ಎಸ್ಸಿ-ಎಸ್ಟಿ ನೌಕರರ ಮುಂಬಡ್ತಿ ಕಾಯ್ದೆ; ಸುಪ್ರೀಂಕೋರ್ಟ್  ಮೊರೆ ಹೋಗಲು ಅಹಿಂಸಾ ನಿರ್ಧಾರ
ಮೈಸೂರು

ಎಸ್ಸಿ-ಎಸ್ಟಿ ನೌಕರರ ಮುಂಬಡ್ತಿ ಕಾಯ್ದೆ; ಸುಪ್ರೀಂಕೋರ್ಟ್  ಮೊರೆ ಹೋಗಲು ಅಹಿಂಸಾ ನಿರ್ಧಾರ

June 25, 2018

ಮೈಸೂರು: ಎಸ್ಸಿ-ಎಸ್ಟಿ ಸರ್ಕಾರಿ ನೌಕರರಿಗೆ ಮುಂಬಡ್ತಿ ನೀಡುವ ಸಂಬಂಧ ವಿಶೇಷ ಕಾಯ್ದೆ ತಂದು ಅನುಷ್ಠಾನಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಅತೀ ಶೀಘ್ರದಲ್ಲೇ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಲಾಗುವುದು ಎಂದು ಅಹಿಂಸಾ ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಕೆ.ನಂಜಯ್ಯ ತಿಳಿಸಿದರು.

ಈ ಬಗ್ಗೆ ದೂರವಾಣಿ ಮುಖೇನ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮುಂಬಡ್ತಿ ವಿಶೇಷ ಕಾಯಿದೆ ಸಂಬಂಧ ಕಳೆದ 25 ವರ್ಷಗಳಿಂದ ಅಹಿಂಸಾ ಸಂಘಟನೆ ಕಾನೂನು ಹೋರಾಟ ನಡೆಸುತ್ತಿದೆ. ಅಲ್ಲದೆ, ಇದರ ವಿರುದ್ಧ 2017ರ ಫೆಬ್ರವರಿ ತಿಂಗಳಲ್ಲಿ ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನಲ್ಲಿ ನಮ್ಮ ಪರ ತೀರ್ಪು ಬಂದಿತ್ತು. ಈ ಆದೇಶವನ್ನು ರಾಜ್ಯ ಸರ್ಕಾರ ಈಗಾಗಲೇ ಅನುಷ್ಠಾನಗೊಳಿಸಿದೆ. ಮತ್ತೆ ರಾಜ್ಯ ಸರ್ಕಾರ ನೂತನ ಕಾಯಿದೆ ಪ್ರಕಾರ ಅನುಷ್ಠಾನಗೊಳಿಸಲು ಮುಂದಾದರೆ, ಆಡಳಿತಾತ್ಮಕವಾಗಿ ಸಾಕಷ್ಟು ಗೊಂದಲ ನಿರ್ಮಾಣವಾಗುತ್ತದೆ. ಮುಂಬಡ್ತಿ ವಿಷಯದಲ್ಲಿ ಶೇ.82 ರಷ್ಟು ಅಹಿಂಸಾ ಸಾಕಷ್ಟು ಅನ್ಯಾಯವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆದ್ದರಿಂದ ರಾಜ್ಯ ಸರ್ಕಾರದ ನಿರ್ಧಾರವನ್ನು ಅತೀ ಶ್ರೀಘ್ರದಲ್ಲೆ ಸುಪ್ರೀಂಕೋರ್ಟ್ ಪ್ರಶ್ನಿಸಿ, ತಡೆಯಾಜ್ಞೆ ತರುವ ಪ್ರಯತ್ನಿಸಲಾಗುವುದು ಮತ್ತು ಇದರ ವಿರುದ್ಧ ಸಾರ್ವಜನಿಕವಾಗಿಯೂ ಹೋರಾಟ ತೀವ್ರಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

ನಮ್ಮ ಸಂಘದ ಹಿಂದಿನ ಹೋರಾಟದ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ, ನೂತನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ನಾವು ಅಧಿಕಾರಕ್ಕೆ ಬಂದರೆ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದರು. ಇದೀಗ ಅವರೆ ಈ ಕಾಯಿದೆಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವುದು ಬೇಸರ ಸಂಗತಿ ಎಂದರು.

Translate »