ಶೇ.82 ರಷ್ಟು ನೌಕರರಿಗೆ ಅನ್ಯಾಯ:ಅಹಿಂಸಾ ಆಕ್ಷೇಪ
ಮೈಸೂರು

ಶೇ.82 ರಷ್ಟು ನೌಕರರಿಗೆ ಅನ್ಯಾಯ:ಅಹಿಂಸಾ ಆಕ್ಷೇಪ

January 31, 2019

ಮೈಸೂರು: ಶೇ.18 ರಷ್ಟು ಸರ್ಕಾರಿ ನೌಕರರ ಒತ್ತಡಕ್ಕೆ ಮಣಿದು, ಶೇ.82ರಷ್ಟು ನೌಕರರ ಬಡ್ತಿಗೆ ಮಾರಕವಾಗಿರುವ `ವೇಗೋತ್ಕರ್ಷ’ ಮುಂಬಡ್ತಿ ಮೀಸಲಾತಿ ಕಾಯಿದೆಯನ್ನು ಜಾರಿ ಮಾಡಲು ರಾಜ್ಯ ಸಚಿವ ಸಂಪುಟ ಅನುಮತಿ ನೀಡಿರುವುದಕ್ಕೆ ಅಹಿಂಸಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ನಂಜಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ(ಅಹಿಂಸಾ) ವರ್ಗದ ನೌಕರರು ಕಳೆದ 27 ವರ್ಷಗಳಿಂದ `ವೇಗೋತ್ಕರ್ಷ’ ಮುಂಬಡ್ತಿ ಕಾಯಿದೆಯಿಂದ ತಮ್ಮ ಸೇವಾ ಹಿರಿತನಕ್ಕೆ ಧಕ್ಕೆಯಾಗುತ್ತಿದೆ ಎಂದು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಅಲ್ಲಿಯೂ ಸುದೀರ್ಘ ವಿಚಾರಣೆ ನಡೆದ ನಂತರ 2017ರಲ್ಲಿ ಅಹಿಂಸಾ ನೌಕರರ ಪರವಾಗಿಯೇ ತೀರ್ಪು ಬಂತು. ಆದರೆ, ಹಿಂದಿನ ಕಾಂಗ್ರೆಸ್ ಸರ್ಕಾರ ಇದನ್ನು ಲೆಕ್ಕಿಸದೇ, ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕಾಯಿದೆಯನ್ನು ರೂಪಿಸಿತು.

ಕಳೆದ ಹಲವಾರು ವರ್ಷಗಳಿಂದ ಅಹಿಂಸಾ ನೌಕರರು ಹಾಗೂ ಈ ವರ್ಗದವರ ವಿರುದ್ಧ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ತನ್ನ ನೀತಿ-ನಿಯಮಗಳನ್ನು ರೂಪಿಸುತ್ತಿದೆ. ಇಂಥ ನಿರ್ಧಾರಗಳ ವಿರುದ್ಧ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೆ, ಇಂದಿನ ಸಚಿವ ಸಂಪುಟದಲ್ಲಿ ಶೇ.18 ರಷ್ಟು ನೌಕರರ ಪರವಾಗಿ ಮುಂಬಡ್ತಿ ಮೀಸಲಾತಿ ಕಾಯಿದೆಯನ್ನು ಜಾರಿಗೊಳಿ ಸಲು ತೀರ್ಮಾನಿಸಿರುವುದು ಆಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು. ನಮ್ಮ ಕಾನೂನಿನಲ್ಲಿ ಶೇ.82ರಷ್ಟು ನೌಕರರಿಗೊಂದು ಕಾನೂನು ರೂಪಿತವಾಗಿದೆಯೇ? ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಅನ್ನು ಕಾಂಗ್ರೆಸ್ ಬೆಂಬಲಿತ ಮೈತ್ರಿ ಸರ್ಕಾರ ಉಲ್ಲಂಘಿಸುವುದಾದರೆ, ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟ್‍ನ ಎಲ್ಲಾ ಆದೇಶಗಳನ್ನು ಧಿಕ್ಕರಿಸುವ ಸೂಚನೆಯೇ? ಎಂದು ಪ್ರಶ್ನಿಸಿದರು.

Translate »