ಹಳೇ ಉಂಡುವಾಡಿ ಕುಡಿಯುವ ನೀರು ಯೋಜನೆ ವಿಳಂಬಕ್ಕೆ ಜಿಟಿಡಿ ಆಕ್ರೋಶ
ಮೈಸೂರು

ಹಳೇ ಉಂಡುವಾಡಿ ಕುಡಿಯುವ ನೀರು ಯೋಜನೆ ವಿಳಂಬಕ್ಕೆ ಜಿಟಿಡಿ ಆಕ್ರೋಶ

January 31, 2019

ಬೆಂಗಳೂರು: ಕೆಆರ್‍ಎಸ್ ಹಿನ್ನೀರಿನಿಂದ ಮೈಸೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬಹು ನಿರೀಕ್ಷಿತ ಹಳೇ ಉಂಡು ವಾಡಿ ಕುಡಿಯುವ ನೀರು ಯೋಜನೆ ವಿಚಾರದಲ್ಲಿ ಅಧಿಕಾರಿಗಳ ವಿಳಂಬ ಧೋರಣೆ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕಿಡಿಕಾರಿದ್ದಾರೆ.

ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಳೆದ ಬಜೆಟ್‍ನಲ್ಲಿ ಈ ಯೋಜನೆಗೆ 50 ಕೋಟಿ ಕಾಯ್ದಿರಿಸಲಾಗಿದ್ದರೂ, ಇದುವರೆಗೆ ಯೋಜನೆಯ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದೆ ಮಂಡಿಸದೇ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ.

ಮೈಸೂರು ನಗರದ ಬಹುತೇಕ ಭಾಗಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಭವಿಷ್ಯದ ದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಆದರೆ ಕೇವಲ ಗ್ರಾಮಾಂತರ ಪ್ರದೇಶಕ್ಕೆ ಮಾತ್ರ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಪರಿಗಣಿಸುವುದರೊಂದಿಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಭೆಯಲ್ಲಿ ಜಿ.ಟಿ. ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕಳೆದ ಐದು ವರ್ಷದಿಂದಲೂ ಮನವಿ ಮಾಡುತ್ತಲೇ ಬಂದಿದ್ದೇನೆ. ಯೋಜನೆಯಿಂದ ಮೈಸೂರು ನಗರ ಕುಡಿಯುವ ನೀರಿನ ಸಮಸ್ಯೆಯನ್ನು ನೀಗುವುದರ ಜೊತೆಗೆ ಈ ಭಾಗದಲ್ಲಿ ಬರುವ ಗ್ರಾಮಗಳಿಗೂ ನೀರು ಒದಗಿಸಬಹುದು ಎಂಬ ಉದ್ದೇಶದಿಂದ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಪಡಿಸುತ್ತಾ ಬಂದಿದ್ದೇನೆ. ಆದರೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ. ತಮ್ಮ ನಿರಂತರ ಹೋರಾಟದ ಫಲವಾಗಿ ಕಳೆದ ಬಜೆಟ್‍ನಲ್ಲಿ ನೀವೇ ಯೋಜನೆಗೆ 50 ಕೋಟಿ ರೂ. ಪ್ರಸ್ತಾಪಿಸಿದ್ದೀರಾ. ಆದರೆ ಯೋಜನೆ ಕಾರ್ಯಗತ ಗೊಳಿಸಲು ಪ್ರಸ್ತಾವನೆಯನ್ನು ಇದುವರೆಗೂ ಸಚಿವ ಸಂಪುಟದ ಮುಂದೆ ಮಂಡಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿಲ್ಲ. ಜನಪ್ರತಿನಿಧಿಗಳ ಜನಪರತೆ ಹಾಗೂ ಮಹತ್ವದ ಯೋಜನೆಗೆ ಅಧಿಕಾರಿಗಳು ಈ ರೀತಿ ನಿರ್ಲಕ್ಷ್ಯ ತಾಳಿದರೆ ನಮ್ಮ ಮಾತಿಗೆ ಬೆಲೆಯಾ ದರೂ ಎಲ್ಲಿಂದ ಬಂತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲೇ ತೀವ್ರ ಬೇಸರ ವ್ಯಕ್ತಪಡಿಸಿದರೆನ್ನಲಾಗಿದೆ.

ಈ ವೇಳೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತಂತಹ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಹಳೇ ಉಂಡುವಾಡಿ ಕುಡಿಯುವ ನೀರಿನ ಯೋಜನೆ ಪ್ರಸ್ತಾಪವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಭರವಸೆ ನೀಡುವುದರೊಂದಿಗೆ ಜಿ.ಟಿ.ದೇವೇಗೌಡರನ್ನು ಸಮಾಧಾನಪಡಿಸಿದರೆಂದು ಹೇಳಲಾಗಿದೆ.

Translate »