ರಾಜ್ಯದ ಉಪ ಚುನಾವಣೆ ಮುಂದೂಡಿಕೆ
ಮೈಸೂರು

ರಾಜ್ಯದ ಉಪ ಚುನಾವಣೆ ಮುಂದೂಡಿಕೆ

September 27, 2019

ಬೆಂಗಳೂರು, ಸೆ.26(ಕೆಎಂಶಿ)-ರಾಜ್ಯದ 15 ಕ್ಷೇತ್ರಗಳಿಗೆ ಅ.21ರಂದು ನಡೆಯಬೇಕಾಗಿದ್ದ ಚುನಾವಣೆಯನ್ನು ಮುಂದೂ ಡುವುದಾಗಿ ಕೇಂದ್ರ ಚುನಾವಣಾ ಆಯೋಗದ ವಕೀಲರು ಮಂಡಿಸಿದ ಪ್ರಸ್ತಾಪವನ್ನು ಅಂಗೀಕರಿಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ 15 ಅನರ್ಹ ಶಾಸಕರ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಮುಂದೂಡಿದೆ.

2ನೇ ದಿನವಾದ ಇಂದೂ ಸಹ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಿತು. ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ಇಂದು ಸುದೀರ್ಘವಾಗಿ ತಮ್ಮ ವಾದ ಮಂಡಿಸಿದರು. ಉಪ ಚುನಾವಣೆಯನ್ನು ಮುಂದೂಡ ಬೇಕು ಅಥವಾ ಅನರ್ಹ ಶಾಸಕರಿಗೆ ಚುನಾವಣೆ ಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಮಧ್ಯಂತರ ಆದೇಶ ನೀಡಬೇಕು ಎಂಬ ಅನರ್ಹ ಶಾಸಕರ ಪರ ವಕೀಲರ ವಾದಕ್ಕೆ ಪ್ರತಿ ಯಾಗಿ ದಿನ ಪೂರ್ತಿ ತಮ್ಮ ವಾದ ಮಂಡಿ ಸಿದ ಕಪಿಲ್ ಸಿಬಲ್, ಚುನಾವಣೆ ಯನ್ನು ಮುಂದೂಡಲೂಬಾರದು, ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶ ನೀಡಬಾರದು. ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಆದೇಶವನ್ನು ಎತ್ತಿ ಹಿಡಿಯಬೇಕು ಎಂದು ಬಲವಾದ ವಾದ ಮಂಡಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್‍ನ ನ್ಯಾ. ಎನ್.ವಿ.ರಮಣ್ ನೇತೃತ್ವದ ತ್ರಿಸದಸ್ಯ ಪೀಠ, ಸಭಾಧ್ಯಕ್ಷರ ಆದೇಶದ ಬಗ್ಗೆ ತೀರ್ಪು ನೀಡಲು ಕಾಲಾವಕಾಶ ಬೇಕು, ಪ್ರತಿ ಶಾಸಕರ ವಾದಾಂಶ ಅರ್ಹತೆ ಆಧರಿಸಿ ತೀರ್ಪು ನೀಡಬೇಕಾಗಿದೆ. ಚುನಾವಣೆಗೆ ಅವಕಾಶ ನೀಡಿದರೆ, ಶಾಸಕರ ಹಕ್ಕಿನ ಪ್ರಶ್ನೆ ಅಪೂರ್ಣ, ರಾಜೀನಾಮೆ ಅನರ್ಹತೆ ಪ್ರಶ್ನೆ ಬಾಕಿ ಉಳಿಯಲಿದೆ. ಸಭಾಧ್ಯಕ್ಷರ ಆದೇಶಕ್ಕೆ ತಡೆ ನೀಡಿದರೆ, ಗೊಂದಲ ಮುಂದುವರೆಯುತ್ತಿತ್ತು. ಸಾಂವಿಧಾನಿಕ ಪ್ರಶ್ನೆಗಳಿರುವು ದರಿಂದ ಅಂತಿಮ ತೀರ್ಪು ನೀಡಲು ಸಮಯಾವಕಾಶ ಬೇಕಿದೆ. ಅಷ್ಟರಲ್ಲಿ ಚುನಾವಣೆ ನಡೆದರೆ ಶಾಸಕರ ಅರ್ಜಿ ನಿಷÀ್ಪಲವಾಗುತ್ತದೆ ಎಂದು ನ್ಯಾಯಮೂರ್ತಿಗಳು ಹೇಳು ತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಚುನಾವಣಾ ಆಯೋಗದ ಪರ ವಕೀಲ ರಾಕೇಶ್ ತ್ರಿವೇದಿ ಅವರು, ಉಪ ಚುನಾವಣೆಗೆ ತಡೆ ನೀಡಿ ನೀವು ಆದೇಶ ಹೊರಡಿಸಿದರೆ, ಅದು ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆ ನಡೆಯಬೇಕಾಗುತ್ತದೆ. ಆ ವಿಚಾರಣೆಯು ಬಹಳ ದಿನಗಳ ಕಾಲ ನಡೆಯಲಿರುವುದರಿಂದ ಚುನಾವಣೆ ನಡೆಸಬೇಕಾಗಿರುವ ಕ್ಷೇತ್ರಗಳ ಮತದಾರರು ತಮ್ಮ ಪ್ರತಿನಿಧಿಗಳೇ ಇಲ್ಲದವರಾಗುತ್ತಾರೆ. ಮತದಾರರಿಗೆ ತಮ್ಮ ಪ್ರತಿನಿಧಿ ಹೊಂದುವ ಹಕ್ಕು ಇದೆ. ಆದ್ದರಿಂದ ದಯವಿಟ್ಟು ನೀವು ಚುನಾವಣೆಗೆ ತಡೆ ನೀಡಿ ಆದೇಶ ಹೊರಡಿಸಬೇಡಿ. ನಾವೇ (ಚುನಾವಣಾ ಆಯೋಗ) ಚುನಾವಣೆಯನ್ನು ಕೆಲ ಸಮಯ ಮುಂದೂಡುತ್ತೇವೆ ಎಂದು ಪ್ರಸ್ತಾಪ ಸಲ್ಲಿಸಿದರು.

