ಸಿದ್ದರಾಮಯ್ಯ ಮೇಲೆರಗಿದ ಹಿರಿಯ ಕಾಂಗ್ರೆಸ್ಸಿಗರು!
ಮೈಸೂರು

ಸಿದ್ದರಾಮಯ್ಯ ಮೇಲೆರಗಿದ ಹಿರಿಯ ಕಾಂಗ್ರೆಸ್ಸಿಗರು!

September 27, 2019

ಬೆಂಗಳೂರು, ಸೆ.26(ಕೆಎಂಶಿ)- ಉಪ ಚುನಾವಣೆ ಸಿದ್ಧತೆ ಬಗ್ಗೆ ಇಂದು ನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣೆ ಸಮಿತಿ ಸಭೆಯಲ್ಲಿ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಏಕವಚನದಲ್ಲಿ ವಾಕ್ಸಮರ ನಡೆದಿದ್ದಲ್ಲದೆ, ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತು.

ಮತ್ತೊಂದೆಡೆ ಎಐಸಿಸಿಯ ಮಾಜಿ ಪ್ರಧಾನ ಕಾರ್ಯ ದರ್ಶಿ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಮತ್ತು ದಿನೇಶ್ ವಿರುದ್ಧ ಈ ಉಭಯ ನಾಯಕರು ವಾಗ್ದಾಳಿ ನಡೆಸಿದ್ದಲ್ಲದೆ, ಏಕವಚನದಲ್ಲಿ ಅವರನ್ನು ನಿಂದಿಸಿ, ಪಕ್ಷ ಬಂಡಾಯದ ದಿಕ್ಕಿಗೆ ಸಾಗಲು ನೀವೇ ಕಾರಣ ಎಂದು ಆರೋಪ ಮಾಡಿದರು. ಈ ಹಂತದಲ್ಲಿ ಸಿದ್ದರಾಮಯ್ಯ ಸಭೆಯಿಂದ ಹೊರನಡೆಯಲು ಮುಂದಾ ದಾಗ ಅಲ್ಲಿಯೇ ಇದ್ದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಮಾಧಾನಪಡಿಸಿ, ಕುಳ್ಳಿರಿಸಿದ್ದಲ್ಲದೆ, ಸಭೆಯನ್ನು ಹತೋ ಟಿಗೆ ತೆಗೆದುಕೊಂಡರು. ಸಭೆ ಪ್ರಾರಂಭದಲ್ಲೇ ಮಾಜಿ ಉಪಮುಖ್ಯಮಂತ್ರಿ ಹಾಗೂ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಪ್ರಮುಖ ಸಭೆಗಳಿಗೆ ಗೈರು ಆಗು ತ್ತಿರುವ ಬಗ್ಗೆ ಹರಿಪ್ರಸಾದ್, ದಿನೇಶ್ ಗುಂಡೂರಾವ್ ಅವರನ್ನು ಪ್ರಶ್ನೆ ಮಾಡಿದ್ದಲ್ಲದೆ, ಏಕಾಏಕಿ ಅವರ ವಿರುದ್ಧ ತಿರುಗಿ ಬಿದ್ದು, ನೀವು ಅಧ್ಯಕ್ಷರಾದ ನಂತರ ಪಕ್ಷ ಸಂಘಟನೆ ಮಾಡುವುದನ್ನು ಬಿಟ್ಟು ಬಂಡಾಯಕ್ಕೆ ಅನುವು ಮಾಡಿ ಕೊಡುತ್ತಿದ್ದೀರಿ. ಜೊತೆಗೆ ಒಬ್ಬ ವ್ಯಕ್ತಿಯ ಮಾತಿಗೆ ಮನ್ನಣೆ ನೀಡಿ, ಪಕ್ಷ ನಡೆಸುತ್ತೀದ್ದೀರಿ ಎಂದು ಹರಿಹಾಯ್ದರು.

ಇದರಿಂದ ಹುರಿದುಂಬಿದಂತಾದ ಕೇಂದ್ರದ ಮಾಜಿ ಸಚಿವ ಪಕ್ಷದ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ, ಸಿದ್ದರಾಮಯ್ಯ ವಿರುದ್ಧ ಏಕಾಏಕಿ ತಿರುಗಿ ಬಿದ್ದರು. ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್‍ನನ್ನು ಪಕ್ಕದಲ್ಲೇ ಕುಳ್ಳಿರಿಸಿಕೊಂಡು ಆತನಿಗೆ ಪ್ರತಿಪಕ್ಷದ ಸ್ಥಾನ ಕೊಡಿಸಲು ಹೊರಟಿದ್ದೀರಿ. ಅಷ್ಟೇ ಅಲ್ಲ, ಅವನನ್ನು ಜೊತೆಯಲ್ಲೇ ಕರೆದುಕೊಂಡು ತಿರುಗುತ್ತೀರಿ. ಆತ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾನೆ, ಸಂಸತ್ ಚುನಾವಣೆಯಲ್ಲಿ ನನ್ನ ಸೋಲಿಗೆ ಇವನೇ ಕಾರಣ. ನಾನು ದೂರು ನೀಡಿದರೂ, ಆತನ ವಿರುದ್ಧ ಕ್ರಮ ಜರುಗಿಸಿಲ್ಲ.

