ವಿಧಾನಸಭೆ ವಿಪಕ್ಷ ನಾಯಕರಾಗಿಸಿದ್ದರಾಮಯ್ಯ ಆಯ್ಕೆ
ಮೈಸೂರು

ವಿಧಾನಸಭೆ ವಿಪಕ್ಷ ನಾಯಕರಾಗಿಸಿದ್ದರಾಮಯ್ಯ ಆಯ್ಕೆ

October 10, 2019

ಬೆಂಗಳೂರು, ಅ. 9- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸಭೆ ವಿಪಕ್ಷ ನಾಯಕರಾಗಿ ಹಾಗೂ ಅವರ ಆಪ್ತರೇ ಆದ ಎಸ್.ಆರ್. ಪಾಟೀಲ್ ಅವರನ್ನು ವಿಧಾನ ಪರಿ ಷತ್ ವಿಪಕ್ಷ ನಾಯಕರಾಗಿ ಕಾಂಗ್ರೆಸ್ ಹೈ ಕಮಾಂಡ್ ಘೋಷಿಸಿದ್ದು, ಇದರಿಂದಾಗಿ ಮೂಲ ಕಾಂಗ್ರೆಸ್ಸಿಗರು ಮತ್ತೆ ಮೂಲೆ ಗುಂಪಾದಂತಾಗಿದೆ.

ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ವಿಧಾನ ಸಭೆ ವಿಪಕ್ಷ ನಾಯಕ ಸ್ಥಾನಕ್ಕಾಗಿ ಕಾಂಗ್ರೆಸ್‍ನಲ್ಲಿ ಭಾರೀ ಪೈಪೋಟಿ ನಡೆಯುತ್ತಿತ್ತು. ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ ನಾಯಕರೆಲ್ಲರೂ ಒಗ್ಗಟ್ಟಾಗಿ ಮುಗಿಬಿದ್ದಂತಹ ವಾತಾವರಣ ಕಂಡು ಬಂದಿತ್ತು. ಹಿರಿಯ ಕಾಂಗ್ರೆಸ್ ಮುಖಂಡ ಹೆಚ್.ಕೆ. ಪಾಟೀಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಪಕ್ಷ ಸ್ಥಾನದ ರೇಸ್‍ನಲ್ಲಿ ದ್ದರು. ಹೆಚ್.ಕೆ. ಪಾಟೀಲ್ ಅಥವಾ ಡಾ. ಜಿ. ಪರಮೇಶ್ವರ್ ಅವರಲ್ಲಿ ಒಬ್ಬರಿಗೆ ವಿಪಕ್ಷ ಸ್ಥಾನ ದೊರೆಯಬೇಕು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರಿಗೆ ಆ ಸ್ಥಾನ ಸಿಗಬಾರದು ಎಂಬ ನಿಟ್ಟಿನಲ್ಲಿ ಮೂಲ ಕಾಂಗ್ರೆಸ್ಸಿಗರು ವ್ಯೂಹ ರಚಿಸಿದ್ದರು. ಸಿದ್ದರಾಮಯ್ಯ ಆಪ್ತ ಶಾಸಕರ ರಾಜೀ ನಾಮೆ, ಮೈತ್ರಿ ಸರ್ಕಾರ ಪತನ, ಲೋಕಸಭಾ ಚುನಾವಣೆಯ ಸೋಲು ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರ ಪ್ರಬಲ ಅಸ್ತ್ರವಾಗಿತ್ತು.

ವಿಧಾನಸಭೆ ವಿಪಕ್ಷ ನಾಯಕನ ಘೋಷಣೆ ಮಾಡುವ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳು ವಲ್ಲಿ ಕಾಂಗ್ರೆಸ್ ಹೈಕಮಾಂಡ್ ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಎಐಸಿಸಿ ಮುಖಂಡ ಮಧುಸೂದನ್ ಮಿಸ್ತ್ರಿ ಅವರು ಬೆಂಗ ಳೂರಿಗೆ ಆಗಮಿಸಿ, ಶಾಸ ಕರು ಮತ್ತು ಹಿರಿಯ ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ದರು. ಈ ವೇಳೆ ಸುಮಾರು 52 ಶಾಸಕರು ಹಾಗೂ ಹಲವಾರು ಮುಖಂಡರು ಸಿದ್ದರಾಮಯ್ಯ ಪರ ಒಲವು ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ. ನಾಳೆ (ಅ. 10) ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು, ವಿಧಾನಸಭೆ ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಎಸ್.ಆರ್. ಪಾಟೀಲ್ ಹೆಸರನ್ನು ಅಧಿಕೃತವಾಗಿ ಘೋಷಿಸಿದರು. ಸಿದ್ದರಾಮಯ್ಯ ಮನವಿ ಮೇರೆಗೆ ಅವರನ್ನು ಸಿಡಬ್ಲ್ಯೂಸಿ ಸದಸ್ಯ ಸ್ಥಾನದಿಂದ ತೆರವುಗೊಳಿಸಲಾಗಿದೆ ಎಂದು ಇದೇ ವೇಳೆ ವೇಣುಗೋಪಾಲ್ ಘೋಷಿಸಿದರು. ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನ್ನ ಮೇಲೆ ವಿಶ್ವಾಸವಿಟ್ಟು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರು ವಿಪಕ್ಷ ಸ್ಥಾನವನ್ನು ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಕಾಂಗ್ರೆಸ್ ಹೈಕಮಾಂಡ್ ಮತ್ತು ಪಕ್ಷಕ್ಕೆ ಚಿರಋಣಿಯಾಗಿದ್ದು, ಪಕ್ಷವನ್ನು ಮತ್ತೆ ಬಲಗೊಳಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

Translate »