ಹಡಪದ ಅಪ್ಪಣ್ಣ ಬೆಡಗಿನ ಬಂಡಾಯ ವಚನಕಾರ
ಮೈಸೂರು

ಹಡಪದ ಅಪ್ಪಣ್ಣ ಬೆಡಗಿನ ಬಂಡಾಯ ವಚನಕಾರ

July 28, 2018

ಹುಣಸೂರು: ಬಸವಣ್ಣ ನವರ ಕಾಲದಲ್ಲಿ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಹಡಪದ ಅಪ್ಪಣ್ಣ ಬೆಡಗಿನ ಬಂಡಾಯ ವಚನಕಾರರಾಗಿದ್ದು, ಇವರ ವಚನದಲ್ಲಿ ತೀರ ಸರಳತೆ ಮತ್ತು ಗಂಭೀರತೆ ಎದ್ದು ಕಾಣುತದೆ ಎಂದು ಸಾಹಿತಿ ಮಾಧು ಪ್ರಸಾದ್ ತಿಳಿಸಿದರು.

ನಗರದ ಡಾ.ಬಿ.ಅರ್.ಅಂಬೇಡ್ಕರ್ ಭವನದಲ್ಲಿ ಸವಿತಾ ಸಮಾಜ ಏರ್ಪಡಿಸಿದ್ದ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರ ರಾಗಿ ಮಾತನಾಡಿದ ಅವರು, ವಚನ ಸಾಹಿತ್ಯ ದಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಚನಗಳಿದ್ದು, ಅದರಲ್ಲಿ ಅಪ್ಪಣ್ಣ ನವರ 200ಕ್ಕೂ ಹೆಚ್ಚು ವಚನಗಳು ಸೇರಿವೆ ಎಂದರು.

ಬೆಡಗಿನ ವಚನಗಳನ್ನು ನೀಡಿದವರಲ್ಲಿ ಅಲ್ಲಮಪ್ರಭು ಮೊದಲಿಗರು ನಂತರ ಅಪ್ಪಣ್ಣ ನವರು ಕೆಳ ಸಮುದಾಯದವರ ಮಾಹಿತಿ ಗಳು ಮೇಲೆ ಬರಲು ಸಾಧ್ಯವಾಗದೇ ಇದ್ದಂತಹ ಸಮಯದಲ್ಲಿ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅವರು ವಚನಗಳ ಮೂಲಕ ಸರಳ ಸಜ್ಜನಿಕೆಯ ಮತ್ತು ಬಂಡಾಯದ ಧ್ವನಿಯನ್ನು ವಚನಗಳ ಮೂಲಕ ವ್ಯಕ್ತಪಡಿಸಿದರು.

ಸಂಕವ್ವ ಸೂಳೆ ಎಂಬ ಕಾರಣಕ್ಕೆ ಅವರ ವಚನಗಳಿಗೆ ಅಶ್ಲೀಲ ಎಂಬ ಹಣೆಪಟ್ಟಿ ಕಟ್ಟಿದಾಗ ಶೀಲದ ಬಗ್ಗೆ ಧ್ವನಿ ಎತ್ತುವವರಿಗೆ ಬಂಡಾಯವಾಗಿ ನೆಲಕ್ಕೆ ಶೀಲ ಇದೆಯೇ, ಜಲಕ್ಕೆ ಶೀಲ ಇದೆಯೇ, ಗಾಳಿಗೆ ಶೀಲ ಇದೆಯೇ, ಬೆಳಕಿಗೆ ಶೀಲ ಇದೆಯೇ, ಹೊನ್ನಿಗೆ ಶೀಲ ಇದೆಯೇ, ಏಕೆ ಸಂಕವ್ವನ ವಚನಗಳಿಗೆ ಕೊಂಕು ಹೇಳುತ್ತಿರಿ ಎಂದು ಬಂಡಾಯ ಧ್ವನಿ ಎತ್ತಿದ ಅಪ್ಪಣ್ಣ ಅನುಭವ ಮಂಟಪದಲ್ಲಿ ಅಲ್ಲಮ ಪ್ರಭುರವರಿಂದ ಪ್ರಭಾವಿತರಾಗಿ ಬಂಡಾಯ ವಚನಗಳ ರಚನೆಯಲ್ಲಿ ತೊಡಗಿದರು ಎಂದರು.

ಸಮಾಜದಲ್ಲಿನ ಎಲ್ಲ ಶುಭ ಕಾರ್ಯಗಳಿಗೆ ಮಂಗಳ ವಾದ್ಯ ನುಡಿಸುವ ಸವಿತಾ ಸಮಾಜ ಅಪ್ಪಣ್ಣ ಜಯಂತಿ ಅಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಶಾಸಕ ಹೆಚ್. ವಿಶ್ವನಾಥ್ ಮಾತನಾಡಿ ಸವಿತಾ ಸಮಾಜವು ಈ ರೀತಿಯ ಅಚರಣೆ ಮತ್ತು ಸಮಾಜ ಮುಖಿ ಕಾರ್ಯಕ್ರಮಗಳಿಂದ ಮುಂದೆ ಬಂದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರು ತಿಸಿಕೊಳ್ಳಬೇಕು ಎಂದರು.

ಹಾಗೂ ಹಡಪದ ಅಪ್ಪಣ್ಣನವರ ಜೀವನ ಚರಿತ್ರೆ ಬಗ್ಗೆ ಸಾಹಿತಿ ಮಾಧು ಪ್ರಸಾದ್ ರವರಿಂದ ಪುಸ್ತಕ ಬರೆಸಿ ಸಮಾಜ ಮತ್ತು ಗ್ರಂಥಾಲಯಗಳಿಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.ಮಾದಳ್ಳಿ ಮಠದ ಸಾಂಭ ಸದಾಶಿವ ಸ್ವಾಮೀಜಿ ಹಾಗೂ ಗಾವಡಗೆರೆ ಗುರು ಲಿಂಗ ಜಂಗಮದೇವರ ಮಠದ ನಟರಾಜ ಸ್ವಾಮೀಜಿರವರು ಅಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಕುಮಾರ್, ಜಿ.ಪಂ ಸದಸ್ಯ ಎಂ.ಬಿ.ಸುರೇಂದ್ರ, ತಾ.ಪಂ ಅಧ್ಯಕ್ಷೆ ಪದ್ಮಮ್ಮ ಬಸವರಾಜು, ಸದಸ್ಯ ರಂಗ ಸ್ವಾಮಿ, ಭಾರತೀಯ ಗಿರಿಜನ ಅಭಿವೃದ್ಧಿ ಸಂಸ್ಥೆಯ ಎಂ.ಬಿ.ಪ್ರಭು, ನಗರ ಸಭಾ ಅಧ್ಯಕ್ಷ ಎಂ.ಶಿವಕುಮಾರ್, ಸದಸ್ಯ ಬಾಬು, ಎಸ್.ಜಯರಾಮು, ಅಣ್ಣಯ್ಯ ನಾಯಕ, ಸವಿತ ಸಮಾಜದ ಅಧ್ಯಕ್ಷ ಗೌರೀಶ್, ಕಾರ್ಯದರ್ಶಿ ರಮೇಶ್, ಖಜಾಂಚಿ ಜಲೇಂದ್ರ, ಮಾದಪ್ಪ, ಮಂಜುನಾಥ್, ಗಣೇಶ್, ಇನ್ನೂ ಅನೇಕರು ಉಪಸ್ಥಿತರಿದ್ದರು.

Translate »