ಸಮಗ್ರ ಕರ್ನಾಟಕ ಉಳಿಸಿ, ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
ಹಾಸನ

ಸಮಗ್ರ ಕರ್ನಾಟಕ ಉಳಿಸಿ, ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

August 3, 2018

ಹಾಸನ:  ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಗ್ರ ಕರ್ನಾಟಕ ಅಭಿವೃದ್ಧಿಗಾಗಿ ಡಾ.ಡಿ.ಎಂ.ನಂಜುಂಡಪ್ಪ ವರದಿ ಜಾರಿ ಮಾಡಿ, ಅಖಂಡ ರಾಜ್ಯವನ್ನು ಉಳಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು.

ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಘೋಷಣೆ ಕೂಗಿದರು. ಭಾಷವಾರು ಪ್ರಾಂತ್ಯಗಳ ಆಧಾರದ ಮೇಲೆ ರಚನೆಯಾಗಿರುವ ರಾಜ್ಯಗಳ ಒಕ್ಕೂಟ ದೇಶವಾಗಿರುವ ಭಾರತದಲ್ಲಿ ಕರ್ನಾಟಕ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆದಾಯ ನೀಡುತ್ತಿದೆ. ನಾಡಿನ ಎಲ್ಲಾ ಭಾಗದ ಜನರ ತ್ಯಾಗ ಬಲಿದಾನಗಳಿಂದ ಅಖಂಡವಾಗಿರುವ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನೆಯನ್ನು ನಿವಾರಣೆ ಮಾಡಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ನೀಡಲಾದ ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿ ಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಕೆಲ ಭಾಗಗಳು ಅಭಿವೃದ್ಧಿಯಾದರೇ, ಇನ್ನುಳಿದ ಪ್ರದೇಶಗಳು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ನಂಜುಂಡಪ್ಪ ವರದಿಯಲ್ಲಿ ತಿಳಿಸಿರುವಂತೆ ರಾಜ್ಯದ ಎಲ್ಲಾ ಭಾಗಗಳ 119 ತಾಲೂಕುಗಳು ಹಿಂದುಳಿದಿದ್ದು, ಅದರಲ್ಲಿ ಕೆಲ ತಾಲೂಕುಗಳಲ್ಲಿ ಶಿಕ್ಷಣ, ಉದ್ಯೋಗ, ಉದ್ಯಮ, ಆರೋಗ್ಯ ಸೇವೆ, ಮೂಲ ಸೌಕರ್ಯ, ಹಣಕಾಸು ಸಂಸ್ಥೆಗಳ ಸ್ಥಾಪನೆ, ಕೃಷಿ, ನೀರಾವರಿ ಸೌಲಭ್ಯಗಳ ಕುರಿತು ಸರಿಯಾದ ಅನುದಾನ ನೀಡುವುದು ಹಾಗೂ ಬಿಡುಗಡೆಯಾದ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಲು ಅವಶ್ಯಕವಾಗಿದೆ ಎಂದರು.

ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡಿ, ಕರ್ನಾಟಕ ಅಖಂಡವಾಗಿ ಉಳಿಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಕನ್ನಡಿಗರದಾಗಿದ್ದು, ಇದಕ್ಕೆ ಪೂರಕ ಎಂಬಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಾಡಿನಲ್ಲಿ ಪ್ರತ್ಯೇಕತೆಯ ಧ್ವನಿ ಮೊಳಗದಂತೆ ನೋಡಿಕೊಂಡು ಕನ್ನಡಿಗರ ಐಕ್ಯತೆಯನ್ನು ಕಾಪಾಡ ಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಮನುಕುಮಾರ್, ಜಿಲ್ಲಾ ಉಪಾಧ್ಯಕ್ಷ ಸೀತರಾಮು, ಕಾರ್ಮಿಕ ಘಟಕದ ಅಧ್ಯಕ್ಷ ಬೋರೆಗೌಡ, ತಾಲೂಕು ಅಧ್ಯಕ್ಷ ಶಿವಣ್ಣಗೌಡ, ಮುಖಂಡರಾದ ಮಹೇಶ್, ಹರೀಶ್ ಬಾಬು, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿಗೌಡ, ಪ್ರೀತಮ್, ತಾಲೂಕು ಉಪಾಧ್ಯಕ್ಷ ರಕ್ಷಿತ್ ಪಾಲ್ಗೊಂಡಿದ್ದರು.

Translate »