಮಿತಿಯಲ್ಲಿದ್ದರು. ಅಂದು ಜಾತಿ, ಧರ್ಮ, ಲಿಂಗ, ವರ್ಗ ಆಧಾರದ ಮೇಲೆ ಸಂವಿ ಧಾನ ಇರಬೇಕು ಎಂದು ಯಾರೂ ಹೇಳಲಿಲ್ಲ. ಈಗ ಧರ್ಮದ ಆಧಾರದಲ್ಲಿ ದೇಶ ಕಟ್ಟಬೇಕು ಎಂದರೆ ಉಳಿದ ಧರ್ಮಗಳ ಜನರ ಗತಿಯೇನು? ಎಂದು ಪ್ರಶ್ನಿಸಿದರು.
ಸಂವಿಧಾನದ ಮೂಲತತ್ವ, ಆಶಯವನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ 1973 ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‍ನ 13 ನ್ಯಾಯಮೂರ್ತಿಗಳು ಸಂವಿಧಾನದ ಮೂಲ ಆಶಯ ಬದಲಿಸಲು ಸಂಸತ್‍ಗೂ ಹಾಗೂ ಯಾವುದೇ ಸರ್ಕಾರಕ್ಕೂ ಅಧಿಕಾರವಿಲ್ಲ ಎಂದು ತೀರ್ಪು ನೀಡಿದ್ದಾರೆ ಎಂದರು. ಸಂಸತ್ತಿನಲ್ಲಿ ಬಹುಮತ ಇದ್ದ ಮಾತ್ರಕ್ಕೆ ನಿಯಮ ಉಲ್ಲಂಘಿಸಿ ಬೇಕಾದುದನ್ನೆಲ್ಲಾ ಮಾಡಲು ಅವಕಾಶವಿಲ್ಲ. ಧರ್ಮದ ಆಧಾರದಲ್ಲಿ ಸಿಎಎ ಜಾರಿಗೆ ಮುಂದಾಗಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಎಲ್ಲಾ ವರ್ಗ, ಸಮುದಾಯ ಜನರು ಸ್ವಾತಂತ್ರ್ಯ ಸಂಗ್ರಾಮದಂತೆ ಹೋರಾಟ ಮಾಡಬೇಕು. ಆ ಮೂಲಕ ದೇಶವನ್ನು ಕೋಮುವಾದಿಗಳಿಂದ ರಕ್ಷಿಸಲು ಪಣ ತೊಡಬೇಕು ಎಂದು ವಿಚಾರ ಸಂಕಿರಣ ಉದ್ಘಾಟಿಸಿದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಸಲಹೆ ನೀಡಿದರು.
ಸಿಎಎಗೆ ರಾಷ್ಟ್ರಪತಿಗಳ ಅಂಕಿತವೂ ಅಸಂವಿಧಾನಿಕ ವಾಗಿದೆ. ಸುಪ್ರೀಂಕೋರ್ಟ್‍ನಲ್ಲಿ ಇದರ ವಿರುದ್ಧ ಅರ್ಜಿ ಗಳು ದಾಖಲಾಗುತ್ತಿವೆ. ಸಿಎಎಗೆ ತಿದ್ದುಪಡಿ ಮಾಡಿ ಪಾಕ್, ಬಾಂಗ್ಲಾ, ಅಫ್ಘಾನಿಸ್ತಾನದಿಂದ ಬಂದವರಿಗೆ ಪೌರತ್ವ ಕೊಡಲು ನಮ್ಮ ವಿರೋಧ ಇಲ್ಲ. ಆದರೆ, ಅಲ್ಪಸಂಖ್ಯಾ ತರನ್ನು, ಶ್ರೀಲಂಕಾ ಜನರನ್ನು, ರೋಹಿಂಗ್ಯಾ, ಟಿಬೆಟಿ ಯನ್ನರನ್ನು ಕೈಬಿಟ್ಟಿರುವುದಕ್ಕೆ ವಿರೋಧವಿದೆ. ಸಂವಿ ಧಾನದ 14ನೇ ಅನುಚ್ಛೇದದಂತೆ ಎಲ್ಲರಿಗೂ ಸಮಾನ ಅವಕಾಶವಿದೆ ಎಂದು ಹೇಳಿದರು.
ವಿಚಾರ ಮಂಡಿಸಿದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್, ಕೇಂದ್ರ ಸರ್ಕಾರದ ಎನ್‍ಪಿಆರ್ ಕಾಯ್ದೆ ತಂದೆ ಯಾರು? ಎಂದು ಗೊತ್ತಿಲ್ಲದ ಅನಾಥ ಶಿಶುವಾಗಿದ್ದು, ಇದಕ್ಕೆ ಕಾನೂನಿನಲ್ಲಿ ರಕ್ಷಣೆ ಇಲ್ಲ. ದೇಶ ದಲ್ಲಿ ಸರ್ಕಾರ ಯಾವುದೇ ಕಾನೂನು ಮಾಡುವಾಗ ಶಾಸನಸಭೆಯ ಕಾನೂನಿನ ರಕ್ಷಣೆ ಮತ್ತು ಕಾನೂನಿನಲ್ಲಿ ಈ ಅಂಶ ಸೃಷ್ಟಿ ಆಗಿರಬೇಕು. ಆದರೆ ಎನ್‍ಪಿಆರ್ ಅಸ್ತಿತ್ವಕ್ಕೆ ಬಂದಿದ್ದು 2003ರ ಡಿಸೆಂಬರ್‍ನಲ್ಲಿ. ಇದರ ಹೊರತಾಗಿ ದೇಶದ ಸಂವಿಧಾನದಲ್ಲಿ ಎನ್‍ಪಿಆರ್ ಕುರಿತಂತೆ ಯಾವುದೇ ಪ್ರಸ್ತಾಪವಿಲ್ಲ. ಅಲ್ಲದೇ ಇಂಡಿಯನ್ ಸಿಟಿಜನ್‍ಷಿಪ್ ಕಾಯ್ದೆ ಯಲ್ಲೂ ಇದರ ಬಗ್ಗೆ ಪ್ರಸ್ತಾಪವಿಲ್ಲ. ಹೀಗಾಗಿ ಎನ್‍ಪಿ ಆರ್‍ನ ತಂದೆ ಯಾರು? ಎಂಬ ಪ್ರಶ್ನೆ ಉದ್ಭವಿಸಿದ್ದು, ಇದೊಂದು ಅನಾಥ ಶಿಶುವಾಗಿದೆ ಎಂದರು.
ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ ದರು. ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂ ತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮಾಜಿ ಸಂಸದರಾದ ಆರ್.ಧ್ರುವನಾರಾಯಣ್, ಕಾಗಲವಾಡಿ ಶಿವಣ್ಣ, ಶಾಸಕ ಹೆಚ್.ಪಿ.ಮಂಜುನಾಥ್, ಪುಟ್ಟರಂಗಶೆಟ್ಟಿ, ನರೇಂದ್ರ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ಕಳಲೆ ಕೇಶವಮೂರ್ತಿ, ಎ.ಆರ್.ಕೃಷ್ಣಮೂರ್ತಿ, ಕೆ.ವೆಂಕಟೇಶ್, ಎಸ್.ಜಯಣ್ಣ, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಮುಖಂಡರಾದ ಡಿ.ರವಿಶಂಕರ್ ಸೇರಿದಂತೆ ಮೈಸೂರು, ಮಂಡ್ಯ, ಚಾಮ ರಾಜನಗರ, ಕೊಡಗು ಜಿಲ್ಲೆಗಳ ಮುಖಂಡರು ಹಾಜರಿದ್ದರು.