ಬೆಂಗಳೂರು: ಆಡಳಿತ ಸುಧಾರಣೆ ದೃಷ್ಟಿಯಿಂದ ಇನ್ನು ಮುಂದೆ ಸಿ ಮತ್ತು ಡಿ ದರ್ಜೆ ನೌಕರರ ವರ್ಗಾವಣೆ ಕೌನ್ಸಿಲಿಂಗ್ ಮೂಲಕ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿರುವ ರಾಜ್ಯ ಸರ್ಕಾರ, ಎಲ್ಲಾ ಹಂತದ ತನ್ನ ನೌಕರರಿಗೆ ಎರಡನೇ ಶನಿವಾರದ ಜೊತೆಗೆ ನಾಲ್ಕನೇ ಶನಿವಾರವೂ ರಜೆ ನೀಡಲು ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣ ಭೈರೇಗೌಡ ಸರ್ಕಾರಿ ನೌಕರರ ಬೇಡಿಕೆ ಹಾಗೂ ವೇತನ ಆಯೋಗದ ಶಿಫಾರಸ್ಸನ್ನು ಗಮನದಲ್ಲಿಟ್ಟುಕೊಂಡು ನಾಲ್ಕನೇ ಶನಿವಾರವೂ ರಜೆ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರದ ಈ ನಿರ್ಧಾರ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗಲಿದೆ. ಈ ರಜೆಯನ್ನು ಹೊಸ ವರ್ಷದಿಂದ ನೀಡಬೇಕೋ ಅಥವಾ ಈಗಲೇ ಪ್ರಕಟಿಸಬೇಕೆಂಬು ದರ ಬಗ್ಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ನಿರ್ಧಾರ ಕೈಗೊಳ್ಳಲಿದ್ದಾರೆ. ರಾಷ್ಟ್ರದ 17 ರಾಜ್ಯಗಳು ತಮ್ಮ ಸರ್ಕಾರಿ ನೌಕರರಿಗೆ ಕೇಂದ್ರದ ಮಾದರಿಯಲ್ಲೇ ವಾರಕ್ಕೆ ಐದು ದಿನ ಮಾತ್ರ ಕೆಲಸ ನೀಡುತ್ತಿದೆ. ಗುಜರಾತ್, ಮಹಾರಾಷ್ಟ್ರ ಸೇರಿದಂತೆ ನಾಲ್ಕು ರಾಜ್ಯಗಳು ತಿಂಗಳಿಗೆ ಎರಡು ಶನಿವಾರ ಮಾತ್ರ ರಜೆ ನೀಡಿವೆ. ಇದೆಲ್ಲವನ್ನೂ ಗಮನ ದಲ್ಲಿಟ್ಟುಕೊಂಡು ಸರ್ಕಾರ ಇಂತಹ ತೀರ್ಮಾನ ಕೈಗೊಂಡಿರುವುದಲ್ಲದೆ, ನೌಕರರ 15 ದಿನಗಳ ಕ್ಯಾಜ್ವಲ್ ರಜೆಯನ್ನು 10 ದಿನಕ್ಕೆ ಇಳಿಸಲಾಗಿದೆ. ಉಳಿದಂತೆ ಯಾವುದೇ ರೀತಿಯ ಜಯಂತಿಗಳೂ ಸೇರಿದಂತೆ ಯಾವುದೇ ರಜೆ ಕಡಿತ ಮಾಡಿಲ್ಲ ಎಂದರು. ವರ್ಗಾವರ್ಗಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ದಂಧೆಗೆ ಕಡಿವಾಣ ಹಾಕುವುದು ಮತ್ತು ವರ್ಗಾವಣೆಗಾಗಿ ವಿಧಾನಸೌಧಕ್ಕೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಸಿ ಮತ್ತು ಡಿ ದರ್ಜೆ ನೌಕರರ ವರ್ಗಾ ವಣೆಯು ಸಂಬಂಧಪಟ್ಟ ಇಲಾಖೆಗಳೇ ಕೌನ್ಸಿ ಲಿಂಗ್ ಮೂಲಕ ನಡೆಸಬೇಕು.
ಮುಂದಿನ ವರ್ಗಾವಣೆ ಸಂದರ್ಭದಲ್ಲಿ ಸರ್ಕಾರದ ನಿರ್ಧಾರ ಅನುಷ್ಠಾನಗೊಳಿಸುವ ಸಂಬಂಧ ಅಗತ್ಯ ಕಾನೂನಿಗೆ ತಿದ್ದುಪಡಿ ತಂದು ವಿಧಾನ ಮಂಡಲ ಒಪ್ಪಿಗೆ ಪಡೆದ ನಂತರ ಜಾರಿಗೊಳಿಸಲಾಗುವುದು. ಈಗಾಗಲೇ ಶಿಕ್ಷಣ ಸೇರಿದಂತೆ ಕೆಲವು ಇಲಾಖೆಗಳಲ್ಲಿ ಕೌನ್ಸಿಲಿಂಗ್ ಪದ್ಧತಿ ಇದೆ. ಅದನ್ನು ಇದೀಗ ಎಲ್ಲಾ ಇಲಾಖೆ ಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು. ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ನೌಕರರ ತಾರತಮ್ಯವಿದೆ. ಇದನ್ನು ಸರಿಪಡಿಸುವ ಉದ್ದೇಶದಿಂದ ಇನ್ನು ಮುಂದೆ ಸರ್ಕಾರಿ ನೇಮಕಾತಿ ಸಂದರ್ಭದಲ್ಲಿ ಆಯಾ ಜಿಲ್ಲೆಗಳಿಗೆ ಅಗತ್ಯ ವಿರುವ ಸಿಬ್ಬಂದಿಯನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯವಾಗಿ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ನ್ಯಾಯಾಲಯದ ತೀರ್ಪಿನಂತೆ ಕೆಲಸ ಕಳೆದು ಕೊಳ್ಳುತ್ತಿದ್ದ ಕೆಎಎಸ್ ಶ್ರೇಣಿಯ ಕೆಲವು ನೌಕರರಹಿತ ಕಾಪಾಡುವ ಉದ್ದೇಶದಿಂದ ಸುಗ್ರೀವಾಜ್ಞೆ ತರುವ ಸಂದರ್ಭದಲ್ಲಿ 2009, 11 ಹಾಗೂ 14ನೇ ವರ್ಷದಲ್ಲಿ ನೇಮಕಾತಿಗೊಂಡಿರುವ ಈ ವರ್ಗದ ಅಧಿಕಾರಿಗಳ ಭರ್ತಿಯಲ್ಲೂ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಇದನ್ನು ಗಮನದಲ್ಲಿಟ್ಟುಕೊಂಡು ಕಾನೂನಿನಲ್ಲಿ ಅಳವಡಿಸಲು ಸಂಪುಟ ನಿರ್ಧರಿಸಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಗುತ್ತಿಗೆ ಸೇವೆ ಸಲ್ಲಿಸಿ ನಂತರ ಖಾಯಂಗೊಂಡ 400ಕ್ಕೂ ಹೆಚ್ಚು ನೌಕರರಿಗೂ ಅವರ ನಿವೃತ್ತಿ ನಂತರ ಪಿಂಚಣಿ ನೀಡಲು ಸಭೆ ಸಮ್ಮತಿಸಿದೆ ಎಂದರು.