ಪ್ರೆಸಿಡೆಂಟ್ ಹೋಟೆಲ್‍ನಲ್ಲಿ ಬಿಜೆಪಿ ಕಾರ್ಯಕರ್ತರ ದಾಂಧಲೆ; ಪೊಲೀಸರಿಂದ ಲಾಠಿ ಪ್ರಹಾರ, ಹೆದ್ದಾರಿ ಸಂಚಾರ ಬಂದ್
ಮೈಸೂರು

ಪ್ರೆಸಿಡೆಂಟ್ ಹೋಟೆಲ್‍ನಲ್ಲಿ ಬಿಜೆಪಿ ಕಾರ್ಯಕರ್ತರ ದಾಂಧಲೆ; ಪೊಲೀಸರಿಂದ ಲಾಠಿ ಪ್ರಹಾರ, ಹೆದ್ದಾರಿ ಸಂಚಾರ ಬಂದ್

April 24, 2018

ಮೈಸೂರು: ವರುಣಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಉಳಿದುಕೊಂಡಿದ್ದ ಮೈಸೂರಿನ ಪ್ರೆಸಿಡೆಂಟ್ ಹೋಟೆಲ್, ಕಾರ್ಯಕರ್ತರ ಆಕ್ರೋಶದಿಂದ ರಣಾಂಗಣ ವಾಗಿ ಮಾರ್ಪಟ್ಟಿತ್ತು. ನಂಜನಗೂಡಿನಲ್ಲಿ ನಡೆದ ಬಿಜೆಪಿ ಸಮಾವೇಶದ ಬಳಿಕ ಯಡಿ ಯೂರಪ್ಪನವರು ಮೈಸೂರಿಗೆ ಬಂದು ಈ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಈ ವಿಷಯ ತಿಳಿದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಹೋಟೆಲ್ ಮುಂಭಾಗ ಜಮಾಯಿಸಿದರು. ಸಮಯ ಕಳೆದಂತೆ ಕಾರ್ಯಕರ್ತರ ಸಂಖ್ಯೆ ಹೆಚ್ಚಾ ಯಿತು. ಹೊಟೆಲ್‍ನ ಒಳ ಪ್ರಾಂಗಣದಲ್ಲಿದ್ದ ಯಡಿಯೂರಪ್ಪನವರ ಬಳಿ ತೆರಳಿದ ಕಾರ್ಯಕರ್ತರು, ವಿಜಯೇಂದ್ರ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾ ಯಿಸಿದರು. ಪರಿಸ್ಥಿತಿಯನ್ನು ಅರಿತ ಯಡಿ ಯೂರಪ್ಪನವರು, ಹೋಟೆಲ್‍ನ ಪ್ರವೇಶ ದ್ವಾರದ ಬಳಿ ಬಂದು
ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಈ ವೇಳೆ ಸಮಾಧಾನಪಡಿಸಲು ಯತ್ನಿಸಿದ ಯಡಿಯೂರಪ್ಪನವರ ಮತ್ತೋರ್ವ ಪುತ್ರ, ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ ಅವರ ಮಾತಿಗೂ ಬಗ್ಗಲಿಲ್ಲ.

