ಮೈಸೂರಲ್ಲಿ ಸಿಲ್ಕ್ ಮೆಗಾ ಕ್ಲಸ್ಟರ್, ಎನ್‍ಐಇಗೆ ಪ್ರತ್ಯೇಕ ವಿವಿ ಮಾನ್ಯತೆ
ಮೈಸೂರು

ಮೈಸೂರಲ್ಲಿ ಸಿಲ್ಕ್ ಮೆಗಾ ಕ್ಲಸ್ಟರ್, ಎನ್‍ಐಇಗೆ ಪ್ರತ್ಯೇಕ ವಿವಿ ಮಾನ್ಯತೆ

January 31, 2019

ಬೆಂಗಳೂರು: ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮೈಸೂರಿನಲ್ಲಿ ಸಿಲ್ಕ್ ಮೆಗಾ ಕ್ಲಸ್ಟರ್ ಅನ್ನು ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಇಂದಿಲ್ಲಿ ಅನುಮೋದನೆ ನೀಡಿದೆ. ಇದರ ಜೊತೆ ಜೊತೆಯಲ್ಲೇ ಇಲ್ಲಿನ ಪ್ರಸಿದ್ಧ ಎನ್‍ಐಇ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಖಾಸಗಿ ವಿಶ್ವವಿದ್ಯಾಲಯ ಮಾನ್ಯತೆ ನೀಡುವ ಸಂಬಂಧದ ಕರಡು ಮಸೂದೆಗೂ ಸಮ್ಮತಿ ಸೂಚಿಸಿದೆ.

ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣ ಭೈರೇಗೌಡ, 49.19 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಿಲ್ಕ್ ಮೆಗಾ ಕ್ಲಸ್ಟರ್ ನಿರ್ಮಾಣ ಮಾಡಲಾಗುವುದು ಎಂದರು.

ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಬೆಳವಾಡಿ ಗ್ರಾಮದಲ್ಲಿ 10.12 ಎಕರೆ ಭೂಮಿಯನ್ನು ಮೈಸೂರು ಚಾಮುಂಡೇಶ್ವರಿ ಮೆಗಾ ಸಿಲ್ಕ್ ಕ್ಲಸ್ಟರ್ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಒಪ್ಪಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇಕಡಾ 40ರಷ್ಟು ಷೇರು ಹೊಂದಲಿವೆ, ಉಳಿದ ಶೇಕಡಾ 20ರಷ್ಟನ್ನು ಸ್ಥಳೀಯ ಉದ್ದಿಮೆದಾರರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.

ಎನ್‍ಐಇ ಶಿಕ್ಷಣ ಸಂಸ್ಥೆಗೆ ವಿಶ್ವ ವಿದ್ಯಾ ಲಯ ಮಾನ್ಯತೆ ನೀಡುವ ಕರಡು ವಿಧೇಯಕಕ್ಕೆ ಸಂಪುಟ ಅಂಗೀಕಾರ ನೀಡಿದ್ದರೂ ಬರುವ ವಿಧಾನಮಂಡಲದ ಅಧಿವೇಶನದಲ್ಲಿ ಈ ವಿಧೇಯಕಕ್ಕೆ ಅನುಮೋದನೆ ಪಡೆಯಬೇಕಿದೆ. ಆ ನಂತರವೇ ವಿಶ್ವ ವಿಖ್ಯಾತ ಎನ್‍ಐಇ ಸಂಸ್ಥೆಗೆ ಖಾಸಗಿ ವಿಶ್ವ ವಿದ್ಯಾಲಯ ಮಾನ್ಯತೆ ದೊರೆಯಲಿದೆ.  ನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸೇರಿದಂತೆ ಅನೇಕರು ಈ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಜಾಗತಿಕವಾಗಿ ಹೆಸರು ಗಳಿಸಿದ್ದಾರೆ.

ಮೈಸೂರು ಸರ್ಕಾರಿ ವೈದ್ಯಕೀಯ ಸಂಶೋಧನಾ ಮತ್ತು ಆರೋಗ್ಯ ಕೇಂದ್ರಕ್ಕೆ ಮೂಲ ಸೌಕರ್ಯ ಕಲ್ಪಿಸಲು 67 ಕೋಟಿ ರೂ. ಅನುದಾನ ನೀಡಿದೆ. ಮೈಸೂರು ಮತ್ತು ಹುಬ್ಬಳ್ಳಿಯ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಕಟ್ಟಡ, ಆಧುನಿಕ ಯಂತ್ರೋಪಕರಣ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವುದೇ ಇದರ ಉದ್ದೇಶ. ಮಂಡ್ಯದ ಮೈಸೂರು ಸಕ್ಕರೆ ಕಂಪನಿಗೆ ಸೇರಿದ ಖಾಲಿ ನಿವೇಶನವನ್ನು ಕರ್ನಾಟಕ ರಾಜ್ಯಪಾನೀಯ ನಿಗಮ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸಮ್ಮತಿಸಿದೆ.

ಮದ್ದೂರು ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು 100 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಂಪುಟ ಅನುಮತಿ ನೀಡಿದೆ. ತೊರೆಶೆಟ್ಟಹಳ್ಳಿ, ಬೆಸಗರಹಳ್ಳಿ ಹಾಗೂ ಕೊಪ್ಪ ವ್ಯಾಪ್ತಿಯ ಗ್ರಾಮಗಳಿಗೆ ನದಿ ಪಾತ್ರದಿಂದ ಕುಡಿಯುವ ನೀರಿನ ಯೋಜನೆ ಕಲ್ಪಿಸುವುದೇ ಇದರ ಉದ್ದೇಶ. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ, ಚಿಕ್ಕ ಅಂಕನಹಳ್ಳಿ, ಕೆ. ಶೆಟ್ಟಳ್ಳಿ ಮತ್ತು ಇತರೆ 16 ಜನ ವಸತಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು 28 ಕೋಟಿ ರೂ. ಅಂದಾಜು ವೆಚ್ಚಕ್ಕೆ ಅನುಮೋದನೆ ದೊರೆತಿದೆ. ಇದೇ ತಾಲೂಕಿನ ಗಾಮನಹಳ್ಳಿ ಸೇರಿದಂತೆ 13 ಜನ ವಸತಿಗಳಿಗೆ 21 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆಗೆ ಸಮ್ಮತಿ ನೀಡಿದೆ.

Translate »