ಮುಖ್ಯಮಂತ್ರಿ ಮಾಡೋರು ರಾಜ್ಯದ ಆರೂವರೆ ಕೋಟಿ ಜನರು: ಕುಮಾರಸ್ವಾಮಿ
ಮೈಸೂರು

ಮುಖ್ಯಮಂತ್ರಿ ಮಾಡೋರು ರಾಜ್ಯದ ಆರೂವರೆ ಕೋಟಿ ಜನರು: ಕುಮಾರಸ್ವಾಮಿ

April 24, 2018

ಮೈಸೂರು: ಮುಖ್ಯ ಮಂತ್ರಿ ಮಾಡುವವರು ಈ ರಾಜ್ಯದ ಆರೂವರೆ ಕೋಟಿ ಜನರು. ನಾನೇ ಸಿಎಂ ಎಂದು ಸ್ವಯಂ ಘೋಷಿಸಿಕೊಳ್ಳುವಷ್ಟು ದೊಡ್ಡವನಲ್ಲ ನಾನು ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡು ತ್ತಿದ್ದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೋದಲ್ಲೆಲ್ಲಾ ಹೇಳುತ್ತಿದ್ದಾರೆ. ಮತ್ತೊಂದೆಡೆ ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರು ಮುಂದಿನ 24 ದಿನದೊಳಗೆ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸು ತ್ತೇನೆಂದು ಹೇಳಿದ್ದಾರೆ. ಈ ಇಬ್ಬರೂ ನಾಯಕರು ತಾವೇ ಸಿಎಂ ಎಂದು ಸ್ವತಃ ಘೋಷಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ನಾನೊಬ್ಬ ಸಾಮಾನ್ಯ ಮನುಷ್ಯ. ನನ್ನ 20 ತಿಂಗಳ ಆಡಳಿತ, ವರ್ತನೆ, ನಡವಳಿಕೆಗಳನ್ನು ಜನ ಗಮನಿಸಿದ್ದಾರೆ. ಈ ರಾಜ್ಯದ ಜನರು ಮುಂದಿನ ಮುಖ್ಯ ಮಂತ್ರಿ ಯಾರು? ಎಂಬುದನ್ನು ತೀರ್ಮಾ ನಿಸುತ್ತಾರೆ. ನಾನು ಚುನಾವಣಾ ಪ್ರಚಾರಕ್ಕೆ ಹೋದಲ್ಲೆಲ್ಲಾ ನೀವೇ ಮುಖ್ಯಮಂತ್ರಿಯಾಗಿ ಎಂದು ಜನರು ಒತ್ತಾಯಿಸುತ್ತಿದ್ದಾರೆ. ಅವರ ಆಶೀರ್ವಾದದಿಂದ ನಾನು ಮುಖ್ಯ ಮಂತ್ರಿಯಾಗಬಹುದೇ ಹೊರತು, ನಾನೇ ಮುಖ್ಯಮಂತ್ರಿ ಎಂದು ಎಲ್ಲಿಯೂ ಹೇಳಿ ಕೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

113 ಸ್ಥಾನ ನಮ್ಮ ಗುರಿ: 113 ಸ್ಥಾನ ಗೆಲ್ಲ ಬೇಕೆಂಬುದು ನಮ್ಮ ಗುರಿ. ಅದಕ್ಕಾಗಿಯೇ ನಾವು ಎರಡು ತಿಂಗಳ ಮುಂಚೆಯೇ ಬಹು ತೇಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ದ್ದೇವೆ. ಅವರು ಈಗಾಗಲೇ ಪ್ರಚಾರ ದಲ್ಲಿ ದ್ದಾರೆ. ಉಳಿದ ಅಭ್ಯರ್ಥಿಗಳಿಗೂ ಶೀಘ್ರ ‘ಬಿ’ ಫಾರಂ ಕೊಡುತ್ತೇವೆ.