ಚುನಾವಣಾ ಆಯೋಗದ ಪರ ವಕೀಲರ ಪ್ರಸ್ತಾವನೆಗೆ ಅನರ್ಹ ಶಾಸಕರ ಪರ ವಕೀಲರು ಹಾಗೂ ಕೆಪಿಸಿಸಿ ಪರ ವಕೀಲರು ಮತ್ತು ಇತರೆ ಪ್ರತಿವಾದಿಗಳ ಪರ ವಕೀಲರು ತಮ್ಮ ಆಕ್ಷೇಪಣೆ ಇಲ್ಲ ಎಂದು ಹೇಳಿದಾಗ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು ಚುನಾವಣಾ ಆಯೋಗದ ಪ್ರಸ್ತಾಪಕ್ಕೆ ಮನ್ನಣೆ ನೀಡಿ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿತು. ಚುನಾವಣಾ ಆಯೋಗವೇ ಚುನಾವಣೆಯನ್ನು ಮುಂದೂಡುವ ಪ್ರಸ್ತಾವನೆ ಮುಂದಿಟ್ಟ ಕಾರಣ ಸುಪ್ರೀಂಕೋರ್ಟ್ ಅನರ್ಹತೆ ಬಗ್ಗೆ ಯಾವುದೇ ಮಧ್ಯಂತರ ತೀರ್ಪು ನೀಡಲಿಲ್ಲ. ಹೀಗಾಗಿ ಅನರ್ಹ ಶಾಸಕರು ಸದ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂತ್ರಿಮಂಡಲ ಇಲ್ಲವೆ ಸರ್ಕಾರದಲ್ಲಿ ಯಾವುದೇ ಅಧಿಕಾರ ಪಡೆಯುವಂತಿಲ್ಲ. ಅಕ್ಟೋಬರ್ 22 ರಿಂದ ಪ್ರಕರಣದ ವಿಸ್ತøತ ವಿಚಾರಣೆ ನಡೆಸಲು ನಿರ್ಧರಿಸಿರುವ ಪೀಠ, ನಂತರ ವಾದ-ಪ್ರತಿವಾದ ಪೂರ್ಣಗೊಂಡ ಮೇಲೆ ತಮ್ಮ ತೀರ್ಪು ನೀಡುವುದಾಗಿ ತಿಳಿಸಿದೆ. ಅಲ್ಲಿಯವರೆಗೂ ಯಥಾಸ್ಥಿತಿ ಮುಂದುವರೆಯಲಿದೆ.

ಕಳೆದ ಎರಡು ದಿನಗಳಿಂದ ಈ ಸಂಬಂಧ ವಿಚಾರಣೆ ನಡೆದಿದ್ದು, ಇಂದು ಅನರ್ಹ ಶಾಸಕರ ಪರ ಮತ್ತು ವಿರೋಧ ಸುದೀರ್ಘ ವಾದ-ಪ್ರತಿವಾದ ನಡೆಯಿತು. ಅನರ್ಹ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಸಭಾಧ್ಯಕ್ಷರ ಕಚೇರಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅನರ್ಹ ಶಾಸಕರ ಡಾ.ಸುಧಾಕರ್ ಪರ ವಕೀಲ ಸುಂದರಂ ವಾದ ಮಂಡಿಸಿದ್ದರು. ಅನರ್ಹ ಶಾಸಕರ ವಿರುದ್ಧ ಹಾಗೂ ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಉಪಚುನಾವಣೆಯಲ್ಲಿ ಅನರ್ಹರು ಸ್ಪರ್ಧಿಸುವುದು ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ಸಭಾಧ್ಯಕ್ಷರ ತೀರ್ಮಾನವನ್ನು ಪೀಠ ಪ್ರಶ್ನೆ ಮಾಡುವಂತಿಲ್ಲ. ಶಾಸಕರನ್ನು ಅನರ್ಹಗೊಳಿಸಿರುವುದು ವಿಧಾನಸಭೆ ಅವಧಿಯವರೆಗೆ, ಉಪ ಚುನಾವಣೆಗೆ ಸ್ಪರ್ಧಿಸಿದರೆ ಅನರ್ಹತೆಯ ಅಗತ್ಯವೇನಿದೆ. ಅನರ್ಹಗೊಳಿಸುವಾಗ ಅವಧಿ ನಿಗದಿಪಡಿಸುವ ಅಧಿಕಾರ ಸಭಾಧ್ಯಕ್ಷರಿಗೆ ಇದೆ. ಅನರ್ಹಗೊಳಿಸಿದವರ ಕ್ಷೇತ್ರಕ್ಕೆ ಆರು ತಿಂಗಳೊಳಗೆ ಚುನಾವಣೆ ನಡೆಯಲೇಬೇಕಲ್ಲಾ ಆಗ ಸ್ಪರ್ಧಿಸಿದರೆ ತೊಂದರೆ ಏನಿದೆ ಸಭಾಧ್ಯಕ್ಷರ ಕಚೇರಿ ಸಂವಿಧಾನದತ್ತವಾದ ಸ್ವಾಯತ್ತ ಸಂಸ್ಥೆ. ಅನರ್ಹತೆಗೂ ಒಂದು ಅರ್ಥ ಬೇಕಲ್ಲಾ ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು.

