ಬೇಲೂರು: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಮುಖಂಡರೇ ನೇರ ಹೊಣೆಗಾರರಾಗಿದ್ದು, ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಾರ್ಯ ಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಪಟ್ಟಣದಲ್ಲಿ ನಡೆಯಿತು.
ಪಟ್ಟಣ ಮಂಜುನಾಥ ಕಲ್ಯಾಣ ಮಂಟಪ ದಲ್ಲಿ ಬಿಜೆಪಿ ಸೋಲಿನ ಆತ್ಮಾವಲೋಕನ ಸಭೆ ಏರ್ಪಡಿಸಲಾಗಿತ್ತು. ಬೇಲೂರು ಬಿಜೆಪಿ ಚುನಾವಣಾ ಉಸ್ತುವಾರಿ ನವಿಲೆ ಅಣ್ಣಪ್ಪ ಮಾತನಾಡುವ ವೇಳೆಯಲ್ಲಿ ಸಿಡಿಮಿಡಿ ಗೊಂಡ ಕಾರ್ಯಕರ್ತರು, ಇಲ್ಲಿನ ಮುಖಂ ಡರು ಬೇರೆ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಪ್ರಚಾರ ಕಾರ್ಯಕ್ಕೆ ಬರಲಿಲ್ಲ. ಇದರಿಂದ ಬಿಜೆಪಿ ಅಭ್ಯರ್ಥಿ ಏಕಾಂಗಿ ಹೋರಾಟ ಮಾಡುವಂತಾಯಿತು ಎಂದು ಹರಿಹಾದ್ದರಲ್ಲದೆ, ಕಾರ್ಯಕರ್ತರ ಅವಿರತ ಶ್ರಮದಿಂದ ಬೇಲೂರು ಕ್ಷೇತ್ರದಲ್ಲಿ ಬಿಜೆಪಿ 2ನೇ ಸ್ಥಾನ ದಕ್ಕಿದೆ. ಕಾರ್ಯ ಕರ್ತರನ್ನು ಸೋಲಿಗೆ ಹೊಣೆಗಾರರನ್ನಾಗಿ ಮಾಡಬಾರದು. ನಿಮ್ಮಂತಹ ಮುಖಂಡರೇ ಬೇಲೂರು ಬಿಜೆಪಿ ಸೋಲಿಗೆ ಕಾರಣ ಎಂದು ಕಿಡಿಕಾರಿದರು.
ಈ ವೇಳೆ ರಾಜ್ಯ ಕಾಫಿ ಪ್ರಕೋಷ್ಟ ಸದಸ್ಯ ಜಿ.ಕೆ.ಕುಮಾರ್ ಕಾರ್ಯಕರ್ತರಿಗೂ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ ವೇಳೆ, ಜಿ.ಕೆ.ಕುಮಾರ್ ಹಾಗೂ ಕಾರ್ಯಕರ್ತರ ನಡುವೆ ಕ್ಷಣ ಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಮಧ್ಯ ಪ್ರವೇಶಿಸಿದ ಬಿಜೆಪಿ ಪರಾಜಿತ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್, ಸೋಲಿನ ಆತ್ಮಾವಲೋಕನ ನಿಜವಾಗಿ ಕಾರ್ಯಕರ್ತರಿಂದಲೇ ನಡೆ ಯಬೇಕು. ಹೀಗಾಗಿ ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ಎಂದರು.
ಜಾವಗಲ್ ಬಿಜೆಪಿ ಕಾರ್ಯಕರ್ತ ಹಿತೇಂದ್ರ ಹಾಗೂ ಕಟ್ಟೆಸೋಮನಹಳ್ಳಿ ಕಾರ್ಯಕರ್ತ ಮಾತನಾಡಿ, ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಜಯ ಗಳಿಸುವ ಸೂಚನೆ ಇತ್ತು. ಆದರೆ ರಾಜ್ಯ ನಾಯಕರು ತಮ್ಮ ಸ್ವಪ್ರತಿಷ್ಟೆಗೆ ಚುನಾ ವಣೆ ಹತ್ತಿರದ ವೇಳೆಯಲ್ಲಿ ಬೇಲೂರು ಅಭ್ಯರ್ಥಿ ಘೋಷಣೆ ಮಾಡಿದ್ದು, ಇಂದಿನ ಸೋಲಿಗೆ ಪ್ರಮುಖ ಕಾರಣವಾಗಿದೆ. ಪ್ರಮುಖವಾಗಿ ಬಿಜೆಪಿ ಇಲ್ಲಿನ ಮುಖಂಡರು ಗ್ರಾಮೀಣ ಪ್ರದೇಶಗಳಿಗೆ ಪ್ರಚಾರಕ್ಕೆ ಬರಲಿಲ್ಲ. ಹಾಗೆಯೇ ಸ್ವಜಾತಿ ಪ್ರೀತಿಯನ್ನು ಬಹಳ ಅಚ್ಚುಕಟ್ಟಿನಿಂದ ನಿರ್ವಹಣೆ ಮಾಡಿ ಬಿಜೆಪಿ ಯನ್ನು ಬಲಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ದರಲ್ಲದೆ, ಇಂತಹ ಮುಖಂಡರು ನಮಗೆ ಬೇಕಿಲ್ಲ. ಇವರಿಗೆ ತಮ್ಮ ಸ್ಥಾನಕ್ಕೆ ತಕ್ಕಂತೆ ಕೆಲಸ ಮಾಡಲು ಅರ್ಹತೆ ಇಲ್ಲದ ಕಾರಣದಿಂದ ಉತ್ಸಾಹಿ ಯುವ ಮುಖಂಡ ರಿಗೆ ಸ್ಥಾನಗಳನ್ನು ಬಿಟ್ಟುಕೊಡಿ. ಇಲ್ಲವಾದರೆ ನಾವೇ ಬಲವಂತವಾಗಿ ಸ್ಥಾನದಿಂದ ಇಳಿ ಸುತ್ತೇ ಎಂದು ಎಚ್ಚರಿಕೆ ನೀಡಿದರು.
ಒಟ್ಟಾರೇ ಇಂದು ನಡೆದ ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಬಿಜೆಪಿ ಮುಖಂಡ ರನ್ನು ಕಾರ್ಯಕರ್ತರು ತೀವ್ರ ತರಾಟೆ ತೆಗೆದುಕೊಂಡಿದ್ದಲ್ಲದೆ, ಇನ್ನು 6 ತಿಂಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಛಿದ್ರವಾಗಲಿದೆ. ಪುನಃ ಕಾರ್ಯಕರ್ತರು ವೈಷಮ್ಯ ಮರೆತು ಬಿಜೆಪಿ ಗೆಲ್ಲಿಸಬೇಕು. ಮುಖಂಡರನ್ನು ನಂಬ ಬೇಡಿ. ನಮಗೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬೇಕು ಎಂದು ಆಗ್ರಹಿಸಿದ್ದು ಕಂಡು ಬಂತು.