ಈಗಾಗಲೇ ನಾನು ರಾಜ್ಯಾದ್ಯಂತ ಪ್ರಚಾರ ಮಾಡಿದ್ದೇನೆ. ಜೆಡಿಎಸ್‍ಗೆ ಅಪಾರ ಜನ ಬೆಂಬಲ ದೊರೆಯುತ್ತಿದೆಯಾದ್ದರಿಂದ 113 ಸ್ಥಾನ ಪಡೆದು ಯಾರ ಹಂಗೂ ಇಲ್ಲದೆ ಸರ್ಕಾರ ರಚಿಸುತ್ತೇವೆ ಎಂದು ತಿಳಿಸಿದರು.

3ನೇ ಸ್ಥಾನಕ್ಕೆ ಕಾಂಗ್ರೆಸ್: 130 ಸ್ಥಾನ ಗಳಿಸುತ್ತೇವೆಂದು ಹೇಳುತ್ತಿರುವ ಕಾಂಗ್ರೆಸ್ ಈ ಬಾರಿ 3ನೇ ಸ್ಥಾನಕ್ಕೆ ದೂಡಲ್ಪಡುತ್ತದೆ. ಈ ಹಿಂದೆ 1994ರ ಫಲಿತಾಂಶ ಮರುಕಳಿಸಲಿದೆ. ಇನ್ನು ಬಿಜೆಪಿ ನಮಗೆ ಸ್ಪರ್ಧಿಯೇ ಅಲ್ಲ. ಆದರೆ ಕಾಂಗ್ರೆಸ್-ಬಿಜೆಪಿ ಇಬ್ಬರೂ ನಮ್ಮ ಶತ್ರುಗಳು. ಯಾರೊಂದಿಗೂ ನಾವು ಹೊಂದಾಣ ಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ನುಡಿದರು.
ಕನಸಿನಲ್ಲೂ 25 ಸ್ಥಾನ: ಕಾಂಗ್ರೆಸ್ ಕೇವಲ 25 ಸ್ಥಾನ ಗಳಿಸುತ್ತದೆಂದು ರಾತ್ರಿ ವೇಳೆ ಬಿದ್ದ ಕನಸ್ಸನ್ನು ಸಿದ್ದರಾಮಯ್ಯ ಹಗಲಲ್ಲಿ ಜೆಡಿಎಸ್ 25 ಎಂದು ಕನವರಿಸುತ್ತಿದ್ದಾರೆ. ಕಾಂಗ್ರೆಸ್ಸಿಗರಿಗೆ ಜೆಡಿಎಸ್ ಪ್ರಬಲವಾಗುತ್ತಿರುವುದರಿಂದ ಭಯ ಉಂಟಾಗಿದೆ ಎಂದು ಕುಮಾರಸ್ವಾಮಿ ಛೇಡಿಸಿದರು.

