ಸಿಐಇಎಲ್ ಮಾನವ ಸಂಪನ್ಮೂಲ ಸೇವೆ ಶಾಖೆ ಉದ್ಘಾಟನೆ
ಮೈಸೂರು

ಸಿಐಇಎಲ್ ಮಾನವ ಸಂಪನ್ಮೂಲ ಸೇವೆ ಶಾಖೆ ಉದ್ಘಾಟನೆ

June 8, 2019

ಮೈಸೂರು: ಕಂಪನಿ ಬೆಳವಣಿಗೆ ಮತ್ತು ಯುವ ಉದ್ಯೋಗಸ್ಥರ ವೃತ್ತಿ ಜೀವನ ಗಮನದಲ್ಲಿಟ್ಟುಕೊಂಡು ಕಂಪನಿಗಳ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕಿದೆ ಎಂದು ಸಿಐಇಎಲ್ ಹೆಚ್‍ಆರ್ ಸರ್ವೀಸ್‍ನ ನಿರ್ದೇಶಕ ಆದಿತ್ಯ ನಾರಾಯಣ್ ಮಿಶ್ರ ಹೇಳಿದರು.

ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ `ಎರಡನೇ ಹಂತದ ನಗರಗಳಲ್ಲಿ ನೌಕರಿ ತೊರೆಯುವ ಪ್ರವೃತ್ತಿ ಹಾಗೂ ಇದನ್ನು ತಡೆಗಟ್ಟುವ ವಿಧಾನಗಳು’ ಕುರಿತಂತೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ಸಿಐಇಎಲ್ ಹೆಚ್‍ಆರ್ (ಮಾನವ ಸಂಪನ್ಮೂಲ) ಸರ್ವೀಸ್‍ನ ಮೈಸೂರು ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವ ನೌಕರರು ತಮ್ಮ ವೃತ್ತಿಪರತೆಯಲ್ಲಿ ಸುಸ್ಥಿರತೆ ಹಾಗೂ ಬೆಳವಣಿಗೆಯತ್ತ ಗಮನ ನೀಡದೇ ದುಪ್ಪಟ್ಟು ವೇತನದತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಕಂಪನಿಗಳಿಗೂ ನೌಕರರ ಕೊರತೆಯಿಂದ ಸಮಸ್ಯೆ ಉಂಟಾಗುತ್ತಿದೆ. ಯುವ ನೌಕರರು ಉದ್ಯೋಗದಲ್ಲಿ ಮುಂದುವರೆಯುವಂತೆ ನೋಡಿಕೊಳ್ಳುವಲ್ಲಿ ಹೆಚ್‍ಆರ್ ವಿಭಾಗದ ಪಾತ್ರ ಮಹತ್ವದ್ದಾಗಿದೆ ಎಂದರು. ನೌಕರರ ಕ್ಷೇಮಾಭಿವೃದ್ಧಿ ಮತ್ತು ಅವ ರೊಡನೆ ಉತ್ತಮ ಸಂಪರ್ಕ ಕಾಯ್ದುಕೊಳ್ಳುವಲ್ಲಿ ಹೆಚ್‍ಆರ್‍ಗಳು ವಿಫಲರಾಗುತ್ತಿದ್ದಾರೆ. ಇದರತ್ತ ಹೆಚ್‍ಆರ್ ವಿಭಾಗ ಗಮನ ಕೇಂದ್ರೀಕರಿಸಬೇಕಿದೆ. ತಂತ್ರಜ್ಞಾನ ಆವಿಷ್ಕಾರ ಗಳಿಂದ ಹಳೆ ಪದ್ಧತಿಯ ಉದ್ಯೋಗಗಳು ನಶಿಸುತ್ತಿವೆ. ಇದು ಹಲವು ಜನರ ಉದ್ಯೋ ಗಕ್ಕೆ ಮಾರಕವಾಗಿದ್ದರೂ ನೂತನ ತಂತ್ರಜ್ಞಾನ ಅರಿತರೆ ಬದುಕು ಕಟ್ಟಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಹಲವು ಖಾಸಗಿ ಕಂಪನಿಗಳ ಹೆಚ್‍ಆರ್ ವಿಭಾಗದ 50 ಮಂದಿ ಸಿಬ್ಬಂದಿ ಪಾಲ್ಗೊಂಡಿದ್ದರು. ಸಿಐಐ ಅಧ್ಯಕ್ಷ ಭಾಸ್ಕರ್ ಕಳಲೆ, ಜೆ.ಕೆ.ಟೈರ್ಸ್‍ನ ಪ್ರಧಾನ ವ್ಯವಸ್ಥಾಪಕ ವಿಕ್ರಮ್ ಹೆಬ್ಬಾರ್ ಮತ್ತಿತರರು ಹಾಜರಿದ್ದರು.

Translate »