ಸಾರ್ವಜನಿಕವಾಗಿ ಇರುವ ಸತ್ಯವನ್ನು ಹೇಳಿದ್ದಕ್ಕೆ ರೋಷನ್ ಬೇಗ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರಿ. ಪಕ್ಕದಲ್ಲೇ ಇರುವ ರಮೇಶ್‍ಕುಮಾರ್ ವಿರುದ್ಧ ಶಿಸ್ತು ಕ್ರಮ ಏಕೆ ತೆಗೆದುಕೊಂಡಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಮುನಿಯಪ್ಪ ಏಕವಚನದಲ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಲೋ ಮುನಿಯಪ್ಪ ಕುಳಿತುಕೊಳ್ಳೊ, ಎಲ್ಲಾ ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ ತಕ್ಷಣವೇ ಕೆಂಡಾಮಂಡಲವಾದ ಮುನಿಯಪ್ಪ, ನೀನು ಯಾವ ಸೀಮೆ ನಾಯಕನೋ, ಹೋಗಲೋ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಇದೇ ಧಾಟಿಯಲ್ಲಿ ಸಿದ್ದರಾಮಯ್ಯ ಉತ್ತರ ಕೊಡಲು ಮುಂದಾದಾಗ, ರಮೇಶ್ ಕುಮಾರ್ ಪಕ್ಷ ದ್ರೋಹದ ಕೆಲಸ ಮಾಡಿದ್ದಾನೆ. ಬಿಜೆಪಿಯ ವರಿಂದÉ ದುಡ್ಡು ತೆಗೆದುಕೊಂಡು ನನ್ನ ವಿರುದ್ಧ ಕೆಲಸ ಮಾಡಿದ್ದಾನೆ. ಅವನನ್ನ ಜೊತೆಯಲ್ಲಿ ಹಾಕಿಕೊಂಡು ನೀವು ಸುತ್ತಾಡುತ್ತಿದ್ದೀರಾ. ಎಲ್ಲಾ ಸಭೆಗಳಲ್ಲಿ ನಿಮ್ಮ ಪಕ್ಕದಲ್ಲಿ ಅವನು ಕೂರಿಸಿಕೊಂಡಿದ್ದೀರಾ, ಮತ್ತೆ ನನಗೆ ಬುದ್ಧಿವಾದ ಹೇಳಲು ಬರುತ್ತೀರಾ ಎಂದು ಮುನಿಯಪ್ಪ ಹರಿಹಾಯ್ದರು. ನೀನು ಬಂದ ಮೇಲೆ ಮೂಲ ಕಾಂಗ್ರೆಸ್ಸಿಗರನ್ನು ತುಳಿದು, ಎಲ್ಲಾ ಅಧಿಕಾರವನ್ನು ಕಬಳಿಸಿ, ಇದೀಗ ನಿಷ್ಠಾವಂತರನ್ನು ಮೂಲೆಗುಂಪು ಮಾಡಲು ಹೊರಟಿದ್ದೀಯಾ. ನೀನು ಒಬ್ಬ ನಾಯಕನಾ ಎಂದು ಏರುಧ್ವನಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಇದರಿಂದ ಸಭೆಯಲ್ಲಿ ಅಪಮಾನಕ್ಕೆ ಸಿಲುಕಿ ದಂತಾದ ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಎದ್ದು ಮುನಿಯಪ್ಪನವರ ಮೇಲೆ ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಅವರೂ ಕೂಡಾ ತಮ್ಮ ಸ್ಥಾನದಿಂದ ಎದ್ದಿದ್ದಲ್ಲದೆ, ಅವರ ಬಳಿ ಕೈ ಎತ್ತಿ ತೆರಳಲು ಮುಂದಾದರು.

ಈ ಹಂತದಲ್ಲಿ ಸಿದ್ದರಾಮಯ್ಯ, ನಾನೇ ಸಭೆಯಿಂದ ಹೊರ ಹೋಗುತ್ತೇನೆ. ನಿಮ್ಮ ಸಹವಾಸ ಬೇಡ ಎಂದಾಗ ಮಧ್ಯೆ ಪ್ರವೇಶಿಸಿದ ವೇಣುಗೋಪಾಲ್, ಅವರನ್ನು ಸಮಾಧಾನಪಡಿಸಿ ಕುಳ್ಳಿರಿಸಿದ್ದಲ್ಲದೆ, ಸಭೆಯನ್ನು ತಮ್ಮ ಹತೋಟಿಗೆ ತೆಗೆದುಕೊಂಡರು. ನಂತರ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಗೊಂದಲ ನಿರ್ಮಾಣವಾಗಿದ್ದಲ್ಲದೆ, ಬಿಜೆಪಿಗೆ ತೆರಳಿರುವ ತಮ್ಮ ಆಪ್ತ ಅನರ್ಹ ಶಾಸಕರನ್ನು ಈಗಲೂ ಬದುಕಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಸಿದ್ದರಾಮಯ್ಯ ವಿರುದ್ಧ ಬಂದಿತು.

