ಮೈಸೂರು, ಫೆ.3(ಪಿಎಂ)- ಮಂಡ್ಯ ಜಿಲ್ಲೆ ಮೊಗರಹಳ್ಳಿ ಮಂಟಿಯ ವಿಶ್ವರೂಪ ಆಂಜನೇಯ ದೇವಸ್ಥಾನದ ಹಿಂಭಾಗ ಪಿರ ಮಿಡ್ ಶೈಲಿಯಲ್ಲಿ ನೂತನವಾಗಿ ನಿರ್ಮಿಸಿ ರುವ `ಶ್ರೀ ಶಿವದತ್ತ ಸಾಯಿ ಮಂದಿರ’ ಉದ್ಘಾ ಟನಾ ಸಮಾರಂಭವನ್ನು ಫೆ.6ರಂದು ಆಯೋ ಜಿಸಲಾಗಿದೆ ಎಂದು ಮಂದಿರದ ಸಂಸ್ಥಾಪಕ ಹಾಗೂ ಪಾಲಿಕೆ ಮಾಜಿ ಸದಸ್ಯ ಸ್ನೇಕ್ ಶ್ಯಾಮ್ (ಬಾಲಸುಬ್ರಹ್ಮಣ್ಯಂ) ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 40×50 ಅಡಿ ವಿಸ್ತೀರ್ಣದ ನಿವೇಶನದಲ್ಲಿ 1 ಗುಂಟೆ ವಿಸ್ತೀರ್ಣದಲ್ಲಿ ಪಿರಮಿಡ್ (ಗೋಪುರ ಆಕಾರ) ಆಕಾರದಲ್ಲಿ ಮಂದಿರ ನಿರ್ಮಿಸಲಾಗಿದೆ. ಫೆ.4ರಿಂದ 6ರವರೆಗೆ ನೂತನ ವಿಗ್ರಹ ಪ್ರತಿಷ್ಠಾಪನಾ ಕುಂಭಾಭಿಷೇಕ ಕಾರ್ಯಕ್ರಮ ಏರ್ಪಡಿಸಿದ್ದು, ಫೆ.6ರಂದು ಬೆಳಿಗ್ಗೆ 11.10ಕ್ಕೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಂದಿರದ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಫೆ.4ರಿಂದ 6ರವರೆಗೂ ದೀಪಾರಾಧನೆ, ಗಣಪತಿ ಪೂಜೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನಡೆಯಲಿದೆ. ಮಂದಿರದಲ್ಲಿ ಶಿವ ಪಂಚಾ ಯತನ, ಪಾರ್ವತಿ, ದತ್ತಾತ್ರೇಯ, ಶಿರಡಿ ಸಾಯಿಬಾಬ, ಅರ್ಧನಾರೀಶ್ವರ, ಗಣೇಶ, ಸುಬ್ರಹ್ಮಣ್ಯಸ್ವಾಮಿ ಹಾಗೂ ಸತ್ಯನಾರಾಯಣ ದೇವರ ವಿಗ್ರಹಗಳು ಒಂದೇ ವೇದಿಕೆ ಯಲ್ಲಿ ಪ್ರತಿಷ್ಠಾಪನೆಗೊಳ್ಳಲಿವೆ ಎಂದರು. ದೇವಸ್ಥಾನ ಮತ್ತು ಧ್ಯಾನ ಮಂದಿರ ಎರಡೂ ಸ್ವರೂಪದ ವಾತಾವರಣ ಮಂದಿರದಲ್ಲಿ ದೊರೆಯಲಿದೆ. ನಂದಿ ಹಾಗೂ ರಾಣಿ ಎಂಬ ಹಸುಗಳು ಮಂದಿರದಲ್ಲಿ ಇರಲಿವೆ ಎಂದು ಹೇಳಿದರು. ಮುಖಂಡರಾದ ಸೂರ್ಯಕೀರ್ತಿ, ಮೋಹನ್, ಮುರಳಿ, ಪಾರ್ಥಸಾರಥಿ ಸುದ್ದಿಗೋಷ್ಠಿಯಲ್ಲಿದ್ದರು.