ಸಭಾಧ್ಯಕ್ಷರ ಆದೇಶವನ್ನು ಚುನಾವಣಾ ಆಯೋಗದ ಅಧಿಸೂಚನೆ ನಿರ್ಜೀವ ಗೊಳಿಸಿದರೆ. ಆಗ 10ನೇ ಶೆಡ್ಯೂಲ್ ದುರ್ಬಲವಾಗಲಿದೆ. ಈ ಪ್ರಕರಣದ ತೀರ್ಪಿನಿಂದ ಬಹಳಷ್ಟು ಪ್ರಕರಣಗಳಿಗೆ ಉದಾಹರಣೆಯಾಗಲಿದೆ. ಉಮೇಶ್ ಜಾಧವ್ ರಾಜೀನಾಮೆ ಸ್ವೀಕರಿಸಿ, ಉಳಿದವರನ್ನು ಅನರ್ಹಗೊಳಿಸಿದ್ದಾರೆ ಎಂದು ವಾದಿಸಿದ್ದಾರೆ. ಆದರೆ ಜಾಧವ್ ಖುದ್ದು ಸ್ಪೀಕರ್‍ಗೆ ರಾಜೀನಾಮೆ ನೀಡಿ ವಿವರಣೆ ಕೊಟ್ಟಿದ್ದಾರೆ ಎಂದು ಸಿಬಲ್ ವಾದಿಸಿದರು.

ಶಾಸಕ ತಾನು ಆಯ್ಕೆಯಾಗಿದ್ದ ವಿಧಾನಸಭೆಯ ಅವಧಿ ಮುಗಿದಾಗ ಮಾತ್ರ ಅನರ್ಹತೆಯ ಅವಧಿಯು ಮುಗಿಯುತ್ತದೆ. ಅನರ್ಹಗೊಂಡ ಕೆಲವೇ ದಿನಗಳಲ್ಲಿ ನಡೆಯುವ ಉಪ ಚುನಾವಣೆಯ ಸ್ಪರ್ಧೆಗೆ ಇವರಿಗೆ ಅವಕಾಶ ನೀಡಿದರೆ, ರಾಜೀ ನಾಮೆಗೂ ಅನರ್ಹತೆಗೂ ವ್ಯತ್ಯಾಸವೇ ಉಳಿಯುವುದಿಲ್ಲ ಎಂದು ಪೀಠಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದರು. ಒಂದು ಪಕ್ಷವನ್ನು ಪ್ರತಿನಿಧಿಸಿ, ಶಾಸಕರಾದಾಗ ವಿಶ್ವಾಸ ಮತಯಾಚನೆ ವೇಳೆ ಕಲಾಪಕ್ಕೆ ಹಾಜರಾಗಬೇಕು. ಎಂದು ವಿಪ್ ಜಾರಿ ಮಾಡಿದ್ದಾರೆ ಎಂಬ ಕಾರಣದಿಂದಲ್ಲ. ಬದಲಿಗೆ ಸರ್ಕಾರದ ರಕ್ಷಣೆಗಾಗಿ ಹಾಜರಾಗಬೇಕು. ಆದರೆ ಆಯಾ ಪಕ್ಷಗಳ ಸದಸ್ಯರಾಗಿದ್ದೇವೆ ಎಂದು ಹೇಳುತ್ತಿರುವ ಅನರ್ಹರು ಸರ್ಕಾರ ಬೀಳುವ ಸಂದರ್ಭದಲ್ಲಿ ಕಲಾಪಕ್ಕೆ ಗೈರು ಆಗಿದ್ದೇಕೆ ಎಂದು ಸಿಬಲ್ ಪ್ರಶ್ನಿಸಿದರು.

Translate »