ಹಲ್ಲೆಕೋರ ಸಹೋದರರಿಗೆ ಜೈಲು ಶಿಕ್ಷೆ
ಮೈಸೂರು

ಹಲ್ಲೆಕೋರ ಸಹೋದರರಿಗೆ ಜೈಲು ಶಿಕ್ಷೆ

May 27, 2018

ಮೈಸೂರು:  ಇಬ್ಬರು ಹಲ್ಲೆಕೋರ ಸಹೋದರರಿಗೆ ಜೈಲು ಶಿಕ್ಷೆ ವಿಧಿಸಿ ಮೈಸೂರಿನ ಒಂದನೇ ಅಪರ ಜಿಲ್ಲಾ ಮತ್ತ ಸತ್ರ ನ್ಯಾಯಾಧೀಶರಾದ ಎಸ್.ಸುಧೀಂದ್ರನಾಥ್ ಅವರು ತೀರ್ಪು ನೀಡಿದ್ದಾರೆ.

ನಂಜನಗೂಡು ತಾಲೂಕು ಕೆಂಪಿಸಿದ್ದನಹುಂಡಿ ಗ್ರಾಮದವರಾದ ಕೆ.ಜೆ.ಉಮೇಶ್ (19) ಮತ್ತು ಕೆ.ಜೆ.ನಾಗೇಶ್ (24) ಶಿಕ್ಷೆಗೆ ಗುರಿಯಾದವರಾಗಿದ್ದು, ಉಮೇಶ್‍ಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ಮತ್ತು ನಾಗೇಶ್‍ಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಲಾಗಿದೆ.

ವಿವರ: ಶಿಕ್ಷೆಗೊಳಗಾದ ಸಹೋದರರು ಜಮೀನು ಮತ್ತು ಹಲ್ಲೆಗೊಳಗಾದ ಕೆ.ಕೆ.ಶಿವನಂಜ ಮತ್ತು ಕೆ.ಕೆ.ನಾಗರಾಜು ಸಹೋದರರ ಜಮೀನು ಅಕ್ಕಪಕ್ಕದಲ್ಲಿವೆ. 2014ರ ಜ.3ರಂದು ಈ ಹಲ್ಲೆಕೋರ ಸಹೋದರರು ತಮ್ಮ ಪಕ್ಕದ ಜಮೀನಿನ ತೆವರನ್ನು ಕಿತ್ತು ಹಾಕಿ ಉಳುಮೆ ಮಾಡಿದ್ದರು.

ಅಂದು ಸಂಜೆ ಈ ಸಂಬಂಧ ಪ್ರಶ್ನಿಸಲು ಅವರ ಮನೆ ಬಳಿ ಹೋದ ಕೆ.ಕೆ.ಶಿವನಂಜ ಅವರ ತಲೆ ಮೇಲೆ ಉಮೇಶ ಮಚ್ಚಿನಿಂದ ಹಲ್ಲೆ ಮಾಡಿ ತೀವ್ರ ಗಾಯಗೊಳಿಸಿದ್ದ. ಈ ವೇಳೆ ಹಲ್ಲೆ ಬಿಡಿಸಲು ಹೋದ ನಾಗರಾಜನ ಮೇಲೆ ನಾಗೇಶ್ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಈ ಘಟನೆಯಲ್ಲಿ ಶಿವನಂಜ ತೀವ್ರವಾಗಿ ಗಾಯಗೊಂಡರೆ, ನಾಗರಾಜುವಿಗೆ ಸಾಧಾರಣ ಗಾಯವಾಗಿತ್ತು.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರೂ ಹಲ್ಲೆಕೋರ ಸಹೋದರರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಅಜೀತ್ ಕುಮಾರ್ ಡಿ.ಹಮಿಗೆ ವಾದ ಮಂಡಿಸಿದ್ದರು.

Translate »