ಕಲಾ ಮಂದಿರ ಮುಂಭಾಗ ಕೃತಕ ಜಲಪಾತಕ್ಕೆ ಚಾಲನೆ
ಮೈಸೂರು

ಕಲಾ ಮಂದಿರ ಮುಂಭಾಗ ಕೃತಕ ಜಲಪಾತಕ್ಕೆ ಚಾಲನೆ

July 13, 2018

ಮೈಸೂರು:  ಸಾಂಸ್ಕೃತಿಕ ಕೇಂದ್ರ ಬಿಂದು ಕಲಾಮಂದಿರದ ಮುಂಭಾಗ ನೂತನವಾಗಿ ನಿರ್ಮಿಸಿರುವ ಕೃತಕ ಜಲಪಾತ ಕಲಾ ರಸಿಕರನ್ನು ತನ್ನತ್ತ ಸೆಳೆಯುತ್ತಿದ್ದು, ಗುರುವಾರ ಉದ್ಘಾಟನೆಗೊಂಡಿತು. ಬ್ಯಾಂಕ್ ನೋಟ್ ಪೇಪರ್ ಮಿಲ್‍ನ ವ್ಯವಸ್ಥಾಪಕ ನಿರ್ದೇಶಕ ಜಗನ್ಮೋಹನ್ ರಾವ್ ಅವರು ಕೃತಕ ಜಲಪಾತವನ್ನು ಉದ್ಘಾಟಿಸಿದರು.

ನಂತರ ಕಿರುರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ನೋಟ್ ಪೇಪರ್ ಮಿಲ್‍ನ ವ್ಯವಸ್ಥಾಪಕ ನಿರ್ದೇಶಕ ಜಗನ್ಮೋಹನ್ ರಾವ್ ಮಾತನಾಡಿ, ಕಳೆದ ವರ್ಷ ಬ್ಯಾಂಕ್ ನೋಟ್ ಪೇಪರ್ ಮಿಲ್‍ನ ಸಿಎಸ್‍ಆರ್ ನಿಧಿಯಿಂದ ನವೋದಯ ಶಾಲೆಗಳ ಅಭಿವೃದ್ಧಿಗೆ 1.40 ಕೋಟಿ ರೂ. ನೀಡಲಾಗಿತ್ತು, ಈ ವರ್ಷ ಮೈಸೂರು ಭಾಗದ ಶಾಲೆ, ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.

ದೇಶದ ಕೆಲವು ನಗರಗಳು ಹಸಿರೀಕರಣ ಹೊಂದಿದ್ದು, ಅವುಗಳಲ್ಲಿ ಮೈಸೂರು ಕೂಡ ಒಂದು. ಹಾಗಾಗಿ ನಗರದ ಪರಿಸರವನ್ನು ಮತ್ತಷ್ಟು ಹಸೀರಿಕರಣಗೊಳಿಸಲು ಹಾಗೂ ಉದ್ಯಾವನಗಳ ಅಭಿವೃದ್ಧಿಗೆ ಧನ ಸಹಾಯ ಮಾಡಲಾಗುವುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಯೋಗೇಶ್ ಮಾತನಾಡಿ, ಮೈಸೂರಿಗೆ ಅರಮನೆನಗರಿ, ಸ್ವಚ್ಛನಗರಿ, ಸಾಂಸ್ಕøತಿಕನಗರಿ ಎಂಬೆಲ್ಲಾ ಹೆಸರುಗಳಿದ್ದು, ಯಾವ ಪದಗಳಿಂದ ಕರೆದರೂ ಉತ್ಪ್ರೇಕ್ಷೆಯಾಗುವುದಿಲ್ಲ. ಈ ಬಾರಿ ಇಂಧೋರ್, ಸ್ವಚ್ಛನಗರಿ ಪಟ್ಟವನ್ನು ಪಡೆದುಕೊಂಡಿದೆ. ಇದಕ್ಕೆ ಕಾರಣ ಹುಡುಕಿದಾಗ ಸ್ವಚ್ಛತೆಯ ಬಗ್ಗೆ ಅಲ್ಲಿನ ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಜತೆಗೆ ಪ್ರತಿ 100 ಮೀಟರ್‍ಗೊಂದು ಕಸದ ಬುಟ್ಟಿಗಳನ್ನು ಇಟ್ಟಿರುವುದು ತಿಳಿಯಿತು ಎಂದರು.

ಆದ್ದರಿಂದ ಮುಂದಿನ ಬಾರಿ ಮೈಸೂರು ಸ್ವಚ್ಛನಗರಿ ಗರಿಯನ್ನು ಮತ್ತೊಮ್ಮೆ ಮುಡಿಗೇರಿಸಿಕೊಳ್ಳಲು ಜನರ ಪ್ರತಿಕ್ರಿಯೆ ಜತೆಗೆ ಪ್ರತಿ 100ಮೀಟರ್‍ಗೊಂದು ಕಸದ ಬುಟ್ಟಿಯನ್ನು ಇಡಬೇಕು. ಇದಕ್ಕೆ ಖಾಸಗಿ ಸಂಸ್ಥೆಗಳು, ಉದ್ಯಮಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಮಾತನಾಡಿ, ಕಲಾಮಂದಿರದ ಸೌಂದರ್ಯ ಹೆಚ್ಚಾಗಲು ಹಿಂದಿನ ಜಿಲ್ಲಾಧಿಕಾರಿ ಡಿ.ರಂದೀಪ್ ಮುಖ್ಯ ಕಾರಣ. ಅವರ ಸೂಚನೆಯಂತೆ ಬ್ಯಾಂಕ್ ನೋಟ್ ಪೇಪರ್ ಮಿಲ್‍ನ ಸಿಎಸ್‍ಆರ್ ನಿಧಿಯಿಂದ ಕಲಾಮಂದಿರದ ಸೌಂದರ್ಯ ಹೆಚ್ಚಿಸಲಾಗಿದೆ ಎಂದರು.

ಅಲ್ಲದೆ, 40 ಲಕ್ಷ ರೂ.ವೆಚ್ಚದಲ್ಲಿ ಕಲಾಮಂದಿರದಲ್ಲಿ 2 ತಾಲೀಮು ಕೊಠಡಿ, ಕಿರುರಂಗ ಮಂದಿರದ ಮುಂಭಾಗ ಇಂಟರ್‍ಲಾಕ್ ವ್ಯವಸ್ಥೆ, ಮಳೆ ನೀರು ಕೊಯ್ಲು, ಶೌಚಾಲಯ ಮೇಲ್ದರ್ಜೆಗೇರಿಸುವುದು ಸೇರಿದಂತೆ ಮತ್ತಿತರೆ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಲಿಂಗರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಬಿಎನ್‍ಪಿಎನ್ ಚೀಫ್ ಜನರಲ್ ಮ್ಯಾನೇಜರ್‍ಗಳಾದ ಎ.ಕೆ.ಮಂಡಲ್, ಕೆ.ಜಿ ವಿಶ್ವನಾಥನ್ ಮತ್ತಿತರರು ಉಪಸ್ಥಿತರಿದ್ದರು.

Translate »