ವಿಜಯೇಂದ್ರ ಹೊರತು ಯಾವ ಅಭ್ಯರ್ಥಿಗೂ ಟಿಕೆಟ್ ನೀಡುವಂತಿಲ್ಲ ಎಂದು ಪಟ್ಟು ಹಿಡಿದು ಘೋಷಣೆ ಕೂಗಿದರು. ಮತ್ತಷ್ಟು ಆಕ್ರೋಶ ಹೊರಹಾಕಿದರು. ಇದರಿಂದ ತಬ್ಬಿಬ್ಬಾದ ಯಡಿಯೂರಪ್ಪ ಹಾಗೂ ಶಾಸಕ ರಾಘವೇಂದ್ರ ಹೋಟೆಲ್ ಒಳಗೆ ಹೋದರು. ಆದರೂ ಬೆಂಬಿಡದ ಕಾರ್ಯಕರ್ತರು ಅವರನ್ನು ಹಿಂಬಾಲಿಸಿ, ಘೇರಾವ್ ಹಾಕಿದರು. ವಿಜಯೇಂದ್ರ ಅವರಿಗೇ ಟಿಕೆಟ್ ನೀಡಬೇಕು, ಇಲ್ಲವಾದರೆ ಯಾವ ಅಭ್ಯರ್ಥಿಯನ್ನೂ ಘೋಷಿಸುವಂತಿಲ್ಲ. ಯಾರೇ ಆದರೂ ಅವರಿಗೆ ನಾಮಪತ್ರ ಸಲ್ಲಿಸುವುದಕ್ಕೂ ಅವಕಾಶ ನೀಡುವುದಿಲ್ಲ. ಮೈಸೂರು ಭಾಗದಲ್ಲಿ ಬಿಜೆಪಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಹೇಗೋ ಯಡಿಯೂರಪ್ಪನವರನ್ನು ಹೋಟೆಲ್‍ನ ನಾಲ್ಕನೇ ಮಹಡಿಯ ಕೊಠಡಿಯೊಂದಕ್ಕೆ ಕಳುಹಿಸಿಕೊಡಲಾಯಿತು. ಬಳಿಕ ಬಿ.ವೈ.ರಾಘವೇಂದ್ರ ಅವರನ್ನು ಸುತ್ತುವರಿದ ಕಾರ್ಯಕರ್ತರು, ತಮ್ಮ ಅಳಲು ತೋಡಿಕೊಂಡರು. ಆ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ, ವರುಣಾ ಕ್ಷೇತ್ರದ ಜನ ನಮ್ಮ ಮೇಲಿಟ್ಟಿರುವ ಪ್ರೀತಿ, ವಿಶ್ವಾಸವನ್ನು ಮರೆಯುವಂತಿಲ್ಲ. ರಾಷ್ಟ್ರದ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಯಾವ ರಾಜ್ಯದಲ್ಲೂ ಚುನಾವಣೆ ಮುಂಚಿತವಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಯಡಿಯೂರಪ್ಪನವರನ್ನು ಸಿಎಂ ಅಭ್ಯರ್ಥಿಯೆಂದು ಘೋಷಿಸಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದೊಂದಿಗೆ ಚುನಾವಣಾ ನೇತೃತ್ವವನ್ನೂ ವಹಿಸಿಕೊಟ್ಟಿದ್ದಾರೆ. ಹೀಗಿರುವಾಗ ಪಕ್ಷದ ಹಿತದೃಷ್ಟಿಯಿಂದ ಸಮಾಧಾನವಾಗಿರಬೇಕು. ನಾವೆಲ್ಲಾ ಕೂಡಿಸುವ ಸೂಜಿ-ದಾರವಾಗಬೇಕೇ ಹೊರತು, ವಿಭಜಿಸುವ ಕತ್ತರಿಯಾಗಬಾರದು ಎಂದು ಹೇಳುವ ಮೂಲಕ ಸಮಾಧಾನಪಡಿಸಲು ಹರಸಾಹಸಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ರಾಘವೇಂದ್ರ ಅವರೂ ತಮ್ಮ ತಂದೆ ಯಡಿಯೂರಪ್ಪನವರಿದ್ದ ಕೊಠಡಿಗೆ ತೆರಳಿದರು.
ಬಿಜೆಪಿ ವಿರುದ್ಧವೇ ಆಕ್ರೋಶ: ವಿಜಯೇಂದ್ರ ಸ್ಪರ್ಧೆಗೆ ಗ್ರೀನ್‍ಸಿಗ್ನಲ್ ಸಿಗಬಹುದೆಂದು ಅತೀವ ನಿರೀಕ್ಷೆಯೊಂದಿಗೆ ಹೋಟೆಲ್ ಮುಂಭಾಗ ಹಾಗೂ ಆವರಣದಲ್ಲಿ ಕುಳಿತು, ಘೋಷಣೆಗಳನ್ನು ಕೂಗುತ್ತಾ, ಆಕ್ರೋಶ ವ್ಯಕ್ತಪಡಿಸುತ್ತಿದ್ದ ಕಾರ್ಯಕರ್ತರು, ಸಹನೆ ಕಳೆದುಕೊಂಡು ಏಕಾಏಕಿ ಹೋಟೆಲ್ ಒಳಗೆ ನುಗ್ಗಿ, ನಾಲ್ಕನೇ ಮಹಡಿಯಲ್ಲಿ ಬಿಎಸ್‍ವೈ ಇದ್ದ ಕೊಠಡಿ ಮುಂದೆ ಜಮಾಯಿಸಿದರು. ಬಾಗಿಲು ಬಡಿದು ಸಿಟ್ಟು ಹೊರಹಾಕಿದರು. ವಿಜಯೇಂದ್ರನಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ನೀವೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಕೂಗಾಡಿದರು. ವಿಜಯೇಂದ್ರ ಅವರ ಗೆಲುವಿಗಾಗಿ ಬೇರೆ ಪಕ್ಷಗಳನ್ನು ಬಿಟ್ಟು ಬಿಜೆಪಿಗೆ ಬಂದಿದ್ದೇವೆ. ಗೆಲ್ಲುತ್ತೇವೆಂಬ ವಿಶ್ವಾಸದಿಂದ ದುಡಿದಿದ್ದೇವೆ. ಕಡೇ ಗಳಿಗೆಯಲ್ಲಿ ಈ ರೀತಿ ಮಾಡಿದರೆ, ಕ್ಷೇತ್ರದಲ್ಲಿ ನಾವು ಓಡಾಡುವುದಾದರೂ ಹೇಗೆ?. ನಮ್ಮ ಅಸ್ತಿತ್ವ ಉಳಿಯುವುದಾದರೂ ಹೇಗೆ? ಎಂದು ಕಿಡಿಕಾರಿದರು. ನಮಗೆ ಪಕ್ಷವೇ ಬೇಕಿಲ್ಲ. ಟಿಕೆಟ್ ನೀಡದಿದ್ದರೆ ವಿಜಯೇಂದ್ರ ಅವರು ಪಕ್ಷೇತರವಾಗಿ ಸ್ಪರ್ಧಿಸಲಿ. ಆದರೆ ಯಾವ ಕಾರಣಕ್ಕೂ ಇವರನ್ನು ಹೊರತು ಬೇರ್ಯಾರು ಅಭ್ಯರ್ಥಿಯಾಗುವಂತಿಲ್ಲ ಎಂದು ಎಚ್ಚರಿಸಿದರು.

