ಮೈಸೂರು ವರ್ತಕನ ಸಂಶಯಾಸ್ಪದ ಸಾವು
ಮೈಸೂರು

ಮೈಸೂರು ವರ್ತಕನ ಸಂಶಯಾಸ್ಪದ ಸಾವು

January 31, 2019

ಮೈಸೂರು: ಮೈಸೂರಿನ ಅಡುಗೆ ಎಣ್ಣೆ ವರ್ತಕರೊಬ್ಬರು (ಆಯಿಲ್ ಮರ್ಚೆಂಟ್) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇವರನ್ನು ದುಷ್ಕರ್ಮಿಗಳು ಅಪಹರಿಸಿ ಒತ್ತೆ ಹಣ 2.22 ಲಕ್ಷ ರೂ. ಪಡೆದ ನಂತರವೂ ಹತ್ಯೆಗೈದು ಮೃತ ದೇಹವನ್ನು ನಾಲೆಯಲ್ಲಿ ಎಸೆದಿದ್ದಾರೆ ಎಂದು ಶಂಕಿಸಲಾಗಿದೆ.

ಮೈಸೂರಿನ ಫೋರ್ಟ್ ಮೊಹಲ್ಲಾದ ವೀಣೆ ಶೇಷಣ್ಣ ರಸ್ತೆ (ಶಾಂತಲಾ ಟಾಕೀಸ್ ಹಿಂಭಾಗ) ನಿವಾಸಿ ರಾಜು ಎಂಬು ವರ ಪುತ್ರ ಸೆಂಥಿಲ್ (36) ಅನುಮಾನಾ ಸ್ಪದವಾಗಿ ಸಾವನ್ನಪ್ಪಿರುವ ವರ್ತಕ. ಇವರ ಮೃತದೇಹ ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಿದರಳ್ಳಿ ಹುಂಡಿ ಬಳಿ ರಾಜ ಪರಮೇಶ್ವರಿ ನಾಲೆಯಲ್ಲಿ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.

ವಿವರ: ಶಿವರಾಂಪೇಟೆಯಲ್ಲಿ ಅಡುಗೆ ಎಣ್ಣೆ ಅಂಗಡಿ ಹೊಂದಿರುವ ಸೆಂಥಿಲ್ ಸೋಮವಾರ ಮಧ್ಯಾಹ್ನ ಎಣ್ಣೆ ಲೋಡ್ ಬಂದಿದೆ ಎಂದು ಮನೆಯಲ್ಲಿ ಹೇಳಿ ತನ್ನ ಸುಜುಕಿ ಆಕ್ಸಿಸ್ ಸ್ಕೂಟರ್‍ನಲ್ಲಿ (ಕೆಎ 09 ಇಝೆಡ್ 8138) ತೆರಳಿದ್ದಾರೆ. ರಾತ್ರಿ 8.30ರ ಸುಮಾರಿನಲ್ಲಿ ಅವರು ತನ್ನ ಭಾಮೈದ ನಿಖಿಲ್‍ಗೆ ತಮ್ಮ ಮೊಬೈಲ್‍ನಿಂದಲೇ ಕರೆ ಮಾಡಿ ತನ್ನ ಸ್ಕೂಟರ್‍ನಲ್ಲಿ ಬರುವ ವ್ಯಕ್ತಿಗಳಿಗೆ 2.22 ಲಕ್ಷ ರೂ.ಗಳನ್ನು ತಡ ಮಾಡದೇ ಕೊಡು ಎಂದು ಹೇಳಿದರಂತೆ. ಅದರಂತೆ ಅಪರಿಚಿತ ವ್ಯಕ್ತಿ ಸೆಂಥಿಲ್ ಅವರ ಮೊಬೈಲ್‍ನಿಂದಲೇ ರಾತ್ರಿ 10.45ರ ಸುಮಾರಿನಲ್ಲಿ ನಿಖಿಲ್ ಅವರಿಗೆ ಕರೆ ಮಾಡಿ ಗನ್‍ಹೌಸ್ ಬಳಿ ಬರುವಂತೆ ತಿಳಿಸಿದ ಹಿನ್ನೆಲೆಯಲ್ಲಿ ನಿಖಿಲ್, ಅಲ್ಲಿಗೆ ತೆರಳಿ ತನ್ನ ಭಾವನ ಸ್ಕೂಟರ್‍ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳಿಗೆ ಹಣ ನೀಡಿ ಬಂದಿದ್ದಾರೆ. ರಾತ್ರಿ 11ರ ನಂತರ ಸೆಂಥಿಲ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅವರು ಎಲ್ಲೋ ಹೋಗಿರಬಹುದೆಂದು ಮನೆಯವರೂ ಭಾವಿಸಿದ್ದರು ಎನ್ನಲಾಗಿದೆ.

ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿನಲ್ಲಿ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಬನ್ನೂರು ಪೊಲೀಸರು ಬಿದರಳ್ಳಿಹುಂಡಿ ಬಳಿ ರಾಜ ಪರಮೇಶ್ವರಿ ನಾಲೆಯಲ್ಲಿ ದೊರೆತ ಮೃತದೇಹವನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ಮೃತದೇಹದ ಪಾಕೆಟ್‍ನಲ್ಲಿ ದೊರೆತ ದಾಖಲೆ ಆಧಾರದ ಮೇರೆಗೆ ಕೆ.ಆರ್.ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಕೆ.ಆರ್.ಪೊಲೀಸರು ಸೆಂಥಿಲ್ ಕುಟುಂಬದವರನ್ನು ಕರೆದೊಯ್ದು ತೋರಿಸಿದಾಗ ಅದು ಅವರದೇ ಮೃತದೇಹ ಎಂಬುದು ಖಚಿತವಾಗಿದೆ. ಸೆಂಥಿಲ್ ಕುಟುಂಬದವರು ನೀಡಿದ ದೂರಿನ ಮೇರೆಗೆ ಬನ್ನೂರು ಪೊಲೀಸರು ಭಾರತೀಯ ದಂಡ ಸಂಹಿತೆ 174-ಸಿ ಅಡಿ (ಸಂಶಯಾಸ್ಪದ ಸಾವು) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಬನ್ನೂರು ಪೊಲೀಸರು ವಾರಸುದಾರರಿಗೆ ದೇಹವನ್ನು ಒಪ್ಪಿಸಿದ್ದಾರೆ.

ನನ್ನ ಭಾವ ಸೆಂಥಿಲ್ ಅವರು ಸೋಮವಾರ ಬೆಳಿಗ್ಗೆ ವ್ಯಾಪಾರಕ್ಕೆ ಹೋಗಿದ್ದರು. ಅಂದು ರಾತ್ರಿ 9.30ರ ಸುಮಾರಿನಲ್ಲಿ ನನಗೆ ಕರೆ ಮಾಡಿ ಅವರ ಸ್ಕೂಟರ್‍ನಲ್ಲಿ ಬರುವ ವ್ಯಕ್ತಿಗಳಿಗೆ 2.22 ಲಕ್ಷ ರೂ. ತಡಮಾಡದೇ ನೀಡು ಎಂದು ಹೇಳಿದ್ದರು. ಅಂದು ರಾತ್ರಿ 10.45ರಲ್ಲಿ ನನ್ನ ಭಾವನ ಮೊಬೈಲ್‍ನಿಂದಲೇ ಕರೆ ಮಾಡಿದ ವ್ಯಕ್ತಿಗಳು ಗನ್‍ಹೌಸ್ ಬಳಿ ಬರುವಂತೆ ತಿಳಿಸಿದ್ದು, ಅಲ್ಲಿಗೆ ನಾನು ಹೋದಾಗ ಹಣ ಪಡೆದು ಹೋಗಿದ್ದಾರೆ. ಅವರುಗಳು ನನ್ನ ಭಾವ ಎಲ್ಲಿದ್ದಾರೆ ಎಂಬುದನ್ನು ತಿಳಿಸಲಿಲ್ಲ. ಹಣಕ್ಕಾಗಿ ನನ್ನ ಭಾವನನ್ನು ಅಪಹರಿಸಿ ಅವರಿಗೆ ಬೆದರಿಕೆ ಹಾಕಿ, ತಾವೇ ಬಂದು ಹಣ ಪಡೆದ ನಂತರವೂ ಭಾವನ ತಲೆ, ಕಣ್ಣಿನ ಭಾಗಕ್ಕೆ ಹೊಡೆದು ಕೊಲೆ ಮಾಡಿ ದೇಹವನ್ನು ನಾಲೆಯಲ್ಲಿ ಬಿಸಾಕಿ ಹೋಗಿದ್ದಾರೆ. – ನಿಖಿಲ್, ಮೃತ ಸೆಂಥಿಲ್‍ನ ಭಾಮೈದ

Translate »