ಲಿಂಗದೇವರು ಹಳೆಮನೆ ಸ್ಮರಣಾರ್ಥ ಮಂಜುನಾಥ ಬೆಳಕೆರೆ ರಚಿತ `ಶರೀಫ್’ ನಾಟಕ ಪ್ರದರ್ಶನ
ಮೈಸೂರು

ಲಿಂಗದೇವರು ಹಳೆಮನೆ ಸ್ಮರಣಾರ್ಥ ಮಂಜುನಾಥ ಬೆಳಕೆರೆ ರಚಿತ `ಶರೀಫ್’ ನಾಟಕ ಪ್ರದರ್ಶನ

June 15, 2018

ಮೈಸೂರು: ನಾಲ್ವಡಿ ಸೋಶಿಯಲ್, ಕಲ್ಚರಲ್ ಅಂಡ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ಲಿಂಗದೇವರು ಹಳೆಮನೆ ಸ್ಮರಣಾರ್ಥ ಮಂಜುನಾಥ ಬೆಳಕೆರೆ ರಚಿತ `ಶರೀಫ’ ನಾಟಕ ಪ್ರದರ್ಶನವನ್ನು ಜೂ.16ರಂದು ಆಯೋಜಿಸಲಾಗಿದೆ ಎಂದು ಲೇಖಕಿ ನಂದಾ ಹಳೆಮನೆ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹಳೆಮನೆಯ ಅಂಗಳದಲ್ಲಿ ಬೆಳಕೆರೆಯ ನೆನಪು’ ಶೀರ್ಷಿಕೆ ಯಡಿ ಲಿಂಗದೇವರು ಹಳೆಮನೆ ಹಾಗೂ ಇತ್ತೀಚೆಗೆ ನಿಧನರಾದ ರಂಗಾಯಣ ಕಲಾವಿದ ಮಂಜುನಾಥ ಬೆಳಕೆರೆ ಸ್ಮರಣಾರ್ಥ `ಶರೀಫ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಅಂದು ಸಂಜೆ 6.30ಕ್ಕೆ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಪ್ರದರ್ಶನಕ್ಕೆ ರಾಜರಾಜೇಶ್ವರಿ ವಸ್ತ್ರಾಲಂಕಾರದ ಬಿ.ಎಂ.ರಾಮಚಂದ್ರ ಚಾಲನೆ ನೀಡಲಿದ್ದು, ರಂಗ ನಿರ್ದೇಶಕ ಹೆಚ್.ಜನಾರ್ಧನ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಹಿರಿಯ ರಂಗಕರ್ಮಿ ಜಯರಾಂ ತಾತಾ ಚಾರ್ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ನಾಟಕಕ್ಕೆ ದಿನೇಶ್ ಚಮ್ಮಾಳಿಗೆ ನಿರ್ದೇಶನವಿದ್ದು, ಉದಯ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಟಕ ಒಂದೂವರೆ ಗಂಟೆಯ ಅವಧಿ ಹೊಂದಿದೆ. ಶರೀಫರ 19 ಪದಗಳನ್ನು ನಾಟಕದಲ್ಲಿ ಸಾದರಪಡಿಸುತ್ತಿದ್ದು, 35 ಮಂದಿ ರಂಗ ಕಲಾವಿದರು ಅಭಿನಯಿಸುತ್ತಿದ್ದಾರೆ. ಪ್ರದರ್ಶನಕ್ಕೆ 50 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದರು. ರಂಗನಿರ್ದೇಶಕ ದಿನೇಶ್ ಚಮ್ಮಾಳಿಗೆ, ಮೈಸೂರು ಮೈಮ್ ಟೀಮ್ ಅಧ್ಯಕ್ಷ ಗೌತಮ್ ಗೋಷ್ಠಿಯಲ್ಲಿದ್ದರು.

Translate »