ಕೆಆರ್‌ಎಸ್‌ಗೆ ಬಾಗೀನ ಅರ್ಪಣೆ ವೇಳೆ ಹೆಚ್‍ಡಿಕೆಗೆ ಮುತ್ತಿಗೆ
ಮಂಡ್ಯ

ಕೆಆರ್‌ಎಸ್‌ಗೆ ಬಾಗೀನ ಅರ್ಪಣೆ ವೇಳೆ ಹೆಚ್‍ಡಿಕೆಗೆ ಮುತ್ತಿಗೆ

July 18, 2018

ಕೆ.ಆರ್.ಪೇಟೆ: ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಜು.20ರಂದು ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಾರು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಹಿರಿಯ ಮುಖಂಡ ಎಂ.ವಿ.ರಾಜೇಗೌಡ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ರೈತರ ಸಂಘದ ಕಾರ್ಯಕರ್ತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಮಾತನ್ನು ಉಳಿಸಿಕೊಳ್ಳದಿರುವುದನ್ನು ಖಂಡಿಸಿ ಕಾವೇರಿಗೆ ಬಾಗಿನ ಅರ್ಪಿಸಲು ಬರುತ್ತಿರುವ ಕುಮಾರಸ್ವಾಮಿ ಅವರಿಗೆ ತಡೆಯೊಡ್ಡಿ, ಕಪ್ಪು ಬಾವುಟ ಪ್ರದರ್ಶಿಸುವ ಸಲುವಾಗಿ ಕೆಆರ್‌ಎಸ್‌ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಕುಮಾರಸ್ವಾಮಿ ಅವರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಸಂಪೂರ್ಣ ಸಾಲಮನ್ನಾ ಮಾಡುವ ಮೂಲಕ ರೈತರನ್ನು ಉಳಿಸಬೇಕು. ಅಪರೂಪಕ್ಕೆ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಕಾಲುವೆ ರಿಪೇರಿ ಕೆಲಸ ನಿಲ್ಲಿಸಿ ಕಾಲುವೆ ಗಳಿಗೆ ನೀರು ಬಿಡುಗಡೆ ಮಾಡಬೇಕು. ಕೆರೆ ಕಟ್ಟೆಗಳನ್ನು ತುಂಬಿಸಬೇಕು. ಈ ಮೂಲಕ ರೈತರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯ ಮಾಡಲಾ ಗುವುದು ಎಂದರು.

ಸಭೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಶಂಕರ್, ಕಾರ್ಯದರ್ಶಿ ನಾರಾಯಣಸ್ವಾಮಿ, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಅಂಗಡಿ ನಾಗ ರಾಜು, ಮುದ್ದುಕುಮಾರ್, ಮಹೇಶ್, ಕುಮಾರ್, ರವಿ, ಮಂಜೇಗೌಡ, ನಾಗಣ್ಣ ಗೌಡ, ತಮ್ಮಯ್ಯ, ಲತಾ, ರೂಪಾ, ಪುಟ್ಟೇಗೌಡ, ಶಂಭೇಗೌಡ, ಮುದ್ದಪ್ಪ, ಚಂದ್ರೇಗೌಡ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Translate »