ಸಭೆಯಲ್ಲಿ ಶಾಸಕರಿಂದ ಅಧಿಕಾರಿಗೆ ತರಾಟೆ
ಮೈಸೂರು

ಸಭೆಯಲ್ಲಿ ಶಾಸಕರಿಂದ ಅಧಿಕಾರಿಗೆ ತರಾಟೆ

July 28, 2018

ನಂಜನಗೂಡು: ನಗರದ ಗೋದಾಮಿನಿಂದ ನಾಪತ್ತೆಯಾಗಿರುವ ಸುಮಾರು 40 ಲಕ್ಷ ರೂ. ಮೌಲ್ಯದ ಪಡಿತರ ವಸ್ತುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ಒದಗಿಸದ ಆಹಾರ ಇಲಾಖೆ ಅಧಿಕಾರಿಯನ್ನು ಶಾಸಕ ಬಿ.ಹರ್ಷ ವರ್ಧನ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ನಂಜನಗೂಡು ಮತ್ತು ವರುಣಾ ವಿಧಾನಸಭಾ ಕ್ಷೇತ್ರಗಳ ತ್ರೈಮಾಸಿಕ ಕೆ.ಡಿ.ಪಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ 1165 ಕ್ವಿಂಟಾಲ್ ಅಕ್ಕಿ, 198 ಕ್ವಿಂಟಾಲ್ ಗೋಧಿ, 38 ಕ್ವಿಂಟಾಲ್ ಬೇಳೆ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಪ್ರಭಾರ ಆಹಾರ ಅಧಿ ಕಾರಿ ರವಿ ಅವರ ಮೇಲೆ ಹರಿಹಾಯ್ದರು.

ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಗೋದಾಮಿನ ವ್ಯವಸ್ಥಾಪಕ ಮೈಲಾರಯ್ಯ ತಲೆ ತಪ್ಪಿಸಿ ಕೊಂಡಿದ್ದಾರೆ. ಪಡಿತರ ವಸ್ತುಗಳು ಜಿಲ್ಲಾ ಗೋದಾಮಿನಿಂದ ಬರುವಾಗ ಕಡಿಮೆ ಯಾಗಿದೆಯೇ ಅಥವಾ ಪ್ರಕರಣದಲ್ಲಿ ತಾಲೂಕು ಇಲಾಖೆ ಅಧಿಕಾರಿಗಳು ಶಾಮೀಲಾಗಿ ದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಶಿಕ್ಷಣ ಇಲಾಖೆ ಯಲ್ಲಿ ಅಡುಗೆ ಸಿಬ್ಬಂದಿಗೆ ವಿತರಿಸುವ ಎಫ್ರಾನ್‍ನ್ನು 350 ರೂ.ಗಳಿಗೆ ಖರೀದಿಸಿ 2200 ರೂ. ಗಳವರೆಗೆ ಬಿಲ್ ಮಾಡಿರುವ ಬಗ್ಗೆ ಮಾಧ್ಯಮ ಗಳಲ್ಲಿ ವರದಿಯಾಗಿದ್ದು, ಈ ಕುರಿತು ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ ಅಕ್ರಮ ಸಾಬೀತಾದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿ ಗಳಿಗೆ ಪತ್ರ ಬರೆಯಲಾಗು ವುದು ಎಂದರು.

ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಪ್ರತಿ ತಿಂಗಳು ಆಹಾರ ಇಲಾಖೆಗೆ ಸರಬರಾಜಾಗುವ ಅಕ್ಕಿ, ಗೋಧಿ, ಬೇಳೆ ಕಾಳುಗಳ ದಾಸ್ತಾನನ್ನು ಪ್ರತಿ ತಿಂಗಳು ಪರಿ ಶೀಲನೆ ನಡೆಸಬೇಕು. ವರುಣಾ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ವರ್ಷದಿಂದ ಪಡಿತರ ಚೀಟಿಗಳ ವಿತರಣೆಯಾಗದೆ ತೊಂದರೆಯಾಗಿದ್ದು, ಪಡಿತರ ಚೀಟಿ ವಿತರಣೆಗೆ ಶೀಘ್ರ ಕ್ರಮವಹಿಸಬೇಕು. ಸರ್ಕಾರದಿಂದ ಸಬ್ಸಿಡಿ ದರದಲ್ಲಿ ವಿತರಿಸಲಾಗುವ ಬಿತ್ತನೆ ಬೀಜಗಳ ವಿತರಣೆಗೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್ ಮಾತನಾಡಿ ತಾಲೂಕಿನಲ್ಲಿ 23 ಪ್ರೌಢಶಾಲಾ ಶಿಕ್ಷಕರ ಕೊರತೆ ಇದೆ ಆರ್.ಟಿ.ಎ ಕಾಯ್ದೆಯಡಿ ನೀಡುವ ಉಚಿತ ಶಿಕ್ಷಣ ಯೋಜನೆಗೆ ವಿದ್ಯಾರ್ಥಿಗಳು ದಾಖಲಾಗದೇ 162 ಸ್ಥಾನ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಆಸ್ಪತ್ರೆ ಪ್ರಭಾರ ವೈದ್ಯಾಧಿ ಕಾರಿ ಸುರೇಶ್ ಮಾತನಾಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ 4 ವೈದ್ಯರ ಹುದ್ದೆ ಖಾಲಿ ಇದ್ದು, ಕಳೆದ 3 ವರ್ಷಗಳಿಂದ ಫಿಜಿಶಿಯನ್ ಹಾಜ ರಾಗಿಲ್ಲ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮಾತ್ರ ಇದ್ದು ರಾತ್ರಿ ಪಾಳಿಯಲ್ಲಿ ಸೇವೆ ಒದಗಿಸಲು ಆಗುತ್ತಿಲ್ಲ. ತಂತ್ರಜ್ಞರ ಕೊರತೆಯಿಂದಾಗಿ ರೇಡಿಯಾಲ ಜಿಸ್ಟ್, ಅಲ್ಟ್ರಾಸೌಂಡ್ ಸೇವೆಯನ್ನು ಒದಗಿ ಸಲಾಗುತ್ತಿಲ್ಲ. ದಂತ ವೈದ್ಯರು ಸೇರಿದಂತೆ 11 ವೈದ್ಯರ ಕೊರತೆ ಇದೆ ಎಂದರು.

ಆರೋಗ್ಯಾಧಿಕಾರಿ ಡಾ.ಕಲಾವತಿ ಮಾತನಾಡಿ ತಾಲೂಕಿನಲ್ಲಿ 31 ಕಿರಿಯ ಆರೋಗ್ಯ ಸಹಾಯಕಿಯರ ಕೊರತೆ ಇದೆ. ಮಲ್ಲೂಪುರ, ತಾಯೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಇದೆ. ದೇವ ನೂರಿನಲ್ಲಿ ಸಣ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದೊಡ್ಡ ಕಟ್ಟಡ ಬೇಕಾಗಿದೆ ಎಂದರು.

ಸಭೆಯಲ್ಲಿ ಜಿಪಂ ಸದಸ್ಯರಾದ ಎಚ್.ಎಸ್. ದಯಾನಂದ ಮೂರ್ತಿ, ಸದಾನಂದ, ಗುರು ಸ್ವಾಮಿ, ಮಂಗಳಾ ಸೋಮಶೇಖರ್, ಪುಷ್ಪ ನಾಗೇಶ್ ರಾಜ್, ಮಧು ಸುಬ್ಬಣ್ಣ, ಲತಾ ಸಿದ್ದಶೆಟ್ಟಿ, ಲೀಲಾವತಿ, ತಾಪಂ ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ಉಪಾಧ್ಯಕ್ಷ ಗೋವಿಂದ ರಾಜು, ನಗರಸಭಾಧ್ಯಕ್ಷೆ ಪುಷ್ಪ ನಾಗೇಶ್ ರಾಜ್, ಉಪಾಧ್ಯಕ್ಷ ಪ್ರದೀಪ್, ತಾಪಂ ಸದಸ್ಯರಾದ ಬಿ.ಎಸ್.ರಾಮು, ಶಿವಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್ ತಾಪಂ ಪ್ರಭಾರ ಇಓ ಶ್ರೀನಿವಾಸ್, ತಹಸೀಲ್ದಾರ್ ದಯಾನಂದ್, ಸಿಡಿಪಿಓ ಗೀತಾಲಕ್ಷ್ಮಿ, ಪಿ.ಡಬ್ಲ್ಯೂಡಿಎಇ ಮದನ್, ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ಮಹದೇವ ಸ್ವಾಮಿ, ಹಿಂದುಳಿದ ವರ್ಗಗಳ ವಸತಿ ನಿಲಯದ ವಿಸ್ತರಣಾ ಅಧಿಕಾರಿ ಸ್ವಾಮಿ, ಪಿಎಸ್‍ಐ ರವಿ ಶಂಕರ್, ಎಇಇ ನಾಗರಾಜು, ಸಮಾಜ ಕಲ್ಯಾಣಾಧಿಕಾರಿ ಜರ್ನಾಧನ, ಸೇರಿದಂತೆ ಹಲವರು ಹಾಜರಿದ್ದರು.

Translate »