ಹುಚ್ಚನಕೊಪ್ಪಲು ಏತ ನೀರಾವರಿ ಯೋಜನೆ ಪರಿಶೀಲಿಸಿದ ಹೆಚ್.ಡಿ. ರೇವಣ್ಣ: ಅಭಿವೃದ್ಧಿಗೆ ಉತ್ತರ-ದಕ್ಷಿಣ ತಾರತಮ್ಯವಿಲ್ಲ
ಹಾಸನ

ಹುಚ್ಚನಕೊಪ್ಪಲು ಏತ ನೀರಾವರಿ ಯೋಜನೆ ಪರಿಶೀಲಿಸಿದ ಹೆಚ್.ಡಿ. ರೇವಣ್ಣ: ಅಭಿವೃದ್ಧಿಗೆ ಉತ್ತರ-ದಕ್ಷಿಣ ತಾರತಮ್ಯವಿಲ್ಲ

August 3, 2018

ಹಾಸನ:  ‘ಅಭಿವೃದ್ಧಿ ಕುರಿತು ರಾಜ್ಯ ಸರ್ಕಾರಕ್ಕೆ ಉತ್ತರ, ದಕ್ಷಿಣವೆಂಬ ಯಾವುದೇ ತಾರತಮ್ಯವಿಲ್ಲ. ಜಿಲ್ಲಾ ಅಭಿವೃದ್ಧಿ ನಮ್ಮ ಗುರಿ’ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ಹೊಳೆನರಸೀಪುರ ತಾಲೂಕು ಹುಚ್ಚನ ಕೊಪ್ಪಲು ಏತ ನೀರಾವರಿ ಮೊದಲ ಹಂತದ ಯೋಜನೆ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಸರ್ವಾಂಗೀಣ ಪ್ರಗತಿಯನ್ನು ದೃಷ್ಟಿಯಿಲ್ಲಿಟ್ಟುಕೊಂಡು ಶ್ರಮಿಸುತ್ತಿದ್ದಾರೆ ಎಂದರು.

ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ಅನುದಾನ ನೀಡಿದ್ದು ಹಾಗೂ ಬೆಳಗಾವಿಯಲ್ಲಿ ಸುವರ್ಣಸೌಧಕ್ಕೆ ಕುಮಾರಸ್ವಾಮಿ, ದೇವೇಗೌಡರ ಕೊಡುಗೆ ಅಪಾರವಾಗಿದೆ. ಈಗಲೂ ರೈತರ ಬೆಳೆ ಸಾಲ ಯೋಜನೆಯ ಲಾಭ ಎಲ್ಲಾ ಜಿಲ್ಲೆ ಗಳಿಗೂ ದೊರೆತಿದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿ ಇಂದು ನಿಗಮ ಮಂಡಳಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ನಿಯೋಜಿಸುವ ಬಗ್ಗೆ ಚಿಂತಿಸಲಾಗಿದ್ದು, ಯಾವ ಅಧಿಕಾರಿಗಳು ಅಲ್ಲಿ ಕೆಲಸ ನಿರ್ವಹಿಸಬೇಕು ಎಂಬುದನ್ನು ಮುಖ್ಯಮಂತ್ರಿ ಯವರು ನಿರ್ಧರಿಸಲಿದ್ದಾರೆ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದಾಗ ಪಡಿತರ ಕಾರ್ಡ್‍ದಾರರಿಗೆ ಹೆಚ್ಚಿನ ಅಕ್ಕಿ ವಿತರಣೆ ಜಾರಿಗೆ ತಂದರು. ಅನ್ನಭಾಗ್ಯ ಯೋಜನೆ ಯಡಿ ಎಷ್ಟು ಕೆ.ಜಿ. ಅಕ್ಕಿ ವಿತರಿಸಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಆಹಾರ ಸಚಿವ ಜಮೀರ್ ಅಹಮದ್ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಹುಚ್ಚನಕೊಪ್ಪಲು ಏತ ನೀರಾವರಿ ಯೋಜನೆ 2007-08ನೇ ಸಾಲಿನಲ್ಲಿ ಚಾಲನೆ ಪಡೆದಿದ್ದು 5,000 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಹೇಮಾವತಿ ನದಿಯಿಂದ 0.995 ಟಿ.ಎಂ.ಸಿ ನೀರನ್ನು ಬಳಸಿ 8,305ಎಕರೆ ಖಾರಿóಫ್ ಅರೆ ನೀರಾವರಿ, 5,505 ಎಕರೆ ಕಬಿ ಅರೆ ನೀರಾವರಿ ಭೂಮಿಗೆ ನೀರು ಪೂರೈಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಹಾಸನ ಜಿಲ್ಲೆಯ ನೆನೆಗುದಿಗೆ ಬಿದ್ದಿರುವ ಎಲ್ಲಾ ನೀರಾವರಿ ಯೋಜನೆಗಳಿಗೆ ಮರು ಚಾಲನೆ ನೀಡಲಾಗುವುದು. ರೈತರ ಹಿತ ಕಾಯುವುದು ತಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ  -ಹೆಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವ

Translate »