ಎರಡರಲ್ಲೂ ಸಿದ್ದು ಸೋಲು: ಮೈಸೂರಿನ ಚಾಮುಂಡೇಶ್ವರಿ ಮಾತ್ರವಲ್ಲ ಬಾಗಲಕೋಟೆಯ ಬಾದಾಮಿ ಕ್ಷೇತ್ರದಲ್ಲೂ ಸಿಎಂ ಸಿದ್ದರಾಮಯ್ಯ ಸೋಲುತ್ತಾರೆ ಎಂದು ಹೆಚ್‍ಡಿಕೆ ಪುನರುಚ್ಛರಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಪ್ರಬಲವಾಗಿದ್ದು, ಜನ ಬೆಂಬಲವಿರುವುದರಿಂದ ಅಲ್ಲಿ ಸಿದ್ದು ಸೋಲು ಖಚಿತ ಎಂದು ಅವರು ಭವಿಷ್ಯ ನುಡಿದರು. ಈ ಹಿಂದಿನ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್, ವಿ. ಶ್ರೀನಿವಾಸಪ್ರಸಾದ್, ಹೆಚ್. ವಿಶ್ವನಾಥ್ ಇದ್ದರು. ಆದರೆ, ಈ ಬಾರಿ ಅವರ್ಯಾರೂ ಇಲ್ಲ. ಅಲ್ಲದೇ ಕಾಂಗ್ರೆಸ್ ವಿರೋಧಿ ಅಲೆಯೂ ಇರುವು ದರಿಂದ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಸೋಲು ಕಟ್ಟಿಟ್ಟ ಬುತ್ತಿ. ಆದ್ದರಿಂದಲೇ ಅವರು ಬಾದಾಮಿಯಲ್ಲೂ ಸ್ಪರ್ಧಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಸಿಎಂ ಏಕಾಂಗಿ: ಒರಿಜಿನಲ್ ಕಾಂಗ್ರೆಸ್ಸಿಗರು ಸಿದ್ದು ಜೊತೆಯಲ್ಲಿಲ್ಲ. ವಲಸಿಗರನ್ನು ಹತ್ತಿರ ಇಟ್ಟುಕೊಂಡಿರುವುದರಿಂದ ಮೂಲ ಕಾಂಗ್ರೆಸ್ಸಿಗರು ದೂರ ಉಳಿದು ಸಿದ್ದರಾಮಯ್ಯಗೆ ಪಾಠ ಕಲಿಸಲು ತಂತ್ರ ರೂಪಿಸುತ್ತಿರುವುದರಿಂದ ಸಿಎಂ ಈಗ ಏಕಾಂಗಿಯಾಗಿದ್ದಾರೆ ಎಂದು ಹೆಚ್‍ಡಿಕೆ ವಾಗ್ದಾಳಿ ನಡೆಸಿದರು. ಸುಮಾರು ಒಂದು ಗಂಟೆ ಕಾಲ ನಡೆದ ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಉಪಾಧ್ಯಕ್ಷ ಎಂ. ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶ್‍ಬಾಬು, ಕಾರ್ಯದರ್ಶಿ ಬಿ. ರಾಘವೇಂದ್ರ ಹಾಗೂ ಖಜಾಂಚಿ ದಕ್ಷಿಣಾಮೂರ್ತಿ (ಬಾಬು) ಅವರು ಪಾಲ್ಗೊಂಡಿದ್ದರು. ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ ಹಾಗೂ ಎನ್‍ಆರ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಬ್ದುಲ್ಲಾ ಸಹ ಉಪಸ್ಥಿತರಿದ್ದರು.

7 ಮಂದಿ ಬ್ಯಾಡ್ ಓಲ್ಡ್ ಫ್ರೆಂಡ್ಸ್
ಮೈಸೂರು, ಏ. 23(ಆರ್‍ಕೆ)-ನಮ್ಮ ಪಕ್ಷ ಬಿಟ್ಟು ಹೋದ 7 ಮಂದಿ ಮಹಾನುಭಾವರು ಗುಡ್ ಓಲ್ಡ್ ಫ್ರೆಂಡ್ಸ್ ಅಲ್ಲ, ಬ್ಯಾಡ್ ಓಲ್ಡ್ ಫ್ರೆಂಡ್ಸ್ ಎಂದು ಜಮೀರ್, ಚಲುವರಾಯ ಸ್ವಾಮಿ ಮತ್ತು ತಂಡದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಇಂದಿಲ್ಲಿ ವ್ಯಂಗ್ಯವಾಡಿದ್ದಾರೆ. 7 ಮಂದಿ ಅವರ್ ಬ್ಯಾಡ್ ಓಲ್ಡ್ ಫ್ರೆಂಡ್ಸ್. ಅವರಿಂದ ಕೆಟ್ಟ ಅನುಭವಗಳಾಗಿವೆ. ಅಷ್ಟೂ ಜನರು ನಮ್ಮ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ಸೋತು ಮನೆ ಸೇರುತ್ತಾರೆ ಎಂದರು. ಖಾಕಿ ನಿಕ್ಕರ್ ಎಂದೆಲ್ಲಾ ಜಮೀರ್ ಲೇವಡಿ ಮಾಡಿದ್ದಾರಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಅವರು ಅನಾಗರಿಕರು, ಅವರಷ್ಟು ಕೀಳು ಮಟ್ಟದಲ್ಲಿ ಮಾತನಾಡಿ ನನ್ನ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳಲ್ಲ. ಅವರ ಸಹವಾಸ ಮಾಡಿದುದು ನಮ್ಮ ತಪ್ಪು ಎಂದರು.

Translate »