ಇದರ ನಡುವೆ ಹುಣಸೂರು ಕ್ಷೇತ್ರಕ್ಕೆ ಹೆಚ್.ಪಿ.ಮಂಜುನಾಥ್,ಕೆ.ಆರ್.ಪೇಟೆಯಿಂದ ಕೆ.ಬಿ.ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಕೆ.ಆರ್.ಪುರ ಂನಿಂದ ನಾರಾಯಣಸ್ವಾಮಿ, ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಲಖನ್ ಜಾರಕಿಹೊಳಿ, ರಾಣೇಬೆನ್ನೂರು ಕ್ಷೇತ್ರದಿಂದ ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ್, ಹೊಸಪೇಟೆ ಕ್ಷೇತ್ರದಿಂದ ಸೂರ್ಯನಾರಾಯಣ ರೆಡ್ಡಿ ಮತ್ತು ಕಾಗವಾಡ ಕ್ಷೇತ್ರದಿಂದ ಪ್ರಕಾಶ್ ಹುಕ್ಕೇರಿ ಸ್ಪರ್ಧೆಗಿಳಿಸಲು ತೀರ್ಮಾನಿಸಿದಂತಿದೆ. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಶಿವರಾಜ್, ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಪದ್ಮಾವತಿ ಸುರೇಶ್ ಅವರು ಪಕ್ಷದ ಅಭ್ಯರ್ಥಿಗಳಾಗಬಹುದು. ಈ ಮಧ್ಯೆ ಅನರ್ಹಗೊಂಡ ಕಾಂಗ್ರೆಸ್ ಶಾಸಕರ ಮೇಲೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಮೆದುಧೋರಣೆ ಇದೆ ಎಂಬ ಆರೋಪ ಕೇಳಿ ಬಂದಿದ್ದು ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ರಣಾಂಗಣಕ್ಕಿಳಿಯಲು ಸಜ್ಜಾಗಿದ್ದ ಶರತ್ ಬಚ್ಚೇಗೌಡ ಅವರಿಗೆ ಟಿಕೆಟ್ ನೀಡಲು ಪಕ್ಷದಲ್ಲಿ ಒತ್ತಡವಿದ್ದರೂ ಸಿದ್ಧರಾಮಯ್ಯ ಅದಕ್ಕೆ ಒಪ್ಪಲಿಲ್ಲ.

ಹೊಸಕೋಟೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಂ.ಟಿ.ಬಿ.ನಾಗರಾಜ್ ಅವರನ್ನು ಸೋಲಿಸಬೇಕೆಂದರೆ ಹಿರಿಯ ನಾಯಕ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ನೀಡಬೇಕು ಎಂದು ಪಕ್ಷದ ನಾಯಕರು ವಾದಿಸಿದ್ದರು.

ಆದರೆ ಬೇರೆ ಪಕ್ಷದಿಂದ ಶರತ್ ಬಚ್ಚೇಗೌಡರನ್ನು ಕರೆತಂದು ಟಿಕೆಟ್ ನೀಡುವುದಕ್ಕಿಂತ ಪಕ್ಷದವರೇ ಆದ ಭೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಸುರೇಶ್ ಅವರಿಗೆ ಟಿಕೆಟ್ ನೀಡಲು ಸಿದ್ದರಾಮಯ್ಯ ಪಟ್ಟು ಹಿಡಿದು ಬಹುತೇಕ ಸಫಲರಾಗಿದ್ದಾರೆ.
ಶರತ್ ಬಚ್ಚೇಗೌಡ ಅವರು ಬೇರೆ ಪಕ್ಷದವರು.ನಾವು ನಮ್ಮ ಪಕ್ಷದವರಿಗೆ ಟಿಕೆಟ್ ಕೊಡೋಣ.ಬೇರೆಯವರಿಗೆ ಬೇಡ ಎಂದು ಅವರು ಪಟ್ಟು ಹಿಡಿದ ಪರಿಣಾಮವಾಗಿ ಕೈ ಪಾಳೆಯದ ನಾಯಕರು ಬಲವಾಗಿ ತಮ್ಮ ವಾದವನ್ನು ಮಂಡಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿವೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುಧಾಕರ್ ಅವರ ವಿರುದ್ಧ ಜೆಡಿಎಸ್‍ನಿಂದ ಆಂಜನಪ್ಪ ಅವರನ್ನು ಕರೆದುಕೊಂಡು ಬಂದು ಟಿಕೆಟ್ ನೀಡಬೇಕು.ಆ ಮೂಲಕ ಸುಧಾಕರ್ ಅವರ ಸೋಲಿಗೆ ಕಾರಣವಾಗ ಬೇಕು ಎಂಬ ವಾದವನ್ನೂ ಸಿದ್ಧರಾಮಯ್ಯ ಒಪ್ಪಿಲ್ಲ ಎಂದು ಇದೇ ಮೂಲಗಳು ಹೇಳಿವೆ.

Translate »