ಪ್ರವಾಸಿಗರಿಗೆ `ರತ್ನ ಖಚಿತ ಸಿಂಹಾಸನ’ ದರ್ಶನ ಭಾಗ್ಯ
ಮೈಸೂರು

ಪ್ರವಾಸಿಗರಿಗೆ `ರತ್ನ ಖಚಿತ ಸಿಂಹಾಸನ’ ದರ್ಶನ ಭಾಗ್ಯ

September 27, 2019

ಮೈಸೂರು, ಸೆ.26(ಎಂಟಿವೈ)- ದಸರಾ ಉತ್ಸವದ ಹಿನ್ನೆಲೆಯಲ್ಲಿ ಈ ಬಾರಿಯೂ ದರ್ಬಾರ್ ಹಾಲ್‍ನಲ್ಲಿ ಜೋಡಿಸಲಾಗಿರುವ ರತ್ನ ಖಚಿತ ಚಿನ್ನದ ಸಿಂಹಾಸನ ನೋಡುವ ಭಾಗ್ಯ ಪ್ರವಾಸಿಗರಿಗೆ ಇಂದಿನಿಂದ ಪ್ರಾಪ್ತಿಯಾಗಿದ್ದು, ಇದಕ್ಕೆ  ಅರಮನೆಯ ಪ್ರವೇಶ ಶುಲ್ಕದೊಂದಿಗೆ ಹೆಚ್ಚುವರಿಯಾಗಿ 50 ರೂ. ಪಾವತಿಸಬೇಕಿದೆ.

ನವರಾತ್ರಿಯ ಹಿನ್ನೆಲೆಯಲ್ಲಿ ಅರಮನೆ ಯಲ್ಲಿ ನಡೆಯಲಿರುವ ಖಾಸಗಿ ದರ್ಬಾರ್ ಗಾಗಿ ಸಿಂಹಾಸನವನ್ನು ದರ್ಬಾರ್ ಹಾಲ್ ನಲ್ಲಿ ಜೋಡಿಸಲಾಗುತ್ತದೆ. ದಸರಾ ಮಹೋತ್ಸವ ಮುಗಿದ ನಂತರ ಮತ್ತೆ ಬಿಡಿ ಬಿಡಿಯಾಗಿಸಿ ಸ್ಟ್ರಾಂಗ್ ರೂಮ್‍ನಲ್ಲಿ ಸುರಕ್ಷಿತವಾಗಿಡಲಾಗುತ್ತದೆ. ಕೇವಲ ದಸರಾ ಮಹೋತ್ಸವದ ಸಂದರ್ಭದಲ್ಲಿ 20ರಿಂದ 25 ದಿನ ಮಾತ್ರ ಐತಿಹಾಸಿಕ ಸಿಂಹಾಸನ ದರ್ಬಾರ್ ಹಾಲ್‍ನಲ್ಲಿರುತ್ತದೆ. ಯದುವಂಶದ ಪ್ರತೀಕವೂ, ಅರಸೊತ್ತಿಗೆ ವೈಭವಕ್ಕೆ ನೈಜ ಸಾಕ್ಷಿಯಂತಿರುವ ಸಿಂಹಾಸನ ವನ್ನು ನೋಡಲು ಜನ ಕುತೂಹಲಭರಿತರಾಗಿರುತ್ತಾರೆ. ಈ ಹಿಂದೆ ದಸರಾ ಸಂದರ್ಭ ಅರಮನೆಗೆ ಬರುವ ಪ್ರವಾಸಿಗರಿಗೆ ಸಿಂಹಾಸನ ವೀಕ್ಷಣೆಗೆ ಅವಕಾಶ ನೀಡ ಲಾಗುತ್ತಿತ್ತು. ಆದರೆ ಆರೇಳು ವರ್ಷದಿಂದ ಸಿಂಹಾಸನಕ್ಕೆ ಪರದೆ ಬಿಟ್ಟು ನಿರ್ಬಂಧ ಹಾಕಲಾಗಿತ್ತು. ಆದರೆ ಸಾರ್ವಜನಿಕ ವಲಯದಿಂದ ಮನವಿ ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಪ್ರಮೋದಾ ದೇವಿ ಒಡೆಯರ್ ಸಿಂಹಾಸನ ವೀಕ್ಷಣೆಗೆ ಬಯಸುವವ ರಿಂದ ಪ್ರತ್ಯೇಕ 50 ರೂ.ಶುಲ್ಕ ಪಡೆದು, ವೀಕ್ಷಣೆಗೆ ಅವಕಾಶ ನೀಡುವಂತೆ ಸೂಚಿಸಿದ್ದರು. ಹಾಗಾಗಿ ಕಳೆದ ವರ್ಷದಿಂದ ಸಿಂಹಾಸನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಕೈಗೆ ಬ್ಯಾಂಡ್: ಅರಮನೆ ವೀಕ್ಷಣೆಗೆ ವಯಸ್ಕರು 70 ರೂ. ಮಕ್ಕಳಿಗೆ 35 ರೂ. ಪ್ರವೇಶ ದರ ನಿಗದಿ ಮಾಡಲಾಗಿದೆ. ಇದರೊಂದಿಗೆ ಸಿಂಹಾಸನ ವೀಕ್ಷಣೆ ಮಾಡಲು ಇಚ್ಛಿಸುವವರು 50 ರೂ. ಪಾವತಿಸಿದರೆ, ಕೈಗೆ ಬ್ಯಾಂಡ್ ಕಟ್ಟಲಾಗುತ್ತದೆ. ಸಾವಿರಾರು ಮಂದಿ ಮೊದಲ ದಿನವಾದ ಇಂದು ಹೆಚ್ಚುವರಿಯಾಗಿ 50 ರೂ. ಪಾವತಿಸಿ ದರ್ಬಾರ್ ಹಾಲ್‍ನಲ್ಲಿದ್ದ ರತ್ನ ಖಚಿತ ಸಿಂಹಾಸನವನ್ನು ವೀಕ್ಷಿಸಿದರು.  ಅರಮನೆಯ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ವೀಕ್ಷಿಸಲು ಬಂದಿದ್ದ ಕೆಲ ಪ್ರವಾಸಿಗರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

Translate »