ರಸ್ತೆ ತಡೆದು ಪ್ರತಿಭಟನೆ: ಸಹನೆ ಮೀರಿದ ಕಾರ್ಯಕರ್ತರು ಹೋಟೆಲ್ ಮುಂಭಾಗ ರಸ್ತೆ ತಡೆದು ಪ್ರತಿಭಟಿಸಿದರು. ವಿಜಯೇಂದ್ರ ಅವರಿಗೆ ಟಿಕೆಟ್ ಸಿಗದಿರುವುದಕ್ಕೆ ಕೇಂದ್ರ ಸಚಿವ ಅನಂತಕುಮಾರ್, ಬಿಜೆಪಿ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಸಂತೋಷ್‍ಜೀ ಅವರೇ ಕಾರಣ ಎಂದು ಆರೋಪಿಸಿ, ಅವರ ವಿರುದ್ಧ ಘೋಷಣೆ ಕೂಗಿದರು. ಪಕ್ಷದ ಅನೇಕ ನಾಯಕರ ಭಾವಚಿತ್ರಗಳಿಗೆ ಪಾದರಕ್ಷೆಗಳಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ರಸ್ತೆಯಲ್ಲೇ ಉರುಳು ಸೇವೆ ಮಾಡಿದರು. ಅಲ್ಲದೆ ಬಿಜೆಪಿ ಬಾವುಟದ ಪ್ರತೀಕದಂತಿದ್ದ ಕೇಸರಿ ಕರವಸ್ತ್ರಗಳಿಗೆ ಬೆಂಕಿಹಚ್ಚಿ ಸುಟ್ಟರು. ಪಕ್ಷದ ನಾಯಕರ ಅಣಕು ಶವಯಾತ್ರೆಯನ್ನೂ ಮಾಡಿದರು. ಇದರಿಂದ ಬೆಂಗಳೂರು-ಊಟಿ ಹೆದ್ದಾರಿ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು.

ರಾಮದಾಸ್‍ಗೂ ಘೆರಾವ್: ಯಡಿಯೂರಪ್ಪನವರನ್ನು ಭೇಟಿ ಮಾಡಲು ಬಂದ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಎಸ್.ಎ.ರಾಮದಾಸ್ ಅವರಿಗೂ ಕಾರ್ಯಕರ್ತರು ಘೇರಾವ್ ಹಾಕಿದರು. ಅವರನ್ನು ಸುತ್ತುವರಿದು ಆಕ್ರೋಶ ವ್ಯಕ್ತಡಿಸಿದರು.

ಲಾಠಿ ಪ್ರಹಾರ: ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತಕ್ಕೆ ತಲುಪಿದಾಗ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಡಿಸಿಪಿ ವಿಷ್ಣುವರ್ಧನ್, ಇನ್ನಿತರ ಅಧಿಕಾರಿಗಳು ಆಗಮಿಸಿ, ಯಡಿಯೂರಪ್ಪನವರಿದ್ದ ಕೊಠಡಿ ಮುಂದೆ ಜಮಾಯಿಸಿದ್ದವರು ಸೇರಿದಂತೆ ಹೋಟೆಲ್‍ನಲ್ಲಿದ್ದ ಎಲ್ಲಾ ಕಾರ್ಯಕರ್ತರನ್ನು ಹೊರಗೆ ಕಳುಹಿಸಿದರು. ಈ ವೇಳೆ ಕೆಲವರು ಹೋಟೆಲ್‍ನಲ್ಲಿದ್ದ ಕೆಲ ವಸ್ತುಗಳನ್ನು ಒಡೆದು ಹಾಕಿದರು. ಎಲ್ಲರನ್ನೂ ಹೊರಗೆ ಕರೆತಂದಾಗ ಕಾರ್ಯಕರ್ತರು ಪ್ರತಿರೋಧಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಅಟ್ಟಾಡಿಸಿ ಹೋಟೆಲ್‍ನಿಂದ ದೂರ ಕಳುಹಿಸಿ, ಬ್ಯಾರಿಕೇಡ್ ಹಾಕಿದರು. ಯಾರೊಬ್ಬರೂ ಸುಳಿಯದಂತೆ ಎಚ್ಚರಿಕೆ ವಹಿಸಿದರು. ಪರಿಸ್ಥಿತಿ ತಿಳಿಗೊಂಡ ನಂತರ ಪ್ರತಾಪ್‍ಸಿಂಹ, ರಾಮದಾಸ್ ಇನ್ನಿತರ ಮುಖಂಡರು ಸುದ್ದಿಗೋಷ್ಠಿ ನಡೆಸಿ, ವಿಜಯೇಂದ್ರ ಅವರಿಗೇ